ಸೋಮವಾರ, ಜನವರಿ 25, 2021
18 °C
ಜಿಲ್ಲಾ ಕೇಂದ್ರದ ರಸ್ತೆ– ರೈಲ್ವೆ ಕೆಳ ಸೇತುವೆಗಳ ದುಸ್ಥಿತಿ

ರೈತ ಸೇನೆ ರಸ್ತೆ ತಡೆ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲಾ ಕೇಂದ್ರದ ರಸ್ತೆಗಳು ಹಾಗೂ ರೈಲ್ವೆ ಕೆಳ ಸೇತುವೆಗಳ ದುಸ್ಥಿತಿ ಖಂಡಿಸಿ ರಾಜ್ಯ ರೈತ ಸೇನೆ ಸದಸ್ಯರು ನಗರದ ಸಂಗೊಂಡಹಳ್ಳಿ ಸಮೀಪದ ರೈಲ್ವೆ ಅಂಡರ್‌ಪಾಸ್‌ ಬಳಿ ಶನಿವಾರ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.

‘ಜಿಲ್ಲೆಯ ವಿವಿಧೆಡೆ ನಿರ್ಮಿಸಿರುವ ರೈಲ್ವೆ ಕೆಳ ಸೇತುವೆಗಳ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ತುಂತುರು ಮಳೆ ಬಂದರೂ ಅಂಡರ್‌ಪಾಸ್‌ಗಳು ಕೆರೆಯಂತಾಗಿ ಜನ ಜೀವನಕ್ಕೆ ತೊಂದರೆಯಾಗುತ್ತಿದೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರತಿ ಬಾರಿ ಮಳೆ ಬಂದಾಗಲೂ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಮತ್ತು ಜನರ ಓಡಾಟಕ್ಕೆ ಸಮಸ್ಯೆಯಾಗುತ್ತದೆ. ಕೆಳ ಸೇತುವೆಗಳು ನಿರ್ಮಾಣವಾದ ದಿನದಿಂದಲೂ ಈ ಸಮಸ್ಯೆಯಿದೆ. ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ದೂರು ನೀಡಿದರೂ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಂಡಿಲ್ಲ’ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ನಾರಾಯಣಗೌಡ ಕಿಡಿಕಾರಿದರು.

‘ಅಂಡರ್‌ಪಾಸ್‌ನಲ್ಲಿ ಮಳೆ ನೀರು ತುಂಬಿಕೊಳ್ಳುವುದರಿಂದ ಸುತ್ತಮುತ್ತಲ ಗ್ರಾಮಗಳು ಹಾಗೂ ಬಡಾವಣೆಗಳಿಗೆ ಸಂಪರ್ಕ ಕಡಿದು ಹೋಗುತ್ತದೆ. ಇದರಿಂದ ಆ ಭಾಗದ ಜನ ಹಳಿ ದಾಟಿಕೊಂಡು ಓಡಾಡುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಹಳಿ ದಾಟುವ ಯತ್ನದಲ್ಲಿ ಹಲವರು ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಆದರೂ ಅಧಿಕಾರಿಗಳು ಸಮಸ್ಯೆ ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಗುಡುಗಿದರು.

‘ಗುಂಡಿಮಯ ರಸ್ತೆಗಳು ಹಾಗೂ ರೈಲ್ವೆ ಕೆಳ ಸೇತುವೆಗಳು ಜನರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿವೆ. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಇಲಾಖೆಗಳು ಹಾಗೂ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲವಾಗಿದೆ. ಅಧಿಕಾರಿಗಳು, ಗುತ್ತಿಗೆದಾರರು ನೆಪಕ್ಕೆ ಗುಂಡಿಗಳಿಗೆ ಜಲ್ಲಿ ಪುಡಿ ಹಾಗೂ ಮಣ್ಣು ಸುರಿಸಿ ಕೋಟಿಗಟ್ಟಲೆ ಹಣ ದೋಚಿದ್ದಾರೆ’ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ್‌ಗೌಡ ಆರೋಪಿಸಿದರು.

ನಗರವಾಸಿಗಳಿಗೆ ಶಾಪ: ‘ಜಿಲ್ಲಾ ಕೇಂದ್ರದಲ್ಲಿನ ಒಳಚರಂಡಿ ಕಾಮಗಾರಿಯು ನಗರವಾಸಿಗಳಿಗೆ ಶಾಪವಾಗಿದೆ. ಕಾಮಗಾರಿಗಾಗಿ ರಸ್ತೆಗಳನ್ನು ಮನಸೋಇಚ್ಛೆ ಅಗೆಯಲಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ಗುತ್ತಿಗೆದಾರರು ರಸ್ತೆ ದುರಸ್ತಿ ಮಾಡಿಲ್ಲ’ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

‘ಗುಂಡಿಮಯ ರಸ್ತೆಗಳು ಮಳೆಗೆ ಕೆಸರು ಗದ್ದೆಯಂತಾಗಿವೆ. ಜನಪ್ರತಿನಿಧಿಗಳು ಜಿಲ್ಲಾ ಕೇಂದ್ರದ ಅಭಿವೃದ್ಧಿ ಮರೆತಿದ್ದಾರೆ. ಜಿಲ್ಲಾಡಳಿತಕ್ಕೆ ಜನಪರ ಕಾಳಜಿಯಿಲ್ಲ. ನಗರವಾಸಿಗಳು ಹಾಗೂ ವಾಹನ ಸವಾರರು ಪ್ರತಿನಿತ್ಯ ಬವಣೆ ಪಡುವಂತಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಶ್ವತ ಪರಿಹಾರ: ‘ರಸ್ತೆಗಳಿಗೆ ಶೀಘ್ರವೇ ಡಾಂಬರು ಹಾಕಬೇಕು. ರೈಲ್ವೆ ಅಂಡರ್‌ಪಾಸ್‌ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು. ಇಲ್ಲವಾದರೆ ಜನ ಬೀದಿಗಿಳಿದು ತಕ್ಕ ಪಾಠ ಕಲಿಸುತ್ತಾರೆ’ ಎಂದು ಎಚ್ಚರಿಕೆ ನೀಡಿದರು.

ಸಂಘಟನೆಯ ಜಿಲ್ಲಾ ಘಟಕದ ಗೌರವಾಧ್ಯಕ್ಷ ಕೆ.ಬಿ.ಮುನಿವೆಂಕಟಪ್ಪ, ಉಪಾಧ್ಯಕ್ಷ ಎಂ.ವಿ.ಶ್ರೀಧರ್, ಸಂಘಟನಾ ಕಾರ್ಯದರ್ಶಿ ವೆಂಕಟಾಚಲಪತಿ, ಸದಸ್ಯರಾದ ಮಕ್ಸೂದ್ ಪಾಷಾ, ಅಮಾನ್, ನಿಜಾಮ್, ಮಂಜುನಾಥ್, ಆನಂದ್‌ಗೌಡ, ನಾರಾಯಣಸ್ವಾಮಿ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು