ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಕಾಸ್‌ ನೋಟಿಸ್‌ ಜಾರಿಗೆ ಆದೇಶ

ಸಾಮಾನ್ಯ ಸಭೆಗೆ ಅಧಿಕಾರಿಗಳ ಗೈರು: ತಾ.ಪಂ. ಅಧ್ಯಕ್ಷ ಸಿಡಿಮಿಡಿ
Last Updated 4 ಜೂನ್ 2020, 13:51 IST
ಅಕ್ಷರ ಗಾತ್ರ

ಕೋಲಾರ: ಇಲ್ಲಿ ಗುರುವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ ಗೈರಾದ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡುವಂತೆ ತಾ.ಪಂ ಅಧ್ಯಕ್ಷ ಎಂ.ಆಂಜಿನಪ್ಪ ಕಾರ್ಯ ನಿರ್ವಹಣಾಧಿಕಾರಿಗೆ ಆದೇಶಿಸಿದರು.

ಸಭೆಯ ಸಂಬಂಧ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮುಂಚಿತವಾಗಿ ತಿಳಿವಳಿಕೆ ಪತ್ರ ಕಳುಹಿಸಲಾಗಿತ್ತು. ಆದರೂ ಸಾಕಷ್ಟು ಇಲಾಖೆ ಅಧಿಕಾರಿಗಳು ಸಭೆಗೆ ಬರಲಿಲ್ಲ. ಇದರಿಂದ ಸಿಡಿಮಿಡಿಗೊಂಡ ಅಧ್ಯಕ್ಷರು, ‘ಜನಪ್ರತಿನಿಧಿಗಳು ಕರೆದ ಸಭೆಗೆ ಬಾರದೆ ಬೇಜವಾಬ್ದಾರಿ ತೋರುವ ಅಧಿಕಾರಿಗಳಿಗೆ ತಕ್ಕ ಶಾಸ್ತಿ ಮಾಡಬೇಕು’ ಎಂದು ಗುಡುಗಿದರು.

‘ಅಧಿಕಾರಿಗಳು ಪ್ರತಿ ಸಭೆಗೂ ಗೈರಾಗುತ್ತಿರುವುದು ಅವರ ನಿರ್ಲಕ್ಷ್ಯತೆಯನ್ನು ಎತ್ತಿ ತೋರಿಸುತ್ತದೆ. ಹಿರಿಯ ಅಧಿಕಾರಿಗಳು ಕೆಳ ಹಂತದ ಸಿಬ್ಬಂದಿಯನ್ನು ಸಭೆಗೆ ಕಳುಹಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಕೆಳ ಹಂತದ ಸಿಬ್ಬಂದಿ ಸಭೆಗೆ ಸರಿಯಾಗಿ ಮಾಹಿತಿ ನೀಡುವುದಿಲ್ಲ. ತಹಶೀಲ್ದಾರ್‌ ಸೇರಿದಂತೆ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಸಭೆಗೆ ಹಾಜರಾಗಬೇಕು’ ಎಂದು ಸೂಚಿಸಿದರು.

‘ಲಾಕ್‌ಡೌನ್‌ ವೇಳೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಿಬ್ಬಂದಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. 5 ಕಿ.ಮೀ ದೂರದಲ್ಲಿರುವವರಿಗೆ ಉಚಿತವಾಗಿ ಮನೆ ಬಾಗಿಲಿಗೆ ಅಡುಗೆ ಅನಿಲ ಸಿಲಿಂಡರ್ ಕೊಡಬೇಕೆಂದು ಕೇಂದ್ರ ಸರ್ಕಾರದ ನಿಯಮವಿದ್ದರೂ ಏಜೆನ್ಸಿಗಳು ಈ ನಿಯಮ ಪಾಲಿಸುತ್ತಿಲ್ಲ. ಇಂತಹ ಏಜೆನ್ಸಿ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿ’ ಎಂದು ಸೂಚನೆ ನೀಡಿದರು.

ಗೊಬ್ಬರ ದಾಸ್ತಾನು: ‘ತಾಲ್ಲೂಕಿನಲ್ಲಿ ಮಳೆಗಾಲ ಆರಂಭವಾಗಿದ್ದು, ಕೃಷಿ ಇಲಾಖೆಯವರು ರೈತರಿಗೆ ಬೇಕಾದ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಬೇಡಿಕೆಗೆ ತಕ್ಕಂತೆ ದಾಸ್ತಾನು ಮಾಡಬೇಕು. ಯಾವುದೇ ಕಾರಣಕ್ಕೂ ಬೀಜ, ಗೊಬ್ಬರದ ಕೊರತೆ ಆಗಬಾರದು’ ಎಂದು ತಾಕೀತು ಮಾಡಿದರು.

‘ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಶಾಲೆಗಳನ್ನು ತೆರೆಯುವ ವಿಚಾರವಾಗಿ ಸರ್ಕಾರದ ಮಟ್ಟದಲ್ಲಿ ಗೊಂದಲದಲ್ಲಿದೆ. ಈ ಗೊಂದಲ ನಿವಾರಣೆ ಆಗುವವರೆಗೂ ಶಾಲೆ ಆರಂಭಕ್ಕೆ ಅವಕಾಶ ನೀಡಬಾರದು. ದುಡುಕದೆ ಪೋಷಕರ ಅಭಿಪ್ರಾಯ ಆಧರಿಸಿ ಶಾಲೆ ತೆರೆಯಬೇಕು’ ಎಂದರು.

ಸುರಕ್ಷತಾ ಕ್ರಮ: ‘ಕೃಷಿ ಹೊಂಡಗಳ ಬಳಿ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಇದರಿಂದ ಕೃಷಿ ಹೊಂಡಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾವು ಸಂಭವಿಸುತ್ತಿವೆ. ಕೃಷಿ ಹೊಂಡಗಳ ಸುತ್ತ ತಂತಿ ಬೇಲಿ ಅಳವಡಿಸುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಸೂಚನೆ ನೀಡಬೇಕು. ಸುರಕ್ಷತಾ ಕ್ರಮದ ಸಂಬಂಧ ತಾ.ಪಂ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಬೇಕು’ ಎಂದು ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್‌ ಸಲಹೆ ನೀಡಿದರು.

‘ರೈತರ ಅನುಕೂಲಕ್ಕಾಗಿ ನರೇಗಾ ಅಡಿ ಜಮೀನುಗಳಲ್ಲಿ ಬದು ನಿರ್ಮಾಣಕ್ಕೆ ಸರ್ಕಾರ ಪ್ರೋತ್ಸಾಹಧನ ನೀಡುತ್ತಿದೆ. ನರೇಗಾದಲ್ಲಿ ಹೆಚ್ಚುವರಿ ಮಾನವ ದಿನ ಸೃಜಿಸಲು ಅವಕಾಶ ನೀಡಬೇಕು. ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ 5 ಸಾವಿರ ಗಿಡಗಳಂತೆ ಒಟ್ಟಾರೆ ತಾಲ್ಲೂಕಿನಲ್ಲಿ ಸುಮಾರು 1 ಲಕ್ಷ ಸಸಿ ನೆಡಬೇಕು’ ಎಂದು ತಾ.ಪಂ ಸದಸ್ಯ ಗೋಪಾಲರೆಡ್ಡಿ ಹೇಳಿದರು.

ತಾ.ಪಂ ಉಪಾಧ್ಯಕ್ಷೆ ಲಕ್ಷ್ಮೀ, ಸದಸ್ಯರು ಹಾಗೂ ಕಾರ್ಯ ನಿರ್ವಹಣಾಧಿಕಾರಿ ಬಾಬು, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT