ಕೆಜಿಎಫ್: ನಗರ ಹೊರವಲಯದ ಚಂಬರಸನಹಳ್ಳಿಯಲ್ಲಿ ಬುಧವಾರ ನವಜೋಡಿ ಹಸೆಮಣೆ ಏರಿ ಕೆಲಹೊತ್ತಿನಲ್ಲೇ ಪರಸ್ಪರ ಬಡಿದಾಡಿಕೊಂಡಿದ್ದ ಪ್ರಕರಣದಲ್ಲಿ ಗಾಯಗೊಂಡಿದ್ದ ವರನೂ ಗುರುವಾರ ಮೃತಪಟ್ಟಿದ್ದಾರೆ.
ತೀವ್ರ ಹಲ್ಲೆ ಒಳಗಾಗಿದ್ದ ವಧು ಮದುವೆ ದಿನವೇ ಮೃತಪಟ್ಟಿದ್ದರು. ಹೊಸ ಬದುಕಿಗೆ ಕಾಲಿಡಬೇಕಿದ್ದ ವಧು ವರರಿಬ್ಬರೂ ಈಗ ಮಸಣ ಸೇರಿದಂತಾಗಿದೆ.
ಆಂಧ್ರಪ್ರದೇಶದ ಸಂತೂರು ಗ್ರಾಮದ ನವೀನ್ ಕುಮಾರ್ (27) ಹಾಗೂ ಕೆಜಿಎಫ್ ತಾಲ್ಲೂಕಿನ ಬೈನೇಹಳ್ಳಿಯ ಲಿಖಿತಾಶ್ರೀ (20) ಮೃತ ನವದಂಪತಿ.
ಮುಂಜಾನೆ 6 ಗಂಟೆಗೆ ನಗುನಗುತ್ತಲೇ ಹಸೆಮಣೆ ಏರಿದ್ದ ಜೋಡಿ ಸಂಜೆ ವೇಳೆಗೆ ಕೊಠಡಿ ಬಾಗಿಲು ಹಾಕಿಕೊಂಡು ಕಿರಿಕ್ ಮಾಡಿಕೊಂಡು ಜಗಳವಾಡಲು ಕಾರಣವೇನು ಎಂಬ ಪ್ರಶ್ನೆ ಸದ್ಯಕ್ಕೆ ನಿಗೂಢವಾಗಿಯೇ ಉಳಿದಿದೆ. ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಮದುವೆ ದಿನದ ಸಂಜೆ 5ಗಂಟೆ ಸುಮಾರಿಗೆ ನವೀನ್‌ಕುಮಾರ್ ಮತ್ತು ಲಿಖಿತಾಶ್ರೀ ಸಂಬಂಧಿಕರ ಮನೆಗೆ ಚಹಾ ಸೇವಿಸಲು ಒಟ್ಟಿಗೆ ಹೋಗಿದ್ದರು. ಆ ಸಂದರ್ಭದಲ್ಲಿ ಯಾವುದೇ ವೈಮನಸ್ಯದ ಕುರುಹು ಕೂಡ ಕಂಡು ಬಂದಿರಲಿಲ್ಲ. ಚಹಾ ನೀಡಿದ ಸಂಬಂಧಿಕರ ಮಹಿಳೆ ಮಗುವನ್ನು ಕರೆದುಕೊಂಡು ಹೊರಗೆ ಹೋದ ತಕ್ಷಣ ಜಗಳ ಶುರುವಾಗಿ ದುರಂತ ನಡೆದು ಹೋಗಿದೆ.
ತೀವ್ರವಾಗಿ ಗಾಯಗೊಂಡಿದ್ದ ನವೀನ್ ಕುಮಾರ್ ಕೋಲಾರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಬೆಳಿಗ್ಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ. ಆತನನ್ನು ಉಳಿಸಿಕೊಳ್ಳಲು ಪೋಷಕರು ನಡೆಸಿದ ಪ್ರಯತ್ನ ವಿಫಲವಾಗಿದೆ.
ಪೊಲೀಸರು ನಡೆಸುತ್ತಿರುವ ಪ್ರಾಥಮಿಕ ತನಿಖೆಯ ಪ್ರಕಾರ ಹುಡುಗ ಮತ್ತು ಹುಡುಗಿ ಇಬ್ಬರೂ ಮದುವೆಯಾಗಲು ತುದಿಗಾಲಿನಲ್ಲಿ ನಿಂತಿದ್ದರು. ಕಲ್ಯಾಣ ಮಂಟಪದಲ್ಲಿ ದುಂದು ವೆಚ್ಚ ಮಾಡಿ ಮದುವೆ ಮಾಡುವುದು ಬೇಡ. ಮನೆಯಲ್ಲಿಯೇ ಮದುವೆಯಾಗೋಣ ಎಂಬ ಒಪ್ಪಂದವನ್ನೂ ಮಾಡಿಕೊಳ್ಳಲಾಗಿತ್ತು. ಅದರಂತೆ ಚಂಬರಸನಹಳ್ಳಿಯಲ್ಲಿರುವ ನವೀನ್‌ಕುಮಾರ್ ಅವರ ಅಕ್ಕ ಮೋನಿಕಾ ಅವರ ಮನೆಯಲ್ಲಿ ಮದುವೆ ನಡೆದಿದೆ. ಮದುವೆಯ ಹಿಂದಿನ ದಿನವೇ ನವೀನ್‌ಕುಮಾರ್ ಕುಟುಂಬ ಚಂಬರಸನಹಳ್ಳಿಗೆ ಬಂದು ವಾಸ್ತವ್ಯ ಮಾಡಿದ್ದರು.
ಮನೆಯ ಬಾಗಿಲು ಹಾಕಿಕೊಂಡಿದ್ದನ್ನು ಗಮನಿಸಿದ ಕುಟುಂಬಸ್ಥರು, ಹೊಸದಾಗಿ ಮದುವೆಯಾಗಿದ್ದಾರೆ ಎಂಬ ಭಾವನೆಯಲ್ಲಿ ಸುಮ್ಮನಿದ್ದರು. ಆದರೆ ಒಳಗೆ ಕಿರುಚಾಟ ಮತ್ತು ನರಳಾಟ ಕೇಳಿ ಬಂದಿದ್ದರಿಂದ ಕಿಟಕಿಯಲ್ಲಿ ನೋಡಿದ್ದಾರೆ. ಆಗ ಲಿಖಿತಾಶ್ರೀ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ನವೀನ್‌ಕುಮಾರ್ ಮಚ್ಚಿನಲ್ಲಿ ತನ್ನ ಮೇಲೆಯೇ ಹಲ್ಲೆ ಮಾಡಿಕೊಂಡು ಕತ್ತು ಕತ್ತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ದುರ್ಘಟನೆಯನ್ನು ನೋಡಿ ಗಾಬರಿಯಾದ ಸಂಬಂಧಿಕರು ಮನೆಯ ಬಾಗಿಲು ಒಡೆದು ಒಳ ಪ್ರವೇಶಿಸಿ ಇಬ್ಬರನ್ನೂ ರಾಬರ್ಟಸನ್ ಪೇಟೆಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು.
ಮೃತಪಟ್ಟ ಇಬ್ಬರ ಮರಣೋತ್ತರ ಪರೀಕ್ಷೆಯನ್ನು ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ನಡೆಸಲಾಯಿತು. ಮೃಲಿಖಿತಾಶ್ರೀ ಅವರ ಅಂತ್ಯಸಂಸ್ಕಾರ ಬೈನೇಪಲ್ಲಿ ಗ್ರಾಮದಲ್ಲಿ ಗುರುವಾರ ನಡೆಯಿತು.
ಘಟನೆಗೆ ಸಂಬಂಧಿಸಿದಂತೆ ಪೋಷಕರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೆಜಿಎಫ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರೀತಿಸಿ ಮದುವೆಯಾಗಿದ್ದ ಜೋಡಿ ಮಧುಚಂದ್ರಕ್ಕೆ ತೆರಳಬೇಕಿದ್ದ ನವ ಜೋಡಿ ಮಸಣಕ್ಕೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ
ವಧು ವರರಿಬ್ಬರೂ ದೂರದ ಸಂಬಂಧಿ ರಾಜಪೇಟೆ ರಸ್ತೆಯಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ ನವೀನ್ ಕುಮಾರ್ ಮತ್ತು ಲಿಖಿತಾಶ್ರೀ ಲೆಕ್ಕಾಚಾರದಲ್ಲಿ ದೂರದ ಸಂಬಂಧಿಗಳೇ. ಆರು ತಿಂಗಳ ಹಿಂದೆಯೇ ಪರಿಚಯಸ್ಥರೊಬ್ಬರ ಸಮ್ಮುಖದಲ್ಲಿ ವಧು ನೋಡುವ ಶಾಸ್ತ್ರ ನಡೆದಿತ್ತು. ಆಷಾಢ ಮುಗಿದ ನಂತರ ಮದುವೆ ಶಾಸ್ತ್ರ ಇಟ್ಟುಕೊಳ್ಳಲು ಎರಡೂ ಕುಟುಂಬಗಳು ಸಹಮತ ಸೂಚಿಸಿದ್ದವು. ಇವರಿಬ್ಬರ ಮದುವೆ ವಿಚಾರದಲ್ಲಿ ಒಮ್ಮೆ ಮಾತುಕತೆ ಮುರಿದು ಬಿದ್ದಿತ್ತು. ಮತ್ತೊಮ್ಮೆ ನಡೆಸಿದ್ದ ಮಾತುಕತೆ ಫಲಪ್ರದವಾಗಿತ್ತು.
ಮೂರನೇ ವ್ಯಕ್ತಿಯ ಕೈವಾಡ ಶಂಕೆ ವಧು ಹಾಗೂ ವರ ಬಡಿದಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರನೇ ವ್ಯಕ್ತಿಯ ಕೈವಾಡ ಇರುವ ಬಗ್ಗೆ ಲಿಖಿತಶ್ರೀ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ. ವಧುವಿನ ತಾತ ಹಾಗೂ ತಂಗಿ ಮೂರನೇ ವ್ಯಕ್ತಿಯ ಕೈವಾಡದ ಬಗ್ಗೆ ಆರೋಪ ಮಾಡಿದ್ದಾರೆ. ‘ಇಬ್ಬರೂ ಬಹಳಷ್ಟು ಅನ್ಯೋನ್ಯವಾಗಿದ್ದವರು ಪ್ರೀತಿಸಿ ಮದುವೆಯಾಗಿದ್ದವರು. ಮದುವೆ ದಿನವೂ ನಗುನಗುತ್ತಾ ಇದ್ದರು. ಹೀಗಾಗಿ ಯಾರೋ ಮೂರನೇ ವ್ಯಕ್ತಿ ಈ ದುರ್ಘಟನೆಯ ಹಿಂದೆ ಇದ್ದಾರೆ’ ಎಂದು ಆರೋಪಿಸಿದ್ದಾರೆ.
ಪ್ರಾಥಮಿಕ ತನಿಖೆ–ಮನಃಸ್ತಾಪದಿಂದ ಹಲ್ಲೆ ರೂಮ್‌ನೊಳಗೆ ಹೋದಾಗ ಇಬ್ಬರ ನಡುವೆ ಮನಃಸ್ತಾಪ ಬಂದಿದೆ. ವರ ನವೀನ್ ಹರಿತವಾದ ಆಯುಧದಿಂದ ಲಿಖಿತಾಶ್ರೀಗೆ ಹೊಡೆದಿರುವುದು ನಂತರ ತನ್ನ ಮೇಲೂ ಹಲ್ಲೆ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಮನಃಸ್ತಾಪಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಅಲ್ಲಿದ್ದವರನ್ನು ತನಿಖೆ ನಡೆಸಿ ಮಾಹಿತಿ ಕಲೆಹಾಕುತ್ತಿದ್ದೇವೆ. ಇದರ ಹಿಂದೆ ಮೂರನೇ ವ್ಯಕ್ತಿ ಯಾರಾದರೂ ಇದ್ದಾರೆಯೇ ಎಂಬ ದೃಷ್ಟಿಕೋನದಲ್ಲೂ ನೋಡುತ್ತೇವೆ. ರಾಬರ್ಟಸನ್‌ಪೇಟೆ ಪೊಲೀಸ್ ಇನ್‌ಸ್ಪೆಕ್ಟರ್ ನವೀನ್ ತನಿಖೆ ನಡೆಸುತ್ತಿದ್ದಾರೆ –ಕೆ.ಎಂ.ಶಾಂತರಾಜು ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.