ಶನಿವಾರ, ಜನವರಿ 22, 2022
16 °C
ರಂಗೇರಿದ ವಿಧಾನ ಪರಿಷತ್‌ ಚುನಾವಣಾ ಕಣ: ಅವಳಿ ಜಿಲ್ಲೆಯಲ್ಲಿ ಪ್ರಚಾರದ ಕಾವು

ವಿಧಾನ ಪರಿಷತ್‌ ಚುನಾವಣೆ | ಝಣ ಝಣ ಕಾಂಚಣದ ಸದ್ದು

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

ಕೋಲಾರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್‌ಗೆ ನಡೆಯುತ್ತಿರುವ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಅವಳಿ ಜಿಲ್ಲೆಯಲ್ಲಿ ಪ್ರಚಾರದ ಕಾವು ಏರ ತೊಡಗಿದೆ.

ಅಭ್ಯರ್ಥಿಗಳು ಮತ ಬೇಟೆಗಾಗಿ ಬೆಂಬಲಿಗರೊಂದಿಗೆ ಹಳ್ಳಿ ಹಳ್ಳಿ ಸುತ್ತುತ್ತಿದ್ದು, ಚುನಾವಣಾ ಕಣ ರಂಗೇರಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತದಾರರ ಓಲೈಕೆಗಾಗಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿ ಸಹ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಬೆಂಬಲಿಗರು ಹಾಗೂ ಪಕ್ಷಗಳ ಕಾರ್ಯಕರ್ತರು ಊರೂರು ಸುತ್ತಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ.

ಮೂಡಣದಲ್ಲಿ ನೇಸರ ಮೂಡುವುದೇ ತಡ ಬೆಂಬಲಿಗರ ಪಡೆ ಕಟ್ಟಿಕೊಂಡು ಹೊರಡುವ ಅಭ್ಯರ್ಥಿಗಳು ಹಾಗೂ ಮುಖಂಡರು ಪ್ರಚಾರ ಮುಗಿಸಿ ಮತ್ತೆ ಮನೆ ಸೇರುವುದು ರಾತ್ರಿಯಾಗುತ್ತಿದೆ. ಅಭ್ಯರ್ಥಿಗಳ ಜತೆಗೆ ಕುಟುಂಬ ಸದಸ್ಯರು ಪ್ರಚಾರಕ್ಕೆ ಕೈಜೋಡಿಸಿದ್ದಾರೆ.

ಅಭ್ಯರ್ಥಿಗಳು ವಿವಿಧ ಜಾತಿ, ಧರ್ಮಗಳ ಮತದಾರರನ್ನು ಸೆಳೆಯಲು ದೇವಸ್ಥಾನ, ಪ್ರಾರ್ಥನಾ ಮಂದಿರ ಹಾಗೂ ಚರ್ಚ್‌ಗಳಿಗೆ ಭೇಟಿ ಕೊಡುವ ಪರಿಪಾಠ ಆರಂಭಿಸಿದ್ದಾರೆ. ಪರಸ್ಪರ ಪೈಪೋಟಿಗೆ ಇಳಿದವರಂತೆ ಗುಡಿ ಗೋಪುರ ಸುತ್ತುತ್ತಾ ಮತದಾರರ ಓಲೈಕೆಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಗುಸು ಗುಸು: ಈಗ ಎಲ್ಲೆಲ್ಲೂ ಚುನಾವಣೆಯದೇ ಗುಸು ಗುಸು. ಉದ್ಯಾನಗಳು, ಹೋಟೆಲ್‌ಗಳು, ರಸ್ತೆ ಬದಿಯ ಚಹಾ ಅಂಗಡಿಗಳು ಸೇರಿದಂತೆ ಎಲ್ಲೆಡೆ ಚುನಾವಣೆಯೇ ಚರ್ಚೆಯ ವಿಷಯವಾಗಿದೆ.

ಊರ ಹೊರಗಿನ ತೋಟದ ಮನೆಗಳು, ಜಿಲ್ಲಾ ಕೇಂದ್ರದಲ್ಲಿನ ಪ್ರತಿಷ್ಠಿತ ಹೋಟೆಲ್‌ಗಳು, ರೆಸಾರ್ಟ್‌ಗಳು ಚುನಾವಣಾ ಕಾರ್ಯತಂತ್ರದ ಕೇಂದ್ರಗಳಾಗಿವೆ. ರಾಜಕೀಯ ಮುಖಂಡರ ಮನೆಗಳಲ್ಲಿ ಸಭೆಯ ಮೇಲೆ ಸಭೆ ನಡೆಯುತ್ತಿವೆ. ಮತದಾರರ ಓಲೈಕೆಗೆ ಬಾಡೂಟ, ಮದ್ಯ ಹಂಚಿಕೆಯು ಎಗ್ಗಿಲ್ಲದೆ ನಡೆದಿದೆ. ಸೂರ್ಯ ಮುಳುಗಿ ರಾತ್ರಿಯಾಗುವುದೇ ತಡ ತೋಟದ ಮನೆಗಳು, ಗೆಸ್ಟ್‌ಹೌಸ್‌ಗಳಲ್ಲಿ ಗುಂಪುಗೂಡುವ ಪಕ್ಷಗಳ ಮುಖಂಡರು, ಅಭ್ಯರ್ಥಿಗಳು ತಡರಾತ್ರಿವರೆಗೆ ಸಭೆ ನಡೆಸಿ ಚುನಾವಣಾ ರಣತಂತ್ರ ರೂಪಿಸುತ್ತಿದ್ದಾರೆ.

ಹಣದ ಹೊಳೆ: 2 ಜಿಲ್ಲೆಯನ್ನು ಒಳಗೊಂಡಿರುವ ಕ್ಷೇತ್ರದ ವ್ಯಾಪ್ತಿಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿವೆ. ಒಟ್ಟಾರೆ 5,600 ಮತದಾರರಿದ್ದು, ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಪ್ರಮುಖ ಮೂರೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಗೆಲುವಿಗೆ ತೀವ್ರ ಕಸರತ್ತು ನಡೆಸಿದ್ದಾರೆ.

ಕೆಲ ಅಭ್ಯರ್ಥಿಗಳು ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಮೂಲಕ ಪ್ರಚಾರ ನಡೆಸಲು ಮುಂದಾಗಿದ್ದಾರೆ. ಕೆಲ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ವೇದಿಕೆಯಾಗಿಸಿಕೊಂಡು ಮತದಾರರನ್ನು ಸೆಳೆಯುವ ತಂತ್ರಗಾರಿಕೆ ರೂಪಿಸಿದ್ದಾರೆ. ಎಸ್‌ಎಂಎಸ್‌ ಮತ್ತು ಮೊಬೈಲ್‌ ಕರೆಗಳ ಮೂಲಕ ಮತದಾರರನ್ನು ತಲುಪುವ ಪ್ರಯತ್ನ ಆರಂಭಿಸಿದ್ದಾರೆ.

ಪಕ್ಷಗಳ ರಾಜ್ಯ ಮುಖಂಡರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಅಖಾಡಕ್ಕಿಳಿದು ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರ ಕಣದಲ್ಲಿ ಝಣ ಝಣ ಕಾಂಚಣ ಸದ್ದು ಮಾಡುತ್ತಿದ್ದು, ಮತದಾರರನ್ನು ಸೆಳೆಯಲು ಹಣದ ಹೊಳೆಯನ್ನೇ ಹರಿಸಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು