ಶನಿವಾರ, ಜನವರಿ 25, 2020
19 °C
ಬೆಂಗಳೂರು ಉತ್ತರ ವಿ.ವಿ ಕುಲಪತಿ ಕೆಂಪರಾಜು ಅಭಿಪ್ರಾಯ

ಕುವೆಂಪು ವ್ಯಕ್ತಿತ್ವ ಮೇರು ಪರ್ವತ: ಪ್ರೊ.ಟಿ.ಡಿ.ಕೆಂಪರಾಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕುವೆಂಪು ಅವರ ವ್ಯಕ್ತಿತ್ವ ಮೇರು ಪರ್ವತ. ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲೂ ತೊಡಗಿಸಿಕೊಂಡಿದ್ದ ಅವರ ಸಾಹಿತ್ಯ ಕೃಷಿ ವಿಶಾಲವಾದದ್ದು’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಎಂದು ಅಭಿಪ್ರಾಯಪಟ್ಟರು.

ಇಲ್ಲಿನ ಬೆಂಗಳೂರು ವಿದ್ವಾವಿದ್ಯಾಲಯ ಸ್ನಾತಕೋತ್ತರ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕುವೆಂಪು ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ‘ಕುವೆಂಪು ಅವರ ತತ್ವ ಮತ್ತು ವಿಚಾರಧಾರೆ ಸರ್ವ ಕಾಲಕ್ಕೂ ಪ್ರಸ್ತುತ’ ಎಂದರು.

‘ಬುದ್ಧ, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಒಂದು ರೀತಿಯಲ್ಲಿ ಸಮಾಜ ಸುಧಾರಣೆಗೆ ಶ್ರಮಿಸಿದರೆ ಕುವೆಂಪು ತಮ್ಮ ಕೃತಿಗಳ ಮೂಲಕ ಸಮಾಜ ಸುಧಾರಣೆ ಮಾಡಲು ಶ್ರಮಿಸಿದರು. ಈ ಕಾರಣಕ್ಕಾಗಿಯೇ ಕುವೆಂಪು ಮಹಾನ್ ಮಾನವತಾವಾದಿ ಹಾಗೂ ವಿಶ್ವಮಾನವರಾದರು. ಇಂತಹ ಮಹನೀಯರನ್ನು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ. ಅವರ ಸಂದೇಶ ಯಾವುದೇ ಒಂದು ಜನಾಂಗಕ್ಕೆ ಸೀಮಿತವಲ್ಲ’ ಎಂದು ಹೇಳಿದರು.

‘ಕುವೆಂಪು ಅವರು ಕನ್ನಡ ನುಡಿ, ಸಂಸ್ಕೃತಿಯ ಪತಾಕೆಯನ್ನು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ ಮಹಾನ್ ವ್ಯಕ್ತಿ. ಅವರು ತಮ್ಮ ವಿಚಾರಧಾರೆ ಮೂಲಕ ವಿಶ್ವ ಮಾನವ ಸಂದೇಶ ಸಾರಿದ್ದಾರೆ. ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ನೆನೆದಾಗ ಅವರು ಮೇಲ್ಪಂಕ್ತಿಯಲ್ಲಿ ನೆನಪಾಗುತ್ತಾರೆ. ಕುವೆಂಪು ಕೃತಿಗಳನ್ನು ಓದಿದಾಗ ಮಾತ್ರ ಅವರ ವಿಚಾರಧಾರೆ ಅರಿಯಲು ಸಾಧ್ಯ’ ಎಂದು ಸಲಹೆ ನೀಡಿದರು.

‘ಸ್ನಾತಕೋತ್ತರ ಕೇಂದ್ರಕ್ಕೆ ಇಂಟರ್‌ನೆಟ್ ಸೇವೆ ಕಲ್ಪಿಸಲು ಬಿಎಸ್‌ಎನ್‌ಎಲ್‌ ಸಿಬ್ಬಂದಿ ಹಿಂದೇಟು ಹಾಕುತ್ತಿದೆ. ನಗರದಿಂದ ವಿ.ವಿ ಕೇಂದ್ರಕ್ಕೆ ಇಂಟರ್‌ನೆಟ್‌ ಸಂಪರ್ಕ ಕಲ್ಪಿಸಲು ಕಷ್ಟವಾಗುತ್ತದೆ ಎಂದು ಸಿಬ್ಬಂದಿ ಹೇಳಿದ್ದಾರೆ. ಖಾಸಗಿ ಕಂಪನಿಗಳವರ ಜತೆ ಚರ್ಚಿಸಿ ಇಂಟರ್‌ನೆಟ್‌ ಸೌಕರ್ಯ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.

ಪುನರುಜ್ಜೀವನದ ಹರಿಕಾರ: ‘ಕನ್ನಡ ಸಾಹಿತ್ಯವನ್ನು ಅಂತರರಾಷ್ಟ್ರೀಯ ಮಟ್ಟಕ್ಕೇರಿಸಿದ ಧೀಮಂತ ಕವಿ ಕುವೆಂಪು. ಕೆಲವೇ ಮಹನೀಯ ಸಾಹಿತಿಗಳಲ್ಲಿ ಆಧುನಿಕ ಭಾರತದ ಜ್ಞಾನ ಪುನರುಜ್ಜೀವನದ ಹರಿಕಾರರು ಕುವೆಂಪು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್ ಬಣ್ಣಿಸಿದರು.

‘ಜನಿಸಿದ ಮಗು ವಿಶ್ವ ಮಾನವನಾಗುತ್ತಾನೆ. ಮಗು ಬೆಳೆಯುತ್ತಾ ಜಾತಿ, ಧರ್ಮದ ಸಂಕೋಲೆಯೊಳಗೆ ಸಿಲುಕುತ್ತದೆ. ಸಂಕುಚಿತ ಮನೋಭಾವದಿಂದ ಹೊರಬರಬೇಕು. ಜಾತಿ, ಮತ, ಧರ್ಮದ ಎಲ್ಲೆ ಮೀರಿ ಬೆಳೆಯಬೇಕು. ಆಗ ವಿಶ್ವ ಮಾನವನಾಗಲು ಸಾಧ್ಯವೆಂದು ಕುವೆಂಪು ಸಾಹಿತ್ಯದ ಮೂಲಕ ಸಂದೇಶ ನೀಡಿದ್ದಾರೆ’ ಎಂದು ಹೇಳಿದರು.

‘ಕುವೆಂಪು ಅವರಿಗೆ ಪ್ರಕೃತಿ ಎಷ್ಟು ಮುಖ್ಯವೋ, ನಮಗೆ ಅವರ ಸಾಹಿತ್ಯ ಅಷ್ಟೇ ಮುಖ್ಯ. ಅವರ ಸಾಹಿತ್ಯ ಅರಿತರೆ ಮೇಲ್ಜಾತಿನೂ ಇಲ್ಲ, ಕೇಳ ಜಾತಿಯೂ ಇಲ್ಲ. ನಮ್ಮದು ಮಾನವ ಜಾತಿ ಎಂಬುದು ಅರಿವಾಗುತ್ತದೆ. ಕುವೆಂಪು ಗುಣದ ಮುಂದೆ ಯಾವ ಸಂಪ್ರದಾಯವೂ ಇಲ್ಲ ಎಂದು ಹೇಳಿದ್ದರು. ಅವರು ಎಂದಿಗೂ ಜಾತಿ ನಿಂದನೆಯ ಮಾತನಾಡಲಿಲ್ಲ. ಸಮಾನತೆಯು ನಿಸರ್ಗದ ಸೂತ್ರವೆಂದು ಪ್ರತಿಪಾದಿಸಿದರು’ ಎಂದರು.

‘ಮನುಜ ಮತ ವಿಶ್ವಪಥದ ನುಡಿಯ ಮೂಲಕ ಸರ್ವರಿಗೂ ಸಮ ಬಾಳು, ಸರ್ವರಿಗೂ ಸಮ ಪಾಲು ಹೇಳುವ ನಿಟ್ಟಿನಲ್ಲಿ ಸಕಲ ಜೀವಿಗಳಿಗೆ ಒಳಿತು ಬಯಸುವುದೇ ನಿಜವಾದ ಧರ್ಮವೆಂಬ ಶರಣರ ನಿಲುವನ್ನು ಕುವೆಂಪು ತಮ್ಮ ಸಾಹಿತ್ಯದಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ವಿ.ವಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ.ಕುಮುದಾ, ಕನ್ನಡ ವಿಭಾಗದ ಮುಖ್ಯಸ್ಥ ನಾಗರಾಜ್ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು