ಭಾನುವಾರ, ಡಿಸೆಂಬರ್ 5, 2021
25 °C
ಹೊಸ ಕಟ್ಟಡದಲ್ಲಿ ಕಾರ್ಯನಿರ್ವಹಿಸಲು ವಿವಿಧ ಸಂಘಟನೆಗಳ ಕಾರ್ಯಕರ್ತರ ಆಗ್ರಹ

ನಾಡಕಚೇರಿ, ರೈತ ಸಂಪರ್ಕ ಕೇಂದ್ರಕ್ಕೆ ಬೀಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್: ನಿರ್ಮಾಣವಾಗಿಯೂ ಉದ್ಘಾಟನೆಯಾಗದ ಸರ್ಕಾರಿ ಕಚೇರಿಗಳನ್ನು ಕೂಡಲೇ ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಬುಧವಾರ ನಾಡಕಚೇರಿ ಮತ್ತು ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಕ್ಯಾಸಂಬಳ್ಳಿಯಲ್ಲಿ ನಡೆದಿದೆ.

‘ನಾಡಕಚೇರಿ ಮತ್ತು ರೈತ ಸಂಪರ್ಕ ಕೇಂದ್ರಕ್ಕೆ ಸರ್ಕಾರ ಸುಸಜ್ಜಿತ ಕಟ್ಟಡವನ್ನು ಕಟ್ಟಿಕೊಟ್ಟಿದ್ದರೂ, ರಾಜಕೀಯ ಕಾರಣಗಳಿಂದಾಗಿ ಅವುಗಳನ್ನು ಉದ್ಘಾಟನೆ ಮಾಡದೆ, ಬೀಗ ಹಾಕಿಟ್ಟುಕೊಳ್ಳಲಾಗಿದೆ. ಹಳೇ ಕಟ್ಟಡಗಳಲ್ಲಿ ಸಾರ್ವಜನಿಕರ ಕೆಲಸಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಹಲವಾರು ಬಾರಿ ಮನವಿ ಮಾಡಿದ್ದರೂ, ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.

‘ಕ್ಯಾಸಂಬಳ್ಳಿ ಸುತ್ತಮುತ್ತಲಿನ ನೂರಾರು ಹಳ್ಳಿಗಳ ವಿದ್ಯಾರ್ಥಿಗಳಿಗೆ ಪ್ರೌಢಶಾಲೆಯ ನಂತರದ ವಿದ್ಯಾಭ್ಯಾಸ ಮರೀಚಿಕೆ ಆಗುತ್ತಿದೆ. ಸಾವಿರಾರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಾಲೇಜು ಸ್ಥಾಪನೆ ಮಾಡಬೇಕೆಂದು ಸಾರ್ವಜನಿಕರು ಹೋರಾಟಗಳನ್ನು ರೂಪಿಸಿಕೊಂಡು ಬರುತ್ತಿದ್ದಾರೆ. ಸ್ಥಳೀಯ ಅಧಿಕಾರಿಗಳು ಮತ್ತು ಶಾಸಕರು ಕೂಡ ಈ ನಿಟ್ಟಿನಲ್ಲಿ ಶಿಫಾರಸ್ಸು ಮಾಡಿದ್ದಾರೆ. ಆದರೆ ಸರ್ಕಾರದ ಹಂತದಲ್ಲಿ ಮಂಜೂರಾತಿ ದೊರೆಕಿಲ್ಲ. ಅದೇ ರೀತಿ ಪ್ರೌಢಶಾಲೆಗೆ ಕೂಡ ಜಮೀನನ್ನು ತಾಲ್ಲೂಕು ಆಡಳಿತ ನೀಡಿಲ್ಲ’ ಎಂದು ಆರೋಪಿಸಲಾಯಿತು.

ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಸ್ವಂತ ಊರಿನಲ್ಲಿ ಸರ್ಕಾರದ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಗ್ರಾಮ ಪಂಚಾಯಿತಿ ಕಚೇರಿಯ ಮುಂಭಾಗದ ರಸ್ತೆಯಲ್ಲಿಯೇ ಕಸದ ರಾಶಿ ತುಂಬಿ ತುಳುಕುತ್ತಿದೆ. ಅವುಗಳ ಸ್ವಚ್ಛತೆ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಲಾಯಿತು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್‌ ಗ್ರಾಮದಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಲು ಯತ್ನಿಸಿದರು. ವಿಧಾನ ಪರಿಷತ್ ಚುನಾವಣೆ ನಂತರ ನಾಡ ಕಚೇರಿಯನ್ನು ಸಾರ್ವಜನಿಕ
ಸೇವೆಗೆ ಬಳಸುವುದಾಗಿ ರಾಜಸ್ವ ನಿರೀಕ್ಷಕ ನಾರಾಯಣಸ್ವಾಮಿ ಭರವಸೆ ನೀಡಿದರು.

ಮುಖಂಡರಾದ ಸೋಮಸುಂದರರೆಡ್ಡಿ, ಕರ್ನಾಟಕ ಸಿಂಹ ಘರ್ಜನೆ ವೇದಿಕೆಯ ಪ್ರಸನ್ನಕುಮಾರ ಸ್ವಾಮಿ, ಮಂಜುನಾಥ್, ಯುಗೇಂದ್ರ, ಶ್ರೀನಿವಾಸರೆಡ್ಡಿ, ಕೆಆರ್‌ಎಸ್ ಸಂಘಟನೆಯ ರಮೇಶ್, ಪೌಲ್, ಮಂಜುನಾಥ್‌, ವಿಜಯರೆಡ್ಡಿ, ಗ್ರಾಮದ ಮುಖಂಡರಾದ ರಾಜಾರೆಡ್ಡಿ, ಮಂಜುನಾಥ ರೆಡ್ಡಿ, ರಾಮರೆಡ್ಡಿ, ಅಮರೇಶ್‌, ಕಣ್ಣಪ್ಪ, ಶಂಕರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.