ಭಾನುವಾರ, ಏಪ್ರಿಲ್ 11, 2021
31 °C
ಆಮೆ ಗತಿ ಕಾಮಗಾರಿ: ದೂಳಿನ ಕಿರಿಕಿರಿ

ಕೋಲಾರ: ವರ್ಷ ಕಳೆದರೂ ಮುಗಿಯದ ಚಿಕ್ಕಬಳ್ಳಾಪುರ ರಸ್ತೆ ಅಗಲೀಕರಣ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ವಾಹನ ಸವಾರರಿಗೆ ಪ್ರತಿನಿತ್ಯ ದೂಳಿನ ಮಜ್ಜನ... ಹೆಜ್ಜೆ ಇಟ್ಟಲೆಲ್ಲಾ ಗುಂಡಿಗಳು... ಕಣ್ಣು ಹಾಯಿಸಿದಲೆಲ್ಲಾ ಕಲ್ಲು ಮಣ್ಣಿನ ರಾಶಿ... ಗುಂಡಿಮಯ ರಸ್ತೆ ಮಧ್ಯೆ ನಿಧಾನ ಗತಿಯಲ್ಲಿ ಸಾಗುವ ವಾಹನಗಳು... ಇದು ಜಿಲ್ಲಾ ಕೇಂದ್ರದ ಚಿಕ್ಕಬಳ್ಳಾಪುರ ರಸ್ತೆಯ ದುಸ್ಥಿತಿ.

ಲೋಕೋಪಯೋಗಿ (ಪಿಡಬ್ಲ್ಯೂಡಿ) ಇಲಾಖೆಯು ಚಿಕ್ಕಬಳ್ಳಾಪುರ ರಸ್ತೆ ಅಗಲೀಕರಣ ಮಾಡುತ್ತಿದ್ದು, ಕಾಮಗಾರಿಯು ರಸ್ತೆಯ ಚಿತ್ರಣವನ್ನೇ ಬದಲಿಸಿದೆ. ಕಾಮಗಾರಿ ಆಮೆ ಗತಿಯಲ್ಲಿ ಸಾಗಿದ್ದು, ಈ ರಸ್ತೆಯಲ್ಲಿ ಓಡಾಡುವ ವಾಹನ ಸವಾರರು, ಜನಸಾಮಾನ್ಯರಿಗೆ ನಿತ್ಯವೂ ದೂಳಿನ ಅಭಿಷೇಕವಾಗುತ್ತಿದೆ.

ಶ್ರೀನಿವಾಸಪುರ ಟೋಲ್‌ಗೇಟ್‌ನಿಂದ ಜಿಲ್ಲೆಯ ಗಡಿವರೆಗೆ 17.3 ಕಿ.ಮೀ ಇರುವ ಚಿಕ್ಕಬಳ್ಳಾಪುರ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಈ ರಸ್ತೆಯು ವಿಜಯಪುರ, ಎಚ್‌.ಕ್ರಾಸ್‌ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಗೆ ಸಂಪರ್ಕ ಕಲ್ಪಿಸುತ್ತದೆ. ಸರಕು ಸಾಗಣೆ ವಾಹನಗಳು, ಕೆಎಸ್‌ಆರ್‌ಟಿಸಿ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುತ್ತವೆ.

₹ 20 ಕೋಟಿ ಅಂದಾಜು ವೆಚ್ಚದಲ್ಲಿ ಚಿಕ್ಕಬಳ್ಳಾಪುರ ರಸ್ತೆಯನ್ನು 4 ಪಥದ ರಸ್ತೆಯಾಗಿ ಮಾಡಲಾಗುತ್ತಿದೆ. ಸದ್ಯ ನಗರದೊಳಗಿನ ಶ್ರೀನಿವಾಸಪುರ ಟೋಲ್‌ಗೇಟ್‌ನಿಂದ ಸಂಗೊಂಡಹಳ್ಳಿ ರೈಲ್ವೆ ಕೆಳ ಸೇತುವೆವರೆಗೆ 1.3 ಕಿ.ಮೀ ಕಾಮಗಾರಿ ನಡೆಯುತ್ತಿದೆ. ರಸ್ತೆ ವಿಭಜಕದಿಂದ ಎರಡೂ ಕಡೆಗೆ ತಲಾ 7 ಮೀಟರ್‌ ಅಗಲೀಕರಣ ಮಾಡಲಾಗುತ್ತಿದೆ. ಕಾಮಗಾರಿಗಾಗಿ ರಸ್ತೆಯನ್ನು ಎರಡೂ ಕಡೆ ಅಗೆಯಲಾಗಿದೆ.

ರಸ್ತೆಗೆ ಜಲ್ಲಿ ಸುರಿಯಲಾಗಿದ್ದು, ವಾಹನ ಸಂಚಾರ ದುಸ್ತರವಾಗಿದೆ. ವಾಹನಗಳು ಸಂಚರಿಸಿದಾಗ ಏಳುವ ದೂಳಿನಿಂದ ಜನರ ಆರೋಗ್ಯ ಹಾಳಾಗುತ್ತಿದೆ. ರಸ್ತೆಯ ಅಕ್ಕಪಕ್ಕದ ಬಡಾವಣೆಗಳಲ್ಲಿ ದೂಳಿನ ಸಮಸ್ಯೆ ಗಂಭೀರವಾಗಿದೆ. ಅಸ್ತಮಾ, ಉಸಿರಾಟ ಸಮಸ್ಯೆ ಕಾಣಿಸಿಕೊಂಡು ಆಸ್ಪತ್ರೆ ಸೇರುವ ರೋಗಿಗಳ ಸಂಖ್ಯೆ ಏರು ಗತಿಯಲ್ಲಿ ಸಾಗಿದೆ. ದೂಳಿನಿಂದ ರಕ್ಷಣೆ ಪಡೆಯಲು ಜನ ಕರವಸ್ತ್ರಗಳ ಮೊರೆ ಹೋಗಿದ್ದಾರೆ.

9 ತಿಂಗಳ ಗಡುವು: 2020ರ ಫೆ.4ರಂದು ಆರಂಭವಾದ ಕಾಮಗಾರಿ ಟೆಂಡರ್‌ ಕರಾರಿನ ಪ್ರಕಾರ 9 ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ಕೋವಿಡ್‌ ಕಾರಣಕ್ಕೆ ಲಾಕ್‌ಡೌನ್‌ ಘೋಷಣೆಯಾಗಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಲಾಕ್‌ಡೌನ್‌ ತೆರವಿನ ಬಳಿಕ ಕಾಮಗಾರಿ ಪುನರಾರಂಭವಾದರೂ ಚುರುಕಾಗಿ ನಡೆಯುತ್ತಿಲ್ಲ.

ರಸ್ತೆ ಮಧ್ಯೆ ಹಾದು ಹೋಗಿರುವ ಒಳಚರಂಡಿ ಪೈಪ್‌ಲೈನ್‌ ಮತ್ತು ಮ್ಯಾನ್‌ಹೋಲ್‌ಗಳನ್ನು ರಸ್ತೆ ಬದಿಗೆ ಸ್ಥಳಾಂತರಿಸಲಾಗುತ್ತಿದೆ. ಈ ಕೆಲಸ ನಿಧಾನ ಗತಿಯಲ್ಲಿ ಸಾಗಿರುವುದರಿಂದ ರಸ್ತೆ ಅಗಲೀಕರಣ ಕಾಮಗಾರಿ ವೇಗವಾಗಿ ನಡೆಯುತ್ತಿಲ್ಲ.

ಆಹಾರ ಕಲುಷಿತ: ರಸ್ತೆ ಕಾಮಗಾರಿಯು ಸ್ಥಳೀಯವಾಗಿ ವಾಣಿಜ್ಯ ಚಟುವಟಿಕೆಗೆ ಸಮಸ್ಯೆ ತಂದೊಡ್ಡಿದೆ. ಆಟೊ ಚಾಲಕರಿಗೆ ಗುಂಡಿಮಯ ರಸ್ತೆಯಲ್ಲಿ ವಾಹನ ಚಾಲನೆ ಮಾಡುವುದು ದೊಡ್ಡ ಸವಾಲಾಗಿದ್ದು, ಹೆಚ್ಚು ಇಂಧನ ವ್ಯಯವಾಗುತ್ತಿದೆ.

ರಸ್ತೆ ಅಕ್ಕಪಕ್ಕ ಇರುವ ಹೋಟೆಲ್‌, ಬೇಕರಿ, ಅಂಗಡಿಗಳ ಕೆಲಸಗಾರರು ಹಾಗೂ ವರ್ತಕರಿಗೆ ದೂಳಿನ ಸಮಸ್ಯೆಯಿಂದ ಕಿರಿಕಿರಿಯಾಗುತ್ತಿದೆ. ಹೋಟೆಲ್‌ ಮತ್ತು ಅಂಗಡಿಗೆ ತೂರಿ ಬರುವ ದೂಳಿನಿಂದ ಆಹಾರ ಪದಾರ್ಥಗಳು, ಸರಕುಗಳು ಕಲುಷಿತವಾಗುತ್ತಿವೆ. ಗ್ರಾಹಕರು ಅರಿವಿಲ್ಲದೆ ಹೋಟೆಲ್‌ಗಳಲ್ಲಿ ದೂಳುಮಯ ಆಹಾರವನ್ನೇ ಸೇವಿಸುತ್ತಿದ್ದಾರೆ. ಕೆಲಸಗಾರರಿಗೆ ದೂಳು ಸ್ವಚ್ಛಗೊಳಿಸುವುದೇ ಕೆಲಸವಾಗಿದೆ.

ಜನರ ಅಲೆದಾಟ: ರಸ್ತೆ ಕಾಮಗಾರಿ ಬೇಗನೆ ಪೂರ್ಣಗೊಳಿಸುವಂತೆ ಸ್ಥಳೀಯರು ಹಲವು ಬಾರಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಮನವಿ ಮಾಡಿದ್ದಾರೆ. ಆದರೆ, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಪರಸ್ಪರರತ್ತ ಬೊಟ್ಟು ಮಾಡುತ್ತಾ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಜನ ಕಚೇರಿಯಿಂದ ಕಚೇರಿಗೆ ಅಲೆದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ.

ರಸ್ತೆ ದುಸ್ಥಿತಿಯಿಂದ ಆಗಾಗ್ಗೆ ಅಪಘಾತ ಸಂಭವಿಸುತ್ತಿದ್ದು, ಸಾವು ನೋವು ಪ್ರಮಾಣ ಹೆಚ್ಚುತ್ತಿದೆ. ರಸ್ತೆಯಲ್ಲಿ ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿದ ವಾಹನ ಸವಾರರ ಲೆಕ್ಕವಿಲ್ಲ. ಕಲ್ಲುಮಯ ರಸ್ತೆಯಲ್ಲಿನ ಪ್ರಯಾಣವು ಸಾವಿನ ಹಾದಿಯ ಪಯಣವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು