ಶನಿವಾರ, ಮಾರ್ಚ್ 6, 2021
32 °C
ಖರೀದಿಗೆ ಮುಗಿಬಿದ್ದ ಜನ: ರಸ್ತೆಯಲ್ಲಿ ಜನಜಂಗುಳಿ– ವಾಹನ ದಟ್ಟಣೆ

ಕೋಲಾರ ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಕೆ ವಾಪಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಲಾಕ್‌ಡೌನ್‌ ಸಡಿಲಗೊಳಿಸಿದ್ದ ಜಿಲ್ಲಾಡಳಿತವು ಶುಕ್ರವಾರದಿಂದ ಅನ್ವಯವಾಗುವಂತೆ ಪುನಃ ಲಾಕ್‌ಡೌನ್‌ ಕಠಿಣಗೊಳಿಸಿದೆ.

ಜಿಲ್ಲೆಯು ಹಸಿರು ವಲಯದಲ್ಲಿರುವ ಕಾರಣ ಸರ್ಕಾರದ ಸೂಚನೆಯಂತೆ ಜಿಲ್ಲಾಡಳಿತವು ಗುರುವಾರ ಲಾಕ್‌ಡೌನ್‌ ಆದೇಶ ಸಡಿಲಗೊಳಿಸಿ ಕೆಲ ವಿನಾಯಿತಿ ನೀಡಿತ್ತು. ಇದರ ಬೆನ್ನಲ್ಲೇ ಜನರು ಕೊರೊನಾ ಸೋಂಕಿನ ಭಯವಿಲ್ಲದೆ ಸುರಕ್ಷತಾ ಮಾರ್ಗಸೂಚಿ ಉಲ್ಲಂಘಿಸಿ ಗುಂಪು ಗುಂಪಾಗಿ ರಸ್ತೆಗಿಳಿದರು. ಮಾರುಕಟ್ಟೆ, ಅಂಗಡಿಗಳಲ್ಲಿ ಅಂತರ ಪಾಲಿಸದೆ ವಸ್ತುಗಳ ಖರೀದಿಗೆ ಮುಗಿಬಿದ್ದರು.

ಗುರುವಾರ ರಾತ್ರಿ ಜಿಲ್ಲಾ ಕೇಂದ್ರದಲ್ಲಿ ನಗರ ಪ್ರದಕ್ಷಿಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ರಸ್ತೆಯಲ್ಲಿ ಜನಜಂಗುಳಿ ಹಾಗೂ ವಾಹನದಟ್ಟಣೆ ಕಂಡು ಅಸಮಾಧಾನಗೊಂಡರು. ರಾತ್ರಿ 10 ಗಂಟೆಯಾದರೂ ಬಹುತೇಕ ಕಡೆ ಅಂಗಡಿಗಳು ತೆರೆದಿದ್ದವು. ಜನರು ಮಾಸ್ಕ್‌ ಧರಿಸದೆ ಅನಗತ್ಯವಾಗಿ ಕಾರು, ಬೈಕ್‌ಗಳಲ್ಲಿ ಸುತ್ತಾಡುತ್ತಿದ್ದರು. ಸುರಕ್ಷತಾ ಕ್ರಮ ಪಾಲಿಸದ ಅಂಗಡಿಗಳಿಗೆ ಜಿಲ್ಲಾಧಿಕಾರಿ ಬೀಗಮುದ್ರೆ ಹಾಕಿಸಿದರು.

ಲಾಕ್‌ಡೌನ್‌ ಸಡಿಲಿಕೆಯಿಂದ ಪರಿಸ್ಥಿತಿ ಕೈ ಮೀರಬಹುದೆಂಬ ಕಾರಣಕ್ಕೆ ಜಿಲ್ಲಾಧಿಕಾರಿ ಈ ಹಿಂದೆ ಲಾಕ್‌ಡೌನ್‌ ಸಂದರ್ಭದಲ್ಲಿ ಇದ್ದಂತೆಯೇ ವಾಣಿಜ್ಯ ಚಟುವಟಿಕೆ, ವಾಹನ ಸಂಚಾರ ಹಾಗೂ ಜನರ ಓಡಾಟ ನಿಯಂತ್ರಿಸುವಂತೆ ಪೊಲೀಸರಿಗೆ ಆದೇಶಿಸಿದರು. ದಿನಸಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ವಹಿವಾಟಿಗೆ ಮಾತ್ರ ಅನುಮತಿ ನೀಡುವಂತೆ ಸೂಚಿಸಿದರು.

ಲಾಕ್‌ಡೌನ್‌ ಸಡಿಲಿಕೆಯಾಗಿದೆ ಎಂದು ವರ್ತಕರು ಶುಕ್ರವಾರ ಬೆಳಿಗ್ಗೆ ಮಳಿಗೆ ತೆರೆದು ಪ್ರತಿನಿತ್ಯದಂತೆ ವಹಿವಾಟು ಮಾಡಲಾರಂಭಿಸಿದರು. ಜಿಲ್ಲಾಧಿಕಾರಿ ಆದೇಶದನ್ವಯ ಪೊಲೀಸರು ನಗರದೆಲ್ಲೆಡೆ ಅಂಗಡಿಗಳನ್ನು 10 ಗಂಟೆಗೆ ಬಂದ್‌ ಮಾಡಿಸಿದರು. ಹಾಲು, ಹಣ್ಣು, ತರಕಾರಿ, ಔಷಧ ಅಂಗಡಿಗಳು ಮತ್ತು ಪೆಟ್ರೋಲ್ ಬಂಕ್‌ಗಳಿಗೆ ಮಾತ್ರ ವಿನಾಯಿತಿ ನೀಡಿದರು. ರಸ್ತೆಯಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರನ್ನು ತಡೆದು ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದರು.

ಪೊಲೀಸ್‌ ಗಸ್ತು: ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲೆಡೆ ಪೊಲೀಸ್ ಗಸ್ತು ಹೆಚ್ಚಿಸಲಾಗಿತ್ತು. ಆಯಕಟ್ಟಿನ ಸ್ಥಳಗಳು, ವಾಣಿಜ್ಯ ಪ್ರದೇಶಗಳು, ಧಾರ್ಮಿಕ ಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಹಿರಿಯ ಪೊಲೀಸ್‌ ಅಧಿಕಾರಿಗಳು ನಿಯಮಿತವಾಗಿ ಗಸ್ತು ನಡೆಸಿದರು. ಮಾಸ್ಕ್‌ ಧರಿಸದೆ ಓಡಾಡುತ್ತಿದ್ದ ಜನರಿಗೆ ದಂಡ ವಿಧಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು