ಶುಕ್ರವಾರ, ಏಪ್ರಿಲ್ 23, 2021
21 °C
ಶ್ರೀನಿವಾಸಸಂದ್ರ ಗ್ರಾಮ ಪಂಚಾಯಿತಿ

ಕೋರಂ ಕೊರತೆ: ಗ್ರಾ.ಪಂ ಸಭೆ ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್: ಶ್ರೀನಿವಾಸಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗೆ ಸಂಬಂಧಿಸಿದಂತೆ ವಿವಾದ ಹೈಕೋರ್ಟ್‌ ಮೆಟ್ಟಿಲೇರಿದ್ದು, ನ್ಯಾಯಾಲಯ ನೀಡಿದ್ದ ನೋಟಿಸ್‌ ಪಡೆಯಲು ಬಿಜೆಪಿ ಬೆಂಬಲಿತ ಸದಸ್ಯರು ನಿರಾಕರಿಸಿದ ಘಟನೆ ಗುರುವಾರ ನಡೆದಿದೆ.

ಸಭೆಯಲ್ಲಿ ಹಾಜರಾತಿ ನೀಡದ ಭಾರತಿ ಮತ್ತು ಗಜೇಂದ್ರ ಅವರು ತಮ್ಮ ಬಳಿ ಇದ್ದ ಪತ್ರಗಳನ್ನು ನೀಡಲು ಬಂದಿದ್ದರಿಂದ ತಾವು ಅದನ್ನು ಪಡೆಯಲಿಲ್ಲ ಎಂದು ಸಭೆಗೆ ಹಾಜರಾಗಿದ್ದ ಬಿಜೆಪಿ ಪರ ಸದಸ್ಯರು ತಿಳಿಸಿದ್ದಾರೆ.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಫೆ. 9ರಂದು ನಡೆದಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ತೀವ್ರ ಸ್ಪರ್ಧೆ ಇತ್ತು. ಚುನಾವಣೆ ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ ಮೂರು ಬಾರಿ ಮತದಾನ ಮಾಡಲಾಗಿತ್ತು. ಚುನಾವಣೆ ನಂತರ ಚುನಾವಣಾಧಿಕಾರಿ ಡಾ.ರಾಮು, ಬಿಜೆಪಿ ಅಭ್ಯರ್ಥಿ ಜಯಶೀಲರಾಗಿದ್ದಾರೆ ಎಂದು ಘೋಷಿಸಿದರು.

ಚುನಾವಣೆ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ. ಮೂರು ಬಾರಿ ಚುನಾವಣೆ ನಡೆಸಲಾಗಿದೆ. ಮತಪತ್ರಗಳನ್ನು ಹರಿದು ಹಾಕಲಾಗಿದೆ. ಚುನಾವಣೆಯಲ್ಲಿ ಅಕ್ರಮ ನಡೆಸಲಾಗಿದೆ ಎಂದು ಶಾಸಕಿ ಎಂ. ರೂಪಕಲಾ ಚುನಾವಣಾ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿದೆ. ಮೇಲಧಿಕಾರಿಗಳ ಒಪ್ಪಿಗೆ ಪಡೆದು ಚುನಾವಣೆ ನಡೆಸಲಾಗುವುದು ಎಂದು ಚುನಾವಣಾಧಿಕಾರಿ ಡಾ.ರಾಮು ಸಾರ್ವಜನಿಕವಾಗಿ ಘೋಷಿಸಿದರು. ‌

ಈ ಘಟನೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಎರಡೂ ಪಕ್ಷದವರು ಚುನಾವಣಾಧಿಕಾರಿ ಜೀಪಿಗೆ ಮುತ್ತಿಗೆ ಹಾಕಿ ದಿಗ್ಬಂಧನ ಹಾಕಿದ್ದರು. ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಕೆ.ಎನ್. ಸುಜಾತಾ ಚುನಾವಣೆಯನ್ನು ಫೆ. 18ರಂದು ನಡೆಸುವುದಾಗಿ ಘೋಷಿಸಿದರು.

ಚುನಾವಣೆ ಆಯೋಗದ ಸೂಚನೆ ಮೇರೆಗೆ ಚುನಾವಣೆ ಪ್ರಕ್ರಿಯೆ ಫೆ. 15 ರೊಳಗೆ ಮುಗಿಯಬೇಕಾಗಿದ್ದರಿಂದ ಚುನಾವಣೆಯನ್ನು ಫೆ. 15ಕ್ಕೆ ನಿಗದಿಗೊಳಿಸಲಾಯಿತು. ಈ ಸಂಬಂಧವಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸದಸ್ಯರಿಗೆ ಚುನಾವಣಾಧಿಕಾರಿ ನೋಟಿಸ್ ಜಾರಿ ಮಾಡಿದರು.

ಬಿಗುವಿನ ವಾತಾವರಣದಲ್ಲಿ ಪುನಃ ಎಲ್ಲಾ ಸದಸ್ಯರು ಚುನಾವಣೆ ಕೇಂದ್ರದಲ್ಲಿ ಸೇರಿದ್ದರು. ಬಿಜೆಪಿಯ 9 ಸದಸ್ಯರು ತಾವು ಹಿಂದೆ ಮಾಡಿದ್ದ ಚುನಾವಣೆಗೆ ಬದ್ಧರಿರುವುದಾಗಿ ಹೇಳಿ ನಿರ್ಗಮಿಸಿದರು. 10 ಮಂದಿ ಇದ್ದ ಕಾಂಗ್ರೆಸ್ ಅಭ್ಯರ್ಥಿ ಭಾರತಿ ಮತ್ತು ಬೆಂಬಲಿಗರು ಚುನಾವಣೆ ಪ್ರಕ್ರಿಯೆ ನಡೆಸಬೇಕು ಎಂದು ಪಟ್ಟುಹಿಡಿದರು.

ಆದರೆ, ಚುನಾವಣಾಧಿಕಾರಿಯು ಫೆ. 9ರಂದು ನಡೆದ ಚುನಾವಣೆಯನ್ನು ಎತ್ತಿ ಹಿಡಿದು, ಪ್ರಕ್ರಿಯೆ ದಾಖಲು ಮಾಡಿ ಪೊಲೀಸರ ರಕ್ಷಣೆಯಲ್ಲಿ ಸ್ಥಳದಿಂದ ತೆರಳಿದರು. ಈ ಹಂತದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಸೇರಿದ ನೂರಾರು ಕಾರ್ಯಕರ್ತರು ಜಮಾಯಿಸಿ ಪರಿಸ್ಥಿತಿ ಉದ್ವಿಗ್ನಗೊಂಡಿತು. ನಂತರ ಶಾಸಕಿ ರೂಪಕಲಾ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಎರಡು ದಿನಗಳ ಸಮಯಾವಕಾಶ ಕೋರಿದ್ದರು.

ಈ ಮಧ್ಯೆ ಅವಕಾಶ ವಂಚಿತರಾದ ಕಾಂಗ್ರೆಸ್‌ ಪಕ್ಷದ ಬೆಂಬಲಿತ ಭಾರತಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ತಮಗೆ ಅನ್ಯಾಯವಾಗಿದೆ. ಫೆ. 15ರಂದು ನಡೆದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಲು ಅವಕಾಶ ಕೊಡಲಿಲ್ಲ ಎಂದು ದೂರಿದ್ದರು.

ಈ ಹಿನ್ನೆಲೆಯಲ್ಲಿ ಗುರುವಾರ ನಡೆದ ಪಂಚಾಯಿತಿಯ ಪ್ರಥಮ ಸಭೆಯಲ್ಲಿ ಹಾಜರಿದ್ದ 9 ಜನ ಸದಸ್ಯರ ಪೈಕಿ ಅಧ್ಯಕ್ಷರ ಹೊರೆತಾಗಿ 8 ಜನರಿಗೆ ಮಾರ್ಚ್‌ 8ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ಅನ್ನು ಖುದ್ದಾಗಿ ನೀಡಲು ಹೋದಾಗ ಹಾಜರಿದ್ದ ಎಲ್ಲಾ ಸದಸ್ಯರು ಅದನ್ನು ಪಡೆಯಲು ನಿರಾಕರಿಸಿದರು ಎಂದು ಭಾರತಿ ಮತ್ತು ಗಜೇಂದ್ರ ತಿಳಿಸಿದ್ದಾರೆ.

ಸಭೆಯಲ್ಲಿ ಕೋರಂ ಕಡಿಮೆ ಇದ್ದ ಕಾರಣ ಚುನಾವಣೆಯನ್ನು ಮುಂದಿನ ದಿನಕ್ಕೆ ಮುಂದೂಡಲಾಗಿದೆ. ಹೈಕೋರ್ಟ್ ನೀಡಿದ ನೋಟಿಸ್ ಈಗಾಗಲೇ ಪಂಚಾಯಿತಿ ಕಚೇರಿಗೆ ಬಂದಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೇಷಾದ್ರಿ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು