ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಲಂಕೇಶ್ ಸಾಹಿತ್ಯ ಸಪ್ತಾಹ

Last Updated 18 ಮಾರ್ಚ್ 2021, 14:53 IST
ಅಕ್ಷರ ಗಾತ್ರ

ಕೋಲಾರ: ‘ಯುವ ಪೀಳಿಗೆಗೆ ಸಾಹಿತಿ ಲಂಕೇಶ್‌ರನ್ನು ಪರಿಚಯಿಸುವ ನಿಟ್ಟಿನಲ್ಲಿ ಬೆಂಗಳೂರಿನ ಸಂಸ ರಂಗ ತಂಡದ ಸಹಯೋಗದಲ್ಲಿ ಮಾರ್ಚ್‌ 22ರಿಂದ 28ರವರೆಗೆ ಲಂಕೇಶ್ ಸಾಹಿತ್ಯ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಆದಿಮ ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ಕೆ.ಎಂ.ಕೊಮ್ಮಣ್ಣ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ 7 ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಲಂಕೇಶ್‌ ಕುರಿತಂತೆ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕಾರ್ಯಕ್ರಮ ನಡೆಯುತ್ತಿದ್ದು, ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

‘ಕವಿತೆ, ಅಂಕಣ, ಕಥೆ, ನಾಟಕ, ಕಾದಂಬರಿ, ಅನುವಾದ, ವಿಮರ್ಶೆ, ಸಿನಿಮಾ, ಚಳವಳಿಯಲ್ಲಿ ಸಕ್ರಿಯರಾಗಿದ್ದ ಲಂಕೇಶ್‌ ಅವರನ್ನು ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಕವಿ ಸಿದ್ದಲಿಂಗಯ್ಯ ಕಾರ್ಯಕ್ರಮ ಉದ್ಘಾಟಿಸುತ್ತಾರೆ. ಶಾಸಕ ಕೆ.ಆರ್‌.ರಮೇಶ್‌ಕುಮಾರ್‌, ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ, ಮುನಿಸ್ವಾಮಿ ಅತಿಥಿಗಳಾಗಿ ಭಾಗವಹಿಸುತ್ತಾರೆ’ ಎಂದು ಮಾಹಿತಿ ನೀಡಿದರು.

‘ಕಾರ್ಯಕ್ರಮದಲ್ಲಿ ಲಂಕೇಶ್‌ ಕುರಿತಂತೆ 12 ವಿಚಾರಗೋಷ್ಠಿ ಹಾಗೂ ಅವರ ನಿರ್ದೇಶನದ ಮತ್ತು ಕಾದಂಬರಿ ಆಧಾರಿತ 6 ಚಲನಚಿತ್ರ, 2 ನಾಟಕಗಳ ಪ್ರದರ್ಶನ ನಡೆಯಲಿದೆ. ಲಂಕೇಶ್ ಬಗ್ಗೆ ವಿಶಿಷ್ಟವಾಗಿ ತಿಳಿದುಕೊಳ್ಳಲು ಇಚ್ಛೆಯಿರುವ ಶಿಬಿರಾರ್ಥಿಗಳೊಂದಿಗೆ ಸಂವಾದ, ಚರ್ಚೆ ಇರುತ್ತದೆ. ಕಾರ್ಯಕ್ರಮ ಬರುವವರಿಗೆ ಊಟ ಮತ್ತು ವಸತಿ ಸೌಲಭ್ಯೆ ಕಲ್ಪಿಸಲಾಗುತ್ತದೆ’ ಎಂದು ವಿವರಿಸಿದರು.

ವಿವಿಧೆಡೆ ಕಾರ್ಯಕ್ರಮ: ‘ರಾಜ್ಯದ ವಿವಿಧೆಡೆ 5 ವರ್ಷಗಳಿಂದ ಲಂಕೇಶ್ ಸಾಹಿತ್ಯ ಸಪ್ತಾಹ ಕಾರ್ಯಕ್ರಮ ನಡೆಸಲಾಗುತ್ತಿದೆ. ಆದಿಮ ಸಾಂಸ್ಕೃತಿಕ ಕೇಂದ್ರದ ಸದಸ್ಯರ ಸಹಕಾರದೊಂದಿಗೆ ಈ ವರ್ಷ ಮೊದಲ ಬಾರಿಗೆ ಕೋಲಾರ ಜಿಲ್ಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದು ಸಂಸ ರಂಗ ತಂಡದ ಸಂಸ್ಥಾಪಕ ಸುರೇಶ್‌ ಹೇಳಿದರು.

‘ಸಂಸ್ಥೆಯು ಒಂದೂವರೆ ದಶಕದಿಂದ ಪ್ರತಿ ತಿಂಗಳು ಹುಣ್ಣಿಮೆ ಕಾರ್ಯಕ್ರಮದಡಿ ನಾಟಕ, ನೃತ್ಯರೂಪಕ, ಜನಪದ ಕಲಾ ಪ್ರಕಾರಗಳ ಪ್ರದರ್ಶನ, ಗದ್ದುಗೆ ಗೌರವ, ವಿಚಾರ ಸಂಕಿರಣ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಚುಕ್ಕಿ ಮೇಳ, ಮಕ್ಕಳ ಬೇಸಿಗೆ ಶಿಬಿರದಂತಹ ಕಾರ್ಯಕ್ರಮ ನಡೆಸಿಕೊಂಡು ಬಂದಿದೆ. ಹಿಂದಿನ ವರ್ಷ ಕೋವಿಡ್‌ ಕಾರಣಕ್ಕೆ ಯಾವುದೇ ಸಾಂಸ್ಕೃತಿಕ ಚಟುವಟಿಕೆ ನಡೆಸಲು ಸಾಧ್ಯವಾಗಲಿಲ್ಲ’ ಎಂದು ಆದಿಮ ಸಾಂಸ್ಕೃತಿಕ ಕೇಂದ್ರದ ಖಜಾಂಚಿ ಹ.ಮಾ.ರಾಮಚಂದ್ರ ತಿಳಿಸಿದರು.

ಆದಿಮ ಸಾಂಸ್ಕೃತಿಕ ಕೇಂದ್ರದ ಸದಸ್ಯರಾದ ನೀಲಕಂಠೇಗೌಡ, ಪುರುಷೋತ್ತಮ್‌, ಶ್ರೀನಿವಾಸ್, ಡಿ.ಆರ್.ರಾಜಪ್ಪ, ಗೋವಿಂದಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT