ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಮಲ್ಲೇಶ್‌ ಬಾಬುಗೆ ಮತ್ತೊಂದು ಸವಾಲು

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಕಣಕ್ಕೆ, ಅಧಿಕೃತ ಘೋಷಣೆ ಬಾಕಿ
Published 27 ಮಾರ್ಚ್ 2024, 6:41 IST
Last Updated 27 ಮಾರ್ಚ್ 2024, 6:41 IST
ಅಕ್ಷರ ಗಾತ್ರ

ಕೋಲಾರ: ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲು ಕೇವಲ ಒಂದು ದಿನ ಬಾಕಿ ಇದ್ದು, ಕೊನೆಗೂ ಕೋಲಾರ ಕ್ಷೇತ್ರದ ಮೈತ್ರಿ ಅಭ್ಯರ್ಥಿಯನ್ನು ಜೆಡಿಎಸ್‌ ಅಂತಿಮಗೊಳಿಸಿದೆ. 

ಬಂಗಾರಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಈ ಹಿಂದೆ ಎರಡು ಬಾರಿ ಸ್ಪರ್ಧಿಸಿದ್ದ ಭೋವಿ ಸಮುದಾಯದ ಎಂ.ಮಲ್ಲೇಶ್‌ ಬಾಬು ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಅಧಿಕೃತವಾಗಿ ಅಂತಿಮ ಮುದ್ರೆ ಪಕ್ಷದಿಂದ ಇನ್ನೂ ಬೀಳಬೇಕಿದೆ.

ಬೆಂಗಳೂರಿನಲ್ಲಿ ಪಕ್ಷದ ರಾಜ್ಯ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ ಕೋರ್‌ ಕಮಿಟಿ ಸಭೆ ಸೇರಿದಂತೆ ಮಂಗಳವಾರ ದಿನವಿಡೀ ಮುಖಂಡರ ಜೊತೆ ಚರ್ಚೆ ನಡೆಯಿತು. ಪಕ್ಷದಿಂದ ಅಧಿಕೃತ ಘೋಷಣೆ ಬಾಕಿ ಇರುವಂತೆಯೇ ಹಾಸನ ಪ್ರವಾಸದಲ್ಲಿದ್ದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರೇ ಅಭ್ಯರ್ಥಿ ಹೆಸರನ್ನು ಪ್ರಕಟಿಸಿದರು. 

ಜೆಡಿಎಸ್‌ ಪಟ್ಟಿಯಲ್ಲಿ ಮಲ್ಲೇಶ್‌ ಬಾಬು ಅವರಲ್ಲದೇ, ಮುಳಬಾಗಿಲು ಕ್ಷೇತ್ರದ ಶಾಸಕ ಸಮೃದ್ಧಿ ಮಂಜುನಾಥ್‌ ಹಾಗೂ ದೇವನಹಳ್ಳಿ ಕ್ಷೇತ್ರದ ಪರಾಜಿತ ಅಭ್ಯರ್ಥಿ ನಿಸರ್ಗ ನಾರಾಯಣಸ್ವಾಮಿ ಅವರ ಹೆಸರೂ ಇತ್ತು.

ಸಭೆಯಲ್ಲಿ ಕೋಲಾರದ ಮುಖಂಡರು ಸ್ಥಳೀಯ ಅಭ್ಯರ್ಥಿಗೆ ಟಿಕೆಟ್‌ ನೀಡಬೇಕೆಂದು ವಕಾಲತ್ತು ವಹಿಸಿದರು. ಜೆಡಿಎಸ್‌ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ಶಾಸಕರಾದ ಜಿ.ಕೆ.ವೆಂಕಟಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು, ಕೋಲಾರ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಆಗಿದ್ದ ಸಿಎಂಆರ್‌ ಶ್ರೀನಾಥ್‌, ಮಾಲೂರು ಕ್ಷೇತ್ರದ ಅಭ್ಯರ್ಥಿಯಾಗಿದ್ದ ರಾಮೇಗೌಡ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು. 

ಕೋಲಾರ ತಾಲ್ಲೂಕಿನ ಕುಂಬಾರಹಳ್ಳಿ ಗ್ರಾಮದ ಮಲ್ಲೇಶ್‌ ಬಾಬು 2018 ಹಾಗೂ 2023 ವಿಧಾನಸಭೆ ಚುನಾವಣೆಯಲ್ಲಿ ಬಂಗಾರಪೇಟೆ ಮೀಸಲು ಕ್ಷೇತ್ರದಲ್ಲಿ ತೀವ್ರ ಪೈಪೋಟಿ ನೀಡಿದ್ದರು. ಕಾಂಗ್ರೆಸ್‌ನ ಎಸ್‌.ಎನ್‌.ನಾರಾಯಣಸ್ವಾಮಿ ವಿರುದ್ಧ ಪರಾಭವಗೊಂಡಿದ್ದರು. 50 ವರ್ಷ ವಯಸ್ಸಿನ ಅವರು ಎಂಬಿಎ ಪದವೀಧರರು.

ಐಎಎಸ್‌ ಅಧಿಕಾರಿಯಾಗಿದ್ದ ದಿವಂಗತ ಮುನಿಸ್ವಾಮಿ ಸಿ. ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಪುತ್ರನೂ ಆಗಿರುವ ಮಲ್ಲೇಶ್ ಬಾಬು ಮೊದಲ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. 2009ರಲ್ಲಿ ಮಂಗಮ್ಮ (2.39 ಲಕ್ಷ ಮತ) ಬಿಜೆಪಿಯಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್‌ನ ಕೆ.ಎಚ್‌.ಮುನಿಯಪ್ಪ (3.21 ಲಕ್ಷ ಮತ) ವಿರುದ್ಧ ಪರಾಭವಗೊಂಡಿದ್ದರು.

ಬಿಜೆಪಿ ಜೊತೆಗಿನ ಮೈತ್ರಿ ಒಪ್ಪಂದದಂತೆ ಈ ಬಾರಿ ಜೆಡಿಎಸ್‌ಗೆ ಕ್ಷೇತ್ರದ ಟಿಕೆಟ್‌ ಒಲಿದಿತ್ತು. ಹೀಗಾಗಿ, ಹಾಲಿ ಸಂಸದ ಎಸ್‌.ಮುನಿಸ್ವಾಮಿ ಇದ್ದರೂ ಬಿಟ್ಟುಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ವಿಧಾನಸಭೆ ಚುನಾವಣೆಗಳಲ್ಲಿ ಎರಡು ಬಾರಿ ಸೋಲಿನ ಕಹಿಯುಂಡಿರುವ ಮಲ್ಲೇಶ್‌ ಬಾಬು ಮುಂದೆ ಈಗ ದೊಡ್ಡ ಸವಾಲು ಇದೆ. ಜೊತೆಗೆ ಗೆಲುವಿನ ಖಾತೆ ತೆರೆಯುವ ಅವಕಾಶವೂ ಇತ್ತು. 

ಈ ಹಿಂದೆ ಅಂದರೆ 1984ರಲ್ಲಿ ಮೊದಲ ಬಾರಿ ಜನತಾ ಪರಿವಾರದ ವಿ.ವೆಂಕಟೇಶ್‌ ಗೆದ್ದಿದ್ದರು. ಅವರು ಕಾಂಗ್ರೆಸ್‌ನ ಜಿ.ವೈ.ಕೃಷ್ಣನ್‌ ಎದುರು ಜಯ ಗಳಿಸಿದ್ದರು. ಆ ಬಳಿಕ ಜನತಾ ಪರಿವಾರಕ್ಕೆ ಗೆಲುವು ಒಲಿದಿಲ್ಲ.

ಕಾಂಗ್ರೆಸ್‌ನಿಂದ ಇನ್ನೂ ಟಿಕೆಟ್‌ ಘೋಷಣೆ ಆಗಿಲ್ಲ. ಈ ಪಕ್ಷದಲ್ಲಿ ಪರಿಶಿಷ್ಟ ಜಾತಿಯ ಎಡ ಹಾಗೂ ಬಲ ಸಮುದಾಯದ ಪೈಪೋಟಿ ಮುಂದುವರಿದಿದೆ.

ಮಲ್ಲೇಶ್‌ ಬಾಬು
ಮಲ್ಲೇಶ್‌ ಬಾಬು

50 ವರ್ಷ ವಯಸ್ಸಿನ ಮಲ್ಲೇಶ್‌ ಬಾಬು ಎಂಬಿಎ ಪದವೀಧರ ವಿಧಾನಸಭೆ ಚುನಾವಣೆಯಲ್ಲಿ 2 ಬಾರಿ ಸೋಲು ಕ್ಷೇತ್ರದಲ್ಲಿ ಒಮ್ಮೆ ಮಾತ್ರ ಜನತಾ ಪರಿವಾರಕ್ಕೆ ಗೆಲುವು

ಹಾಲಿ ಸಂಸದ ಇದ್ದರೂ ಗೌರವ ಇಟ್ಟು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದಾರೆ. ಮೋದಿ ಇಟ್ಟಿರುವ ಗೌರವವನ್ನು ಗೆದ್ದು ಉಳಿಸಿಕೊಳ್ಳುವ ವಿಶ್ವಾಸವಿದೆ

-ಎಂ.ಮಲ್ಲೇಶ್‌ ಬಾಬು ಕೋಲಾರ ಕ್ಷೇತ್ರ ಜೆಡಿಎಸ್‌ ಅಭ್ಯರ್ಥಿ (ಎನ್‌ಡಿಎ ಮೈತ್ರಿಕೂಟ)

ಎರಡು ವಿಧಾನಸಭೆ ಚುನಾವಣೆಯಲ್ಲಿ ಬಂಗಾರಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಲ್ಲೇಶ್‌ ಬಾಬು

2018ರ ವಿಧಾನಸಭೆ ಚುನಾವಣೆ

* ಎಸ್‌.ಎನ್‌.ನಾರಾಯಣಸ್ವಾಮಿ; ಕಾಂಗ್ರೆಸ್‌; 71171

* ಎಂ.ಮಲ್ಲೇಶ್‌ ಬಾಬು; ಜೆಡಿಎಸ್‌; 49300

******

2023ರ ವಿಧಾನಸಭೆ ಚುನಾವಣೆ

* ಎಸ್.ಎನ್.ನಾರಾಯಣಸ್ವಾಮಿ; ಕಾಂಗ್ರೆಸ್‌; 77292

* ಎಂ.ಮಲ್ಲೇಶ್‌ ಬಾಬು; ಜೆಡಿಎಸ್‌; 72581

ಕೊನೆಯ ಪ್ರಯತ್ನ ನಡೆಸಿದರೆ ಮುನಿಸ್ವಾಮಿ?

ಕೋಲಾರ ಕ್ಷೇತ್ರದಲ್ಲಿ ಮೈತ್ರಿಧರ್ಮ ಪಾಲಿಸಲು ಬಿಜೆಪಿ ಈಗಾಗಲೇ ಜೆಡಿಎಸ್‌ಗೆ ಟಿಕೆಟ್‌ ತ್ಯಾಗ ಮಾಡಿದೆ. ಆದರೆ ಕೊನೆಯ ಪ್ರಯತ್ನ ಎಂಬಂತೆ ಹಾಲಿ ಸಂಸದ ಎಸ್‌.ಮುನಿಸ್ವಾಮಿ ಅವರು ಜೆಡಿಎಸ್‌ ರಾಜ್ಯ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿ ಜೆಡಿಎಸ್‌ ಚಿಹ್ನೆ ಸ್ಪರ್ಧಿಸುವ ವಿಚಾರವಾಗಿ ಚರ್ಚಿಸಿದರು ಎನ್ನಲಾಗಿದೆ. ಆದರೆ ಮಲ್ಲೇಶಬಾಬು ಅವರನ್ನು ಅಂತಿಮಗೊಳಿಸಿರುವುದಾಗಿ ಕುಮಾರಸ್ವಾಮಿ ಹೇಳಿದರು ಎಂಬುದು ಗೊತ್ತಾಗಿದೆ. ಆರೋಗ್ಯ ವಿಚಾರಿಸಲು ತೆರಳಿದ್ದೆ ಎಂಬುದಾಗಿ ಮುನಿಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು. ‘ಕೋಲಾರಕ್ಕೆ ಅಭ್ಯರ್ಥಿ ಯಾರೆಂದು ನಿರ್ಧರಿಸುವುದು ಜೆಡಿಎಸ್‌ಗೆ ಬಿಟ್ಟ ವಿಚಾರ. ನಮ್ಮ ಪಾಲಿಗೆ ನರೇಂದ್ರ ಮೋದಿ ಅವರೇ ಅಭ್ಯರ್ಥಿ. ಪಕ್ಷದ ತೀರ್ಮಾನದಂತೆ ನಾವು ನಡೆದುಕೊಳ್ಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT