ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಸೇರ್ಪಡೆಗೆ ಮುನಿಯಪ್ಪ ಆಹ್ವಾನ: ಮಾಜಿ ಶಾಸಕ ವರ್ತೂರು ಪ್ರಕಾಶ್‌

ಬೆಂಬಲಿಗರ ಸಭೆ
Last Updated 3 ಮೇ 2019, 11:01 IST
ಅಕ್ಷರ ಗಾತ್ರ

ಕೋಲಾರ: ‘ಸಂಸದ ಕೆ.ಎಚ್.ಮುನಿಯಪ್ಪ ನನ್ನನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅವರ ಮುಂದಿನ ನಡೆ ನೋಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡುವ ಬಗ್ಗೆ ತೀರ್ಮಾನಿಸೋಣ’ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್ ಹೇಳಿದರು.

ಇಲ್ಲಿ ಶುಕ್ರವಾರ ನಡೆದ ವರ್ತೂರು ಪ್ರಕಾಶ್‌ರ ಬೆಂಬಲಿಗರು, ನಮ್ಮ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿ, ‘ಮುನಿಯಪ್ಪ ಅವರು ಈಗಾಗಲೇ ನನ್ನನ್ನು ಸಂಪರ್ಕಿಸಿ ಕಾಂಗ್ರೆಸ್‌ ಸೇರ್ಪಡೆ ವಿಚಾರವಾಗಿ ಮಾತನಾಡಿದ್ದಾರೆ’ ಎಂದರು.

‘ಕಾಂಗ್ರೆಸ್‌ ಸೇರುವಂತೆ ಮುನಿಯಪ್ಪ ಅವರು ಏ.1ರೊಳಗೆ ನನಗೆ ಆಹ್ವಾನ ನೀಡದಿದ್ದರೆ ಮುಂದಿನ ನಿರ್ಧಾರ ಮಾಡೋಣ. ದುಡುಕಿ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಇನ್ನು ಕಾಲಾವಕಾಶವಿದೆ. ನಾವು ಎಷ್ಟು ದಿನ ಪಕ್ಷೇತರರಾಗಿ ಇರೋದು? ಆದಷ್ಟು ಬೇಗ ಒಂದು ಪಕ್ಷದಲ್ಲಿ ಗುರುತಿಸಿಕೊಂಡರೆ ನನ್ನ ಹಾಗೂ ಬೆಂಬಲಿಗರ ರಾಜಕೀಯ ಭವಿಷ್ಯ ಉತ್ತಮವಾಗಿರುತ್ತದೆ. ನಾನು ಶಾಸಕನಾಗಲು ಅವಕಾಶವಾಗುತ್ತದೆ’ ಎಂದು ತಿಳಿಸಿದರು.

‘ಕ್ಷೇತ್ರದಲ್ಲಿ ಸಕ್ರಿಯವಾಗಿರುವಂತೆ ಮುನಿಯಪ್ಪ ನನಗೆ ಸಲಹೆ ನೀಡಿದ್ದಾರೆ. ದುಡುಕಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡ ಎಂದು ಹೇಳಿದ್ದಾರೆ. ಸುಳ್ಳು ಭರವಸೆ ಕೊಡುವುದನ್ನು ಬಿಡಿ ಎಂದು ಅವರಿಗೆ ಹೇಳಿದ್ದೇನೆ. ಏ.1ರವರೆಗೆ ಕಾಯೋಣ, ಆಗಲೂ ಕ್ಯಾರೆ ಎನ್ನದಿದ್ದರೆ ಏ.2ರಂದು ಮುಂದಿನ ನಿರ್ಧಾರ ಕೈಗೊಳ್ಳೋಣ’ ಎಂದು ಹೇಳಿದರು.

ಶಕ್ತಿ ಕುಂದುತ್ತದೆ: ‘ದುಂಬಾಲು ಬಿದ್ದು ಕಾಂಗ್ರೆಸ್‌ ಸೇರುವುದು ಬೇಡ. ಬೆಂಬಲಿಗರು ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಒಂದೇ ತೀರ್ಮಾನದಲ್ಲಿ ಮುನ್ನಡೆಯಬೇಕು. ಭಿನ್ನ ಹಾದಿಯಲ್ಲಿ ಸಾಗಿದರೆ ಕ್ಷೇತ್ರದಲ್ಲಿ ನನ್ನ ಶಕ್ತಿ ಕುಂದುತ್ತದೆ. ಶಾಸಕ ಶ್ರೀನಿವಾಸಗೌಡರ ವಿರುದ್ಧವೇ ನಾವು ಕೆಲಸ ಮಾಡಬೇಕು ಎಂಬುದನ್ನು ಮರೆಯದಿರಿ’ ಎಂದು ಸೂಚಿಸಿದರು.

‘ಮುನಿಯಪ್ಪ ತಮ್ಮ ಕೆಲಸ ಆಗುವವರೆಗೆ ಕಾಲು ಹಿಡಿಯುತ್ತಾರೆ. ಕೆಲಸವಾದ ಮೇಲೆ ಒದಿಯುತ್ತಾರೆ. ಅವರದು ಮೊದಲಿನಿಂದಲೂ ಅದೇ ಬುದ್ಧಿ, ಏನೂ ಮಾಡುವುದಕ್ಕೆ ಆಗುವುದಿಲ್ಲ. ಕಾಂಗ್ರೆಸ್‌ ಸೇರಿದರೆ ನಮಗೆ ತೊಂದರೆ ಇರುವುದಿಲ್ಲ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯ ಸಂಬಂಧ ಮುನಿಯಪ್ಪ ನನ್ನನ್ನು ಸಂಪರ್ಕಿಸಿದ ಕಾರಣ ಅವರ ಬಣದ ಗೀತಮ್ಮ ಅಧ್ಯಕ್ಷಗಾದಿಯಲ್ಲಿ ಮುಂದುವರಿದಿದ್ದಾರೆ’ ಎಂದರು.

ವಿರೋಧಿ ಬಣ: ‘ಮುನಿಯಪ್ಪ ವಿರುದ್ಧ ಈಗಾಗಲೇ ರಮೇಶ್‌ಕುಮಾರ್‌, ಎಸ್‌.ಎನ್‌.ನಾರಾಯಣಸ್ವಾಮಿ, ಕೊತ್ತೂರು ಮಂಜುನಾಥ್‌ ಅವರನ್ನು ಒಳಗೊಂಡ ವಿರೋಧಿ ಬಣ ಸೃಷ್ಟಿಯಾಗಿದೆ. ಆದರೂ ಮುನಿಯಪ್ಪ ಇದಕ್ಕೆಲ್ಲಾ ಬೆದರದೆ ಧೈರ್ಯವಾಗಿ ಟಿಕೆಟ್ ತಂದಿದ್ದಾರೆ. ಇಂತಹ ಸಮಯದಲ್ಲಿ ಅವರಿಗೆ ನನ್ನ ಅಗತ್ಯವಿದೆ. ಆದರೂ ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ತಡ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮುನಿಯಪ್ಪ ಅವರಿಗೆ ನನ್ನನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಆಸೆಯಿದೆ. ಆದರೆ, ನಾನು ಕಾಂಗ್ರೆಸ್‌ ಸೇರಿದರೆ ತಮಗೆ ಹಣ ಇಲ್ಲವಾಗುತ್ತದೆ ಎಂದು ಆ ಪಕ್ಷದ ಜಯದೇವ್, ಕುಮಾರ್, ಊರುಬಾಗಿಲು ಶ್ರೀನಿವಾಸ್, ಉದಯ್‌ಶಂಕರ್‌ ಸೇರಿದಂತೆ ಐದಾರು ಮಂದಿ ಸಂಸದರಿಗೆ ಇಲ್ಲಸಲ್ಲದನ್ನು ಹೇಳಿ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

ನಾಲಾಯಕ್‌: ‘ಬಿಜೆಪಿ ಮುಖಂಡರು ತನ್ನ ಮನೆಗೆ ಬಂದು ₹ 5 ಕೋಟಿ ಇಟ್ಟು ಹೋದರು, ಅದು ಇದು ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿರುವ ಶ್ರೀನಿವಾಸಗೌಡರು ಶಾಸಕರಾಗಿರಲು ನಾಲಾಯಕ್‌’ ಎಂದು ನಮ್ಮ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬೆಗ್ಲಿ ಪ್ರಕಾಶ್‌ ತೀವ್ರ ವಾಗ್ದಾಳಿ ನಡೆಸಿದರು.

‘ಕಷ್ಟ ಕಾಲದಲ್ಲಿ ಸರ್ಕಾರದ ರಕ್ಷಣೆಗಾಗಿ ಮುಖ್ಯಮಂತ್ರಿಯವರು ಸೂಚಿಸಿದಂತೆ ಮಾತನಾಡಿರುವುದಾಗಿ ಶ್ರೀನಿವಾಸಗೌಡರು ಹೇಳಿದ್ದಾರೆ. ಅವರು ಇದೇನಾ ಕಲಿತಿರುವುದು? ವೀರಪ್ಪ ಮೊಯಿಲಿ ಬಳಿ ₹ 22 ಲಕ್ಷ ಪೀಕಿರುವುದು ಸೇರಿದಂತೆ ಶ್ರೀನಿವಾಸಗೌಡರ ಬಂಡವಾಳ ನನಗೆ ಗೊತ್ತಿದೆ’ ಎಂದು ಲೇವಡಿ ಮಾಡಿದರು.

‘ಹಿಂದಿನ ಬಾರಿ ಉತ್ತಮ ಮಳೆ ಬಂದು, ಉಳುಮೆ ಮಾಡಿ, ಬಿತ್ತನೆ ಸಹ ಮಾಡಿದ್ದೆವು. ಆದರೆ, ಬೆಳೆ ಸರಿಯಾಗಿ ಬಾರಲಿಲ್ಲ. ನಮ್ಮ ದುರಾದೃಷ್ಟ, ಚುನಾವಣೆಯಲ್ಲಿ ಸೋತೆವು’ ಎಂದು ವಿಧಾನಸಭಾ ಚುನಾವಣೆಯಲ್ಲಿ ವರ್ತೂರು ಪ್ರಕಾಶ್‌ರ ಸೋಲಿನ ಬಗ್ಗೆ ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಎಸ್.ವೆಂಕಟೇಶ್, ಅರುಣ್‌ಪ್ರಸಾದ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ  ಎಂ.ಆಂಜಿನಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT