ಗುರುವಾರ , ಸೆಪ್ಟೆಂಬರ್ 23, 2021
28 °C

ಪರಿಹಾರ ನಿಧಿಗೆ ಮುನಿಯಪ್ಪ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಅವರು ಕೊರೊನಾ ಸೋಂಕಿನ ಪರಿಹಾರ ಕಾರ್ಯಕ್ಕೆ ತಮ್ಮ ತಿಂಗಳ ಪಿಂಚಣಿಯಲ್ಲಿ ಶೇ 30ರಷ್ಟನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡುವುದಾಗಿ ಘೋಷಣೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಪರಿಹಾರ ನಿಧಿಗೆ ಹಣಕಾಸು ನೆರವು ಕೊಡುವ ಸಂಬಂಧ ಸಮ್ಮತಿಪತ್ರ ನೀಡಿ ಮಾತನಾಡಿ, ‘ಎಲ್ಲಾ ರಾಜಕೀಯ ಪಕ್ಷಗಳು ತಜ್ಞರ ಸಲಹೆ ಪಡೆದು ಕೋವಿಡ್‌–19 ಹತೋಟಿಗೆ ಸಂಘಟಿತ ಹೋರಾಟ ನಡೆಸಿ ಮನುಕುಲ ಉಳಿಸಬೇಕು’ ಎಂದು ಮನವಿ ಮಾಡಿದರು.

‘ರೈತರು, ದಿನಗೂಲಿ ನೌಕರರು ಹಾಗೂ ಶ್ರಮಿಕ ವರ್ಗವು ದೇಶದ ಬೆನ್ನೆಲುಬು. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಜನರನ್ನು ಕಡೆಗಣಿಸಿವೆ. ದಿಗ್ಬಂಧನದ ಹಿನ್ನೆಲೆಯಲ್ಲಿ ಈ ಜನರಿಗೆ ಯಾವುದೇ ನೆರವು ಸಿಕ್ಕಿಲ್ಲ. ರೈತರು, ದಿನಗೂಲಿ ನೌಕರರು ಮತ್ತು ಶ್ರಮಿಕ ವರ್ಗದ ಜನರು ದಿನನಿತ್ಯದ ಬಳಕೆಗೆ ಬೇಕಾದ ದಿನಸಿ, ಆಹಾರ ಪದಾರ್ಥಗಳಿಲ್ಲದೆ ಸ್ವಾಭಿಮಾನ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ’ ಎಂದು ಹೇಳಿದರು.

‘ಸರಕು ಸಾಗಣೆ ವಾಹನ ಸೇವೆಯಲ್ಲಿ ವ್ಯತ್ಯಯವಾಗಿರುವುದರಿಂದ ಕೃಷಿ ಉತ್ಪನ್ನಗಳ ಸಾಗಣೆಗೆ ಸಮಸ್ಯೆಯಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದೆಡೆ ಜನಸಾಮಾನ್ಯರಿಗೆ ಅಗತ್ಯ ವಸ್ತುಗಳ ಕೊರತೆ ಎದುರಾಗಿದ್ದು, ಜೀವನ ಬರ್ಬರವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೊರೊನಾ ಸೋಂಕಿನಿಂದ ದೇಶದ ಅರ್ಥ ವ್ಯವಸ್ಥೆಗೆ ದೊಡ್ಡ ಪೆಟ್ಟು ಬಿದ್ದಿದೆ. ಸರ್ಕಾರ ರೈತರಿಗೆ ಸಕಾಲದಲ್ಲಿ ಮಾರುಕಟ್ಟೆ ಸೌಲಭ್ಯ, ಸಾರಿಗೆ, ಬೆಳೆ ವಿಮೆ, ಬೆಳೆ ಸಾಲ ಒದಗಿಸಬೇಕು. ದಿನಗೂಲಿ ನೌಕರರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ಮತ್ತು ಕಟ್ಟಡ ಕಾರ್ಮಿಕರಿಗೆ ಹಣಕಾಸು ನೆರವಿನ ಜತೆಗೆ ಅಗತ್ಯ ವಸ್ತುಗಳನ್ನು ಪೂರೈಸಬೇಕು’ ಎಂದು ಕೋರಿದರು.

ಶಾಸಕರಾದ ಕೆ.ವೈ.ನಂಜೇಗೌಡ, ಎಂ.ರೂಪಕಲಾ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಉಪಾಧ್ಯಕ್ಷ ಎಲ್‌.ಎ.ಮಂಜುನಾಥ್‌ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು