ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪರ ಬಜೆಟ್‌, ತೆರಿಗೆ ಹೆಚ್ಚಿಸಿಲ್ಲ: ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೇಣುಗೋಪಾಲ್

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೇಣುಗೋಪಾಲ್ ಮೆಚ್ಚುಗೆ
Last Updated 12 ಮಾರ್ಚ್ 2021, 15:31 IST
ಅಕ್ಷರ ಗಾತ್ರ

ಕೋಲಾರ: ‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡಿಸಿರುವ ಪ್ರಸಕ್ತ ಹಣಕಾಸು ವರ್ಷದ ಬಜೆಟ್ ಜನಪರವಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್ ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಯಾವುದೇ ತೆರಿಗೆ ಹೆಚ್ಚಳ ಮಾಡದೆ ಕೋವಿಡ್ ಸಂಕಷ್ಟದಲ್ಲೂ ಆರ್ಥಿಕ ಸುಭದ್ರತೆ ಕಾಯ್ದುಕೊಳ್ಳಲು ಒತ್ತು ಕೊಟ್ಟಿದ್ದಾರೆ. ಬಜೆಟ್‌ನಲ್ಲಿ ಎಲ್ಲಾ ವರ್ಗದ ಜನರಿಗೂ ಆದ್ಯತೆ ನೀಡಲಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಯಡಿಯೂರಪ್ಪ ಅವರು ಅಧಿಕಾರ ಸ್ವೀಕರಿಸಿದಾಗ ರಾಜ್ಯದಲ್ಲಿ ಬರ ಪರಿಸ್ಥಿತಿಯಿತ್ತು. ನಂತರ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿ ಬೆಳೆ ನಾಶವಾಯಿತು. ಇದರಿಂದ ಜನ ಸಾಕಷ್ಟು ಸಮಸ್ಯೆ ಎದುರಿಸಿದರು. ಬಳಿಕ ಕೋವಿಡ್‌ ಅರ್ಥ ವ್ಯವಸ್ಥೆಗೆ ದೊಡ್ಡ ಪೆಟ್ಟು ಕೊಟ್ಟಿತು. ಇಷ್ಟೆಲ್ಲಾ ಸವಾಲುಗಳ ಮಧ್ಯೆಯೂ ಯಡಿಯೂರಪ್ಪ ಅವರು ಉತ್ತಮ ಬಜೆಟ್ ಮಂಡಿಸಿದ್ದಾರೆ’ ಎಂದು ಹೇಳಿದರು.

‘ಆಯವ್ಯಯದಲ್ಲಿ ಕೃಷಿ ಕ್ಷೇತ್ರ ಹಾಗೂ ಮಹಿಳೆಯರ ಹಿತ ರಕ್ಷಣೆಗೆ ಆದ್ಯತೆ ನೀಡಲಾಗಿದೆ. ಸಾವಯವ ಕೃಷಿಗೆ ₹ 500 ಕೋಟಿ, ದೊಡ್ಡ ರೈತರಿಗೆ ಗೋದಾಮು ನಿರ್ಮಾಣಕ್ಕೆ, ಅಡಿಕೆ ಬೆಳೆಯಲ್ಲಿನ ಹಳದಿ ರೋಗ ತಡೆಗೆ ವಿಶೇಷ ಯೋಜನೆ, ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ಆರಂಭ, ದೇಸಿ ತಳಿಗಳ ರಕ್ಷಣೆಯಂತಹ ಯೋಜನೆಗಳನ್ನು ಘೋಷಿಸಲಾಗಿದೆ. ನೀರಾವರಿ ಯೋಜನೆಗಳಿಗೆ ₹ 21 ಸಾವಿರ ಕೋಟಿ ಮೀಸಲಿಡಲಾಗಿದೆ’ ಎಂದರು.

‘ಸರ್ಕಾರ ಕೋಲಾರ ಜಿಲ್ಲೆಗೆ ತರಕಾರಿ, ಹಣ್ಣು ಸಂಸ್ಕರಣಾ ಘಟಕ, ಕೈಗಾರಿಕಾ ವಲಯ ವಿಸ್ತರಣೆ, ಸುಸಜ್ಜಿತ ತೀವ್ರ ನಿಗಾ ಘಟಕ, ಉನ್ನತ ಪ್ರಯೋಗಾಲಯ ಹಾಗೂ ಎತ್ತಿನಹೊಳೆ ಯೋಜನೆ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಜಾರಿಗೊಳಿಸಲಿದೆ. ಅಧಿವೇಶನ ನಡೆಯುತ್ತಿದ್ದು, ವಿಧಾನ ಪರಿಷತ್ ಸದಸ್ಯರು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಜಿಲ್ಲೆಗೆ ಅನುದಾನ ಬಿಡುಗಡೆ ಮಾಡಿಸುತ್ತಾರೆ’ ಎಂದು ಭರವಸೆ ನೀಡಿದರು.

ವೈದ್ಯಕೀಯ ಕಾಲೇಜು: ‘ಬಜೆಟ್‌ನಲ್ಲಿ ಜಿಲ್ಲೆಗೆ ಯಾವುದೇ ಘೋಷಿಸದೆ ಇರಬಹುದು. ಆದರೆ, ಇನ್ನೂ ಕಾಲಾವಕಾಶವಿದೆ. ಪೂರಕ ಬಜೆಟ್‌ನಲ್ಲಿ ಜಿಲ್ಲೆಯ ಯೋಜನೆಗಳನ್ನು ಸೇರಿಸುತ್ತಾರೆ. ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಮನವಿಗೆ ಮನ್ನಣೆ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡರಾದ ಎಸ್.ಬಿ.ಮುನಿವೆಂಕಟಪ್ಪ, ಬಾಲಾಜಿ, ತಿಮ್ಮರಾಯಪ್ಪ, ಕೃಷ್ಣಮೂರ್ತಿ, ವಿಜಯ್‌ಕುಮಾರ್, ನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT