ಮುನಿಯಪ್ಪ ಅಭಿವೃದ್ಧಿ ಕೆಲಸ ಮಾಡಿಲ್ಲ

ಶನಿವಾರ, ಏಪ್ರಿಲ್ 20, 2019
29 °C

ಮುನಿಯಪ್ಪ ಅಭಿವೃದ್ಧಿ ಕೆಲಸ ಮಾಡಿಲ್ಲ

Published:
Updated:

ಕೋಲಾರ: ‘ಕ್ಷೇತ್ರದ ಜನ ನೀಡಿದ ಅಧಿಕಾರವನ್ನು ಅಭಿವೃದ್ಧಿಗೆ ಬಳಸದೆ ಕುಟುಂಬದ ಸ್ವಾರ್ಥಕ್ಕೆ ದುರ್ಬಳಕೆ ಮಾಡಿಕೊಂಡ ಸಂಸದ ಕೆ.ಎಚ್.ಮುನಿಯಪ್ಪ ಮಾದಿಗ ಸಮುದಾಯದವರನ್ನು ಗುರುತಿಸಿ ಬೆಳೆಸಲಿಲ್ಲ’ ಎಂದು ರಾಜ್ಯ ಜಾಂಭವಂತ ಮಾದಿಗ ದಂಡೋರ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ವಿ.ನಾರಾಯಣಸ್ವಾಮಿ ಟೀಕಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮುನಿಯಪ್ಪ ಅವರು ಶಿಡ್ಲಘಟ್ಟದ ಕಂಬದಹಳ್ಳಿಯಿಂದ ಕೋಲಾರಕ್ಕೆ ಬಂದಾಗ 1 ಎಕರೆ ಜಮೀನೂ ಇರಲಿಲ್ಲ. ಸರ್ಕಾರದಿಂದ 4 ಎಕರೆ ಜಮೀನು ಮಂಜೂರು ಮಾಡಿಸಿಕೊಂಡವರು ಈಗ ನೂರಾರು ಎಕರೆ ಜಮೀನು, ಮನೆ, ನಿವೇಶನಗಳ ಮಾಲೀಕರಾಗಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಮುನಿಯಪ್ಪ ತಮ್ಮ ಪರಿವಾರ ಮತ್ತು ಬೆಂಬಲಿಗರ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆಯೇ ಹೊರತು 28 ವರ್ಷಗಳಲ್ಲಿ ಕ್ಷೇತ್ರದಲ್ಲಿ ಶಾಶ್ವತವಾದ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಚುನಾವಣೆ ವೇಳೆ ತಾನು ಮಾದಿಗ ಎಂದು ಹೇಳಿಕೊಳ್ಳುವ ಮುನಿಯಪ್ಪ ರಾಜಕೀಯವಾಗಿ ಯಾರನ್ನೂ ಬೆಳೆಸಲಿಲ್ಲ. ಮುಳಬಾಗಿಲಿನಲ್ಲಿ ಅಮರೇಶ್‌ರನ್ನು ಒಂದು ಬಾರಿ ಶಾಸಕರಾಗಿ ಮಾಡಿ ನಂತರ ಮೂಲೆಗುಂಪು ಮಾಡಿದರು’ ಎಂದು ಟೀಕಿಸಿದರು.

‘ಕೋಲಾರ ನಗರದಲ್ಲಿ ಮಾದಿಗ ಸಮುದಾಯದವರೇ ಹೆಚ್ಚಿರುವ ಗಂಗಮ್ಮನಪಾಳ್ಯ, ಮೋಚಿಪಾಳ್ಯ, ವೀರಾಂಜನೇಯನಗರ, ಟಮಕ ಕಾಲೊನಿಗೆ ಒಮ್ಮೆಯೂ ಭೇಟಿ ಕೊಟ್ಟಿಲ್ಲ. ಈ ಬಡಾವಣೆಗಳಿಗೆ ಮೂಲಸೌಕರ್ಯ ಕಲ್ಪಿಸಿಲ್ಲ. ಮೋಚಿಪಾಳ್ಯದಲ್ಲಿ ದೇವಸ್ಥಾನಕ್ಕೆ ₹ 2 ಲಕ್ಷ ನೀಡುವುದಾಗಿ ಹೇಳಿ ನಯಾಪೈಸೆ ಕೊಡಲಿಲ್ಲ. ಇಂತಹವರನ್ನು ಮನೆಗೆ ಕಳುಹಿಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು’ ಎಂದು ಕೋರಿದರು.

ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಶಂಕರಮ್ಮ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಶಿವಕುಮಾರ್, ಶಿವಕುಮಾರ್, ಕೃಷ್ಣಪ್ಪ, ಸೋಮಣ್ಣ, ಸುಜಾತಾ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !