ಶುಕ್ರವಾರ, ನವೆಂಬರ್ 27, 2020
18 °C
ಗಣನೀಯ ಸೇವೆ: ಗಡಿ ಜಿಲ್ಲೆಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

ಕೋಲಾರ: ಮುನಿವೆಂಕಟಪ್ಪ– ರಾಜು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಗೆ ರಾಜ್ಯ ಸರ್ಕಾರ 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದ್ದು, ಜಿಲ್ಲೆಯ ಇಬ್ಬರು ಸಾಧಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸಾಹಿತಿ ವಿ.ಮುನಿವೆಂಕಟಪ್ಪ ಹಾಗೂ ಆರ್ಥಿಕ ಸಲಹೆಗಾರ ಕೆ.ವಿ.ರಾಜು ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಜಿಲ್ಲೆಯ ಕೀರ್ತಿ ಹೆಚ್ಚಿದೆ. ಕೋಲಾರದ ಗಲ್‌ಪೇಟೆಯ ಕೆ.ವಿ.ರಾಜು ರಾಜ್ಯ ಸರ್ಕಾರದಲ್ಲಿ ಆರ್ಥಿಕ ಸಲಹೆಗಾರರಾಗಿ ಕೆಲಸ ಮಾಡಿದ್ದವರು. ಸದ್ಯ ಉತ್ತರ ಪ್ರದೇಶ ಸರ್ಕಾರದ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೋಲಾರ ತಾಲ್ಲೂಕಿನ ಯಡಹಳ್ಳಿಯಲ್ಲಿ 1949ರಲ್ಲಿ ಜನಿಸಿದ ಮುನಿವೆಂಕಟಪ್ಪ ಅವರು ಕೃಷಿ ವಿಜ್ಞಾನದಲ್ಲಿ ಉನ್ನತ ಶಿಕ್ಷಣ ಪೂರೈಸಿ ಬಿಡಿಒ, ಕೃಷಿ ಅಧಿಕಾರಿ ಸೇರಿದಂತೆ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸುಮಾರು 4 ದಶಕದಿಂದ ದಲಿತ ಚಳವಳಿ ಮತ್ತು ಬಂಡಾಯ ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವ ಮುನಿವೆಂಕಟಪ್ಪ ಶಾಕ್ಯಮುನಿ ಕಾವ್ಯ ನಾಮದಿಂದ ಚಿರಪರಿಚಿತರು.

ವೈಭವೀಕರಣ ನೆಲೆಯ ವಿಮರ್ಶೆಗಿಂತ ಭಿನ್ನವಾಗಿ ವಾಸ್ತವಿಕ ನೆಲೆಯ ವಿಮರ್ಶೆ ದಾರಿಯಲ್ಲಿ ಸಾಗುತ್ತಿರುವವರಲ್ಲಿ ಮುನಿವೆಂಕಟಪ್ಪ ಪ್ರಮುಖರು. ಇವರು ವಾಸ್ತವದ ನೆಲೆಯಲ್ಲಿ ಅತ್ಯಂತ ನಿಷ್ಠುರವಾಗಿ ಸೃಜನ ಹಾಗೂ ಸೃಜನೇತರ ವಿಮರ್ಶೆಯ ದಾರಿಗಳನ್ನು ಮೌಲ್ಯೀಕರಿಸುತ್ತಾರೆ. ಇವರು ಸಾಂಸ್ಕೃತಿಕ ಚೈತನ್ಯಶೀಲತೆಗಾಗಿ ಮಾನವೀಯ ನೆಲೆಯಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ.

ದಲಿತ ಸಂಘರ್ಷ ಸಮಿತಿ ಸೇರಿದಂತೆ ಹಲವು ಜನಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಹಲವಾರು ಕೃತಿಗಳನ್ನು ಸಮರ್ಪಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌, ಆಕಾಶವಾಣಿ, ದೂರದರ್ಶನದಿಂದ ಆಯೋಜಿಸಿದ ಸಾಹಿತ್ಯ ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಅಭಿವ್ಯಕ್ತಿ ಸವಾಲುಗಳು’ ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

ಕೃತಿಗಳು: ‘ದಲಿತ ಚಳವಳಿ -ಒಂದು ಅವಲೋಕನ’, ‘ದಲಿತ ಸಾಹಿತ್ಯ ದರ್ಶನ’, ‘ದಲಿತ ಚಳವಳಿ ಚರಿತ್ರೆ’, ‘ಅಂಬೇಡ್ಕರ್‌ ವಾದ’, ‘ವಿಶ್ವಚೇತನ ಬುದ್ಧ’ ಸಂಪಾದನಾ ಕೃತಿಗಳನ್ನು ರಚಿಸಿದ್ದಾರೆ. ದಲಿತ, ರೈತ ಹಾಗೂ ಕಾರ್ಮಿಕ ಹೋರಾಟಗಳಲ್ಲಿ ಸಕ್ರಿಯರಾಗಿದ್ದ ಇವರು ‘ಕೆಂಡದ ನಡುವೆ’, ‘ಸ್ವಾಭಿಮಾನದ ಬೀಡಿಗೆ’, ‘ಐಕ್ಯ ಗೀತೆಗಳು’, ‘ಕಾಡು ಕಣಿವೆಯ ಹಕ್ಕಿ’, ‘ಈ ನೆಲದ ಹಾಡುಗಳು’ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಬಾಲಕ ಅಂಬೇಡ್ಕರ್ ಎಂಬ ನಾಟಕ ಸಹ ರಚಿಸಿದ್ದಾರೆ.

ಮತಾಂತರ ಮತ್ತು ಇತರ ಲೇಖನಗಳು, ದಲಿತ ಸಾಹಿತ್ಯ ದರ್ಶನ, ಕನ್ನಡ ದಲಿತ ಸಾಹಿತ್ಯ, ದಲಿತ ಚಳವಳಿ ಮತ್ತು ಸಾಹಿತ್ಯ, ಮೀಸಲಾತಿ- ಒಂದು ಅವಲೋಕನ, ಸ್ವಾತಂತ್ರೋತ್ತರ ದಲಿತ ಸಾಹಿತ್ಯ, ಸಾಮಾಜಿಕ ಬದಲಾವಣೆ ಇವರ ವಿಮರ್ಶ ಕೃತಿಗಳಾಗಿವೆ. ದಲಿತ ಚಳವಳಿ ಚರಿತ್ರೆಯನ್ನು ದಾಖಲಿಸುವ ನಿಟ್ಟಿನಲ್ಲಿ ದಲಿತ ಚಳವಳಿ ಚರಿತ್ರೆ ಎಂಬ ಬೃಹತ್ ಗ್ರಂಥ ಸಂಪಾದಿಸಿದ್ದಾರೆ.

ಮುನಿವೆಂಕಟಪ್ಪ ಅವರಿಗೆ 1998ರಲ್ಲಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಅಂಬೇಡ್ಕರ್ ಫೆಲೋಶಿಫ್ ಪ್ರಶಸ್ತಿ ದೊರೆತಿದೆ. ರಾಜ್ಯ ಸರ್ಕಾರವು ಇವರಿಗೆ 2003ರಲ್ಲಿ ‘ಅಂಬೇಡ್ಕರ್ ಪ್ರಶಸ್ತಿ’ ನೀಡಿ ಗೌರವಿಸಿದೆ. ಅಲ್ಲದೇ, ಮೈಸೂರು ಸಾಹಿತ್ಯ ರತ್ನ ಪ್ರಶಸ್ತಿ, 2018ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ‘ಸಾಹಿತ್ಯಶ್ರೀ’ ಪುರಸ್ಕಾರ ನೀಡಿ ಗೌರವಿಸಿದೆ.

ಇವರ ರಚನೆಯ ‘ಕನ್ನಡದಲ್ಲಿ ದಲಿತ ಸಾಹಿತ್ಯ’ ಕೃತಿಯು ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆಯ ಮೂಲನೆಲೆಗಳ ಹುಡುಕಾಟ ನಡೆಸುತ್ತಾ ದಲಿತ ಪ್ರಜ್ಞೆಯ ವೈಶಾಲ್ಯತೆ ದಾಖಲಿಸುವ ಉತ್ತಮ ಗ್ರಂಥವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು