ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸನಸಭೆ: ಮಹಿಳಾ ಮೀಸಲಾತಿ ಸಿಗಲಿ

ಕೆ.ಸಿ.ರೆಡ್ಡಿ ಸರೋಜಮ್ಮ ವೆಲ್‌ಫೇರ್‌ ಪ್ರತಿಷ್ಠಾನದ ಕಾರ್ಯದರ್ಶಿ ವಸಂತ ಕವಿತಾರೆಡ್ಡಿ ಹೇಳಿಕೆ
Last Updated 10 ಮೇ 2020, 13:16 IST
ಅಕ್ಷರ ಗಾತ್ರ

ಕೋಲಾರ: ‘ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸಿದಾಗ ಮಾತ್ರ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಕೊನೆಗೊಳ್ಳುತ್ತದೆ’ ಎಂದು ಕೆ.ಸಿ.ರೆಡ್ಡಿ ಸರೋಜಮ್ಮ ವೆಲ್‌ಫೇರ್‌ ಪ್ರತಿಷ್ಠಾನದ ಕಾರ್ಯದರ್ಶಿ ವಸಂತ ಕವಿತಾರೆಡ್ಡಿ ಅಭಿಪ್ರಾಯಪಟ್ಟರು.

ಪ್ರತಿಷ್ಠಾನವು ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ತಾಯಂದಿರ ದಿನಾಚರಣೆಯಲ್ಲಿ ಮಾತನಾಡಿ, ‘ಮಹಿಳೆಯರಿಗೆ ಕಾನೂನು ರಚನೆಯ ಅಧಿಕಾರ ಸಿಕ್ಕಿದರೆ ದೌರ್ಜನ್ಯ ತಡೆಗೆ ಪರಿಹಾರ ಸಿಗುತ್ತದೆ’ ಎಂದು ಹೇಳಿದರು.

‘ರೈತರು, ಮಕ್ಕಳು ಹಾಗೂ ಹೆಣ್ಣು ಮಕ್ಕಳ ಅನುಕೂಲಕ್ಕಾಗಿ ಪ್ರತಿಷ್ಠಾನ ಆರಂಭಿಸಲಾಗಿದೆ. ವಿಶ್ವ ತಾಯಂದಿರ ದಿನ ಆಚರಿಸುವುದು ಮುಖ್ಯವಲ್ಲ. ಪ್ರತಿ ಪುರುಷನೂ ಮಹಿಳೆಯರಿಗೆ ಗೌರವ ನೀಡಬೇಕು. ಸ್ತ್ರೀಯರ ಮೇಲೆ ನಡೆಯುವ ದೌರ್ಜನ್ಯಕ್ಕೆ ಕಡಿವಾಣ ಹಾಕುವ ಇಚ್ಛಾಶಕ್ತಿ ಸರ್ಕಾರ ಹಾಗೂ ಜನಪ್ರತಿನಿಧಿಗಳಲ್ಲಿ ಬರಬೇಕು’ ಎಂದು ಆಶಿಸಿದರು.

‘ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಹೆಣ್ಣು ಸಮಾಜದಲ್ಲಿ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಆರ್ಥಿಕವಾಗಿ ಪ್ರತಿ ಕ್ಷೇತ್ರದಲ್ಲೂ ಛಾಪು ಮೂಡಿಸಬೇಕು. ಮಹಿಳೆಯರಿಗೆ ರಾಜಕೀಯ ಮೀಸಲಾತಿ ಸಿಗಲು ಪುರುಷರು ಒತ್ತಡ ಹಾಕಬೇಕು’ ಎಂದು ಮನವಿ ಮಾಡಿದರು.

‘ಭಾರತವು ತಲಾ ತಲಾಂತರದಿಂದ ಪುರುಷ ಪ್ರಧಾನ ಸಮಾಜ ವ್ಯವಸ್ಥೆ ಹೊಂದಿದೆ. ಆದರೂ ಹೆಣ್ಣು ತನಗಿರುವ ಕಟ್ಟು ಪಾಡುಗಳಲ್ಲೇ ಸಾಧನೆ ಮಾಡಬೇಕು. ಪುರುಷರಿಗೆ ಹೋಲಿಕೆ ಮಾಡಿಕೊಳ್ಳದೆ ಭವಿಷ್ಯದ ಮುಂದಾಲೋಚನೆ ಇಟ್ಟುಕೊಂಡು ಜೀವನ ರೂಪಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಧ್ವನಿ ಎತ್ತಬೇಕು: ‘ಹೆಣ್ಣು ಸಮಾಜದ ಪ್ರತಿ ಹಂತದಲ್ಲೂ ಜಾಗೃತವಾಗಿರಬೇಕು. ಸಮಾಜಕ್ಕೆ ಅಂಜದೆ ಧೈರ್ಯವಾಗಿ ಮುನ್ನಡೆಯಬೇಕು. ಕಾನೂನು ನೀಡಿರುವ ಹಕ್ಕು ಮಾತ್ರ ಬಳಸಿಕೊಳ್ಳದೆ ಕರ್ತವ್ಯಗಳ ಬಗ್ಗೆ ಜವಾಬ್ದಾರರಾಗಿಬೇಕು. ಸಮಾಜದಲ್ಲಿ ನಡೆಯುವ ಶೋಷಣೆ ವಿರುದ್ಧ ಧ್ವನಿ ಎತ್ತಬೇಕು’ ಎಂದು ಸಲಹೆ ನೀಡಿದರು.

ಅನನ್ಯ ಕೊಡುಗೆ: ‘ಜಿಲ್ಲೆಯ ಕೆ.ಸಿ.ರೆಡ್ಡಿ ಅವರು ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿ ಅನನ್ಯ ಕೊಡುಗೆ ನೀಡಿದ್ದಾರೆ. ಜಿಲ್ಲೆಯ ಕ್ಯಾಸಂಬಳ್ಳಿಯಲ್ಲಿ ಹುಟ್ಟಿ ಸ್ವಾತಂತ್ರ್ಯ ಹೋರಾಟ ನಡೆಸಿದ ಅವರು ಮಹನೀಯರು. ಅವರ ಜನಪರ ಕಾರ್ಯ ಮಾದರಿಯಾಗಿದೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಕೆ.ಚಂದ್ರಾರೆಡ್ಡಿ ಸ್ಮರಿಸಿದರು.

ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ರೆಡ್ಡಿ ಜನಸಂಘದ ಕಾರ್ಯಕಾರಿ ಸದಸ್ಯ ಸತೀಶ್‌ರೆಡ್ಡಿ, ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಮುರಳಿ, ನಗರಸಭೆ ಸದಸ್ಯ ಪ್ರಸಾದ್‌ಬಾಬು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT