ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊತ್ತೂರು’ ಜಾಗ ಖಾಲಿ ಮಾಡಿಸುತ್ತೇನೆ: ಮಾಜಿ ಸಂಸದ ಮುನಿಯಪ್ಪ

Last Updated 2 ಜನವರಿ 2021, 13:00 IST
ಅಕ್ಷರ ಗಾತ್ರ

ಕೋಲಾರ: ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮುಳಬಾಗಿಲು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಿ ಸಚಿವ ನಾಗೇಶ್‌ ಮತ್ತು ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ರ ಜಾಗ ಖಾಲಿ ಮಾಡಿಸುತ್ತೇನೆ’ ಎಂದು ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಕುಟುಕಿದರು.

ಕೋಲಾರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾ.ಪಂಗಳಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ ಬೆಂಬಲಿತ ಸದಸ್ಯರಿಗೆ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ‘ನಾಗೇಶ್‌ ಮುಳಬಾಗಿಲಿನಲ್ಲಿ ಕಾಂಗ್ರೆಸ್‌ ಬೆಂಬಲಿತರಾಗಿ ಗೆದ್ದಿರುವುದನ್ನು ಮರೆತಿದ್ದಾರೆ. ಹಿಂದೆ ಕಾಂಗ್ರೆಸ್‌ನಲ್ಲಿ ಇದ್ದ ಕೊತ್ತೂರು ಮಂಜು ಈಗ ದಾರಿ ಬದಲಿಸಿದ್ದಾರೆ. ಆ ಇಬ್ಬರೂ ಬಿಜೆಪಿ ಸೇರಿದ್ದಾರೆ’ ಎಂದು ಟೀಕಿಸಿದರು.

‘ನಾನು ಕಾಂಗ್ರೆಸ್‌ನಲ್ಲಿ ಬೆಳೆಸಿದ ವ್ಯಕ್ತಿಗಳು ಪಕ್ಷ ಬಿಟ್ಟು ಹೋಗಿ ಸಾಕಷ್ಟು ತಪ್ಪು ಮಾಡಿದ್ದಾರೆ. ಮುಂದೆ ಅಂತಹ ತಪ್ಪು ಮರುಕಳಿಸಲು ಅವಕಾಶ ಕೊಡುವುದಿಲ್ಲ. ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಹೊರಗಿನ ವ್ಯಕ್ತಿಗಳನ್ನು ಕರೆತಂದು ಚುನಾವಣೆಗೆ ನಿಲ್ಲಿಸುವ ಕೆಲಸ ಮಾಡಲ್ಲ. ಸ್ಥಳೀಯ ಮುಖಂಡರು, ಕಾರ್ಯಕರ್ತರು ಸೂಚಿಸಿದ ವ್ಯಕ್ತಿಯನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುವ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು.

‘ಕಾಂಗ್ರೆಸ್‌ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ. ಇದು ವ್ಯಕ್ತಿ ಅಥವಾ ಕುಟುಂಬ ಕೇಂದ್ರಿತ ಪಕ್ಷವಲ್ಲ. ಪಕ್ಷದಲ್ಲಿ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಕಲ್ಪಿಸುತ್ತೇವೆ. ಗ್ರಾ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿರುವುದು ಮುಂದಿನ ಸಾರ್ವತ್ರಿಕ ಚುನಾವಣೆಗಳ ಫಲಿತಾಂಶಕ್ಕೆ ದಿಕ್ಸೂಚಿ. ಜಿ.ಪಂ, ತಾ.ಪಂ ಚುನಾವಣೆಗೆ ಈಗಿನಿಂದಲೇ ಸಿದ್ಧರಾಗಬೇಕು’ ಎಂದು ಸಲಹೆ ನೀಡಿದರು.

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪಕ್ಷ ಸಂಘಟನೆಗೆ ಒತ್ತು ನೀಡುವುದರ ಜತೆಗೆ ಮುಂದಿನ ವಿಧಾನಸಭಾ ಚುನಾವಣೆ ಎದುರಿಸಲು ಈಗಿನಿಂದಲೇ ತಂತ್ರ ರೂಪಿಸುತ್ತಿದ್ದಾರೆ. ಅವರ ಸೂಚನೆಯಂತೆ ಬೂತ್ ಹಾಗೂ ವಿವಿಧ ಕಮಿಟಿಗಳ ರಚನೆ ಶೀಘ್ರದಲ್ಲೇ ಮುಗಿಯಬೇಕು’ ಎಂದು ಸೂಚಿಸಿದರು.

ಅಪಪ್ರಚಾರ: ‘ಮಾಜಿ ಶಾಸಕ ವರ್ತೂರು ಪ್ರಕಾಶ್ ತಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ ಎಂದು ಗ್ರಾ.ಪಂ ಚುನಾವಣೆ ವೇಳೆ ಅಪಪ್ರಚಾರ ಮಾಡಿದರು. ಇಲ್ಲದಿದ್ದರೆ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲುತ್ತಿದ್ದರು’ ಎಂದು ಕಾಂಗ್ರೆಸ್ ಕಿಸಾನ್ ಖೇತ್ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್ ಕಿಡಿಕಾರಿದರು.

‘ವಿಧಾನಸಭೆ ವ್ಯಾಪ್ತಿಯ 19 ಗ್ರಾ.ಪಂಗಳಲ್ಲೂ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಈ ಫಲಿತಾಂಶ ಮುಂದಿನ ಚುನಾವಣೆಗಳ ಮೇಲೆ ಪರಿಣಾಮ ಬೀರಲಿದೆ. ಜಿ.ಪಂ, ತಾ.ಪಂ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಸಿದ್ಧಾಂತಕ್ಕೆ ಬದ್ಧರಾಗಿ: ‘ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ನಾಯಕತ್ವ ಗುಣವಿದೆ ಮತ್ತು ಹೋರಾಡುವ ಶಕ್ತಿಯಿದೆ. ಈ ಹಿಂದೆ ಅಗಿರುವ ತಪ್ಪು ಮರೆತು ಮುನಿಯಪ್ಪ ಅವರಿಗೆ ಬೆಂಬಲವಾಗಿ ನಿಲ್ಲಬೇಕು. ಮಾತೃ ಪಕ್ಷದ ಬಲದಿಂದ ಗೆದ್ದಿರುವ ಸದಸ್ಯರು ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರಬೇಕು. ಹಳ್ಳಿ ಮಟ್ಡದಿಂದ ಪಕ್ಷ ಸಂಘಟಿಸಬೇಕು’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಉಪಾಧ್ಯಕ್ಷ ಎಲ್‌.ಎ.ಮಂಜುನಾಥ್‌ ಕಿವಿಮಾತು ಹೇಳಿದರು.

ಹಾಪ್‌ಕಾಮ್ಸ್ ಉಪಾಧ್ಯಕ್ಷ ಗೋಪಾಲಗೌಡ, ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಎಸ್.ಮಂಜುನಾಥ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್‌ಶಂಕರ್, ನಗರ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಪ್ರಸಾದ್‌ಬಾಬು, ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT