ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತಾತ್ಮ ಯೋಧರ ಸ್ಮಾರಕ ನಿರ್ಮಾಣ

Last Updated 20 ಡಿಸೆಂಬರ್ 2020, 14:24 IST
ಅಕ್ಷರ ಗಾತ್ರ

ಕೋಲಾರ: ‘ನಗರದಲ್ಲಿ ಹುತಾತ್ಮ ಯೋಧರ ಸ್ಮಾರಕ ನಿರ್ಮಿಸಲಾಗುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು 2020ರ ಜನವರಿಯಲ್ಲಿ ಸ್ಮಾರಕ ಉದ್ಘಾಟಿಸುತ್ತಾರೆ’ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ಇಲ್ಲಿನ ಟೇಕಲ್‌ ರಸ್ತೆಯ ಉದ್ಯಾನದಲ್ಲಿ ನಿರ್ಮಾಣವಾಗುತ್ತಿರುವ ಹುತಾತ್ಮ ಯೋಧರ ಸ್ಮಾರಕದ ಬೃಹತ್ ಪ್ರತಿಮೆಗೆ ಭಾನುವಾರ ಪೂಜೆ ಸಲ್ಲಿಸಿ ಮಾತನಾಡಿ, ‘ಜಿಲ್ಲೆಯಲ್ಲಿ ಸುಮಾರು 5 ಸಾವಿರ ಯೋಧರಿದ್ದಾರೆ. ದೇಶ ರಕ್ಷಣೆಗೆ ಜೀವ ಮುಡುಪಾಗಿಟ್ಟಿರುವ ಯೋಧರ ನೆನಪು ಶಾಶ್ವತವಾಗಿಸಲು ಸ್ಮಾರಕ ನಿರ್ಮಾಣಕ್ಕೆ ಜಾಗ ನೀಡಲಾಗಿದೆ’ ಎಂದು ತಿಳಿಸಿದರು.

‘ಶಿವಾರಪಟ್ಟಣದ ಶಿಲ್ಪಿ ಅಶೋಕ್ ಅವರು ಕೆತ್ತಿರುವ ಸ್ಮಾರಕದ ಪ್ರತಿಮೆ ಸುಂದರವಾಗಿ ಮೂಡಿ ಬಂದಿದೆ. ಇಷ್ಟೊಂದು ದೊಡ್ಡದಾದ ಯೋಧರ ಸ್ಮಾರಕ ಎಲ್ಲೂ ಇಲ್ಲ. ಸ್ಮಾರಕಕ್ಕಾಗಿ ಈಗಾಗಲೇ ಸುಂದರ ಕೆತ್ತನೆಯ ಪುತ್ಥಳಿ ಬಂದಿದೆ. ಸ್ಮಾರಕಕ್ಕೆ ಕಾರ್ಗಿಲ್‌ನಿಂದ ಮಣ್ಣು ತಂದು ಪೂಜಿಸಿ ಬಳಸಲಾಗುತ್ತದೆ’ ಎಂದು ವಿವರಿಸಿದರು.

ಬೃಹದಾಕಾರದ ಸ್ಮಾರಕದ ಪ್ರತಿಮೆಯನ್ನು ಸುಮಾರು 20 ಅಡಿಯ ಒಂದೇ ಕಲ್ಲಿನಲ್ಲಿ ಕೆತ್ತಲಾಗಿದೆ. ಇದನ್ನು ನಿಲ್ಲಿಸಲು ಬಂದಿದ್ದ ಕ್ರೇನ್‌ನ ಸರಪಳಿ ತುಂಡಾಯಿತು. ನಂತರ ಮತ್ತೊಂದು ಕ್ರೇನ್‌ ಬಳಸಿ ನಿಲ್ಲಿಸಲಾಯಿತು.

ಕಾಮಗಾರಿ ವೀಕ್ಷಣೆ: ಉದ್ಯಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿದ ಸಂಸದರು, ‘ಮಕ್ಕಳಿಗೆ ಆಟೋಪಕರಣಗಳ ಜತೆಗೆ ವ್ಯಾಯಾಮ ಮಾಡಲು ಜಿಮ್ ಸಲಕರಣೆ ಅಳವಡಿಸಬೇಕು. ಉದ್ಯಾನದಲ್ಲಿ ನಡಿಗೆದಾರರ ಪಥ ನಿರ್ಮಿಸುತ್ತಿರುವುದರಿಂದ ನಡಿಗೆದಾರರಿಗೆ ಅನುಕೂಲವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ನಾರಾಯಣಸ್ವಾಮಿ, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ, ಸದಸ್ಯ ಅಪ್ಪಿ ನಾರಾಯಣಸ್ವಾಮಿ, ನಗರಸಭೆ ಸದಸ್ಯ ಮುರಳಿಗೌಡ, ಜಿಲ್ಲಾ ನಿವೃತ್ತ ಯೋಧರ ಸಂಘದ ಅಧ್ಯಕ್ಷ ಜಗನ್ನಾಥ್, ನಿವೃತ್ತ ಯೋಧರಾದ ರಾಜು, ಕನ್ನಯ್ಯ, ರಾಜಣ್ಣ, ರಘುನಾಥ್ ಅಶೋಕ್, ಮಂಜುನಾಥಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT