ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಜೀವನದ ಅವಿಭಾಜ್ಯ ಅಂಗ

ವೈಜ್ಞಾನಿಕ ಮನೋಭಾವ ಬಲಗೊಳಿಸಿ: ಜಿ.ಪಂ ಅಧ್ಯಕ್ಷ ವೆಂಕಟೇಶ್‌ ಹೇಳಿಕೆ
Last Updated 6 ಮಾರ್ಚ್ 2021, 11:01 IST
ಅಕ್ಷರ ಗಾತ್ರ

ಕೋಲಾರ: ‘ದಿನನಿತ್ಯದ ಜೀವನದಲ್ಲಿ ವಿಜ್ಞಾನ ಹಾಸುಹೊಕ್ಕಾಗಿದೆ. ವಿಜ್ಞಾನವು ಮನುಷ್ಯನ ಜೀವನದ ಅವಿಭಾಜ್ಯ ಅಂಗ. ಈ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ವಿಜ್ಞಾನಿಗಳಾಗಿ ರೂಪಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್ ಹೇಳಿದರು.

ರಾಜ್ಯ ಜ್ಞಾನ ವಿಜ್ಞಾನ ಜಿಲ್ಲಾ ಸಮಿತಿಯು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಜ್ಞಾನ ದಿನಾಚರಣೆಯಲ್ಲಿ ಪ್ರತಿಭಾವಂತ ಶಿಕ್ಷಕರಿಗೆ ಅನಿಲ್ ಕೌಲ್ ಉತ್ತಮ ಶಿಕ್ಷಕಿ ಪ್ರಶಸ್ತಿ ವಿತರಿಸಿ ಮಾತನಾಡಿದರು.

‘ಪ್ರತಿ ವಿಷಯವೂ ವಿಜ್ಞಾನದಿಂದಲೇ ಆರಂಭವಾಗುತ್ತದೆ. ತರ್ಕ ಆಧರಿಸಿ ವಿವರಣೆ ನೀಡುವುದೇ ವಿಜ್ಞಾನ. ವಿಜ್ಞಾನವಿಲ್ಲದೆ ಈ ಜಗತ್ತೇ ಇಲ್ಲ. ಗ್ರಾಮೀಣ ಜನರಿಗೂ ವಿಜ್ಞಾನದ ಅರಿವು ಮೂಡಿಸಬೇಕು. ವಿಜ್ಞಾನವನ್ನು ಜೀವನದ ಹವ್ಯಾಸವಾಗಿ ಪರಿಗಣಿಸಬೇಕು’ ಎಂದು ತಿಳಿಸಿದರು.

‘ಸಮಾಜದಲ್ಲಿ ಎದುರಾಗುವ ಸಮಸ್ಯೆಗೆ ವಿಜ್ಞಾನದಿಂದ ಪರಿಹಾರ ಕಂಡುಕೊಳ್ಳಬಹುದು. ಜಗತ್ತಿನಲ್ಲಿ ಆಗುವ ಪ್ರತಿ ಬೆಳವಣಿಗೆಗೂ ವೈಜ್ಞಾನಿಕ ಕಾರಣವಿರುತ್ತದೆ. ಇದನ್ನು ಅರಿಯದೆ ಅನೇಕರು ಮೂಢನಂಬಿಕೆಗೆ ಬಲಿಯಾಗುತ್ತಿದ್ದು, ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ ಹಾಗೂ ಸಂಶೋಧನೆ ಮೂಲಕ ಅಂಧಕಾರ ತೊಡೆದು ಹಾಕಬೇಕು’ ಎಂದು ಸಲಹೆ ನೀಡಿದರು.

‘ಜಗತ್ತಿನಲ್ಲಿ ಆಗುವ ಪ್ರತಿ ಬೆಳವಣಿಗೆಗೂ ವೈಜ್ಞಾನಿಕ ಕಾರಣವಿರುತ್ತದೆ. ಇದನ್ನು ಅರಿಯದೆ ಅನೇಕರು ಮೂಢನಂಬಿಕೆಗೆ ಬಲಿಯಾಗುತ್ತಿದ್ದು, ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ ಹಾಗೂ ಸಂಶೋಧನೆ ಮೂಲಕ ಅಂಧಕಾರ ತೊಡೆದು ಹಾಕಬೇಕು. ಶಿಕ್ಷಕರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬಲಗೊಳಿಸಬೇಕು’ ಎಂದು ಕಿವಿಮಾತು ಹೇಳಿದರು.

ಕಷ್ಟವಲ್ಲ: ‘ನಮ್ಮಲ್ಲಿ ಅನೇಕ ಆಚಾರ ವಿಚಾರ ಇರುವುದರಿಂದ ಅನುಮಾನ, ಸಮಸ್ಯೆ ಸಹಜ. ಮಕ್ಕಳಿಗೆ ತಾತ್ವಿಕವಾಗಿ ವಿಜ್ಞಾನ ತಿಳಿಸುವುದರ ಬದಲಿಗೆ ಪ್ರಯೋಗಗಳ ಮೂಲಕ ಸಾಕ್ಷೀಕರಿಸಿ ಪ್ರದರ್ಶಿಸಿದರೆ ಬೇಗ ಕಲಿಯುತ್ತಾರೆ. ವಿಜ್ಞಾನ ಕಷ್ಟವಲ್ಲ. ಅದನ್ನು ಪ್ರಯೋಗಗಳ ಮೂಲಕ ಸಾಧಿಸಿ ಅರ್ಥೈಸಿಕೊಂಡರೆ ಹೆಚ್ಚು ಕಾಲ ಮನದಲ್ಲಿ ಶಾಶ್ವತವಾಗಿ ಉಳಿಯುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ವಿದ್ಯಾರ್ಥಿ ಮೆಚ್ಚುವ ಶಿಕ್ಷಕರು ಸದಾ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸ್ಥಾನ ಪಡೆದಿರುತ್ತಾರೆ. ಅಂತಹ ಶಿಕ್ಷಕರು ಅವರು ಆದರ್ಶಪ್ರಾಯರಾಗಿದ್ದು, ಇತರರಿಗೆ ಮಾರ್ಗದರ್ಶಕರಾಗುತ್ತಾರೆ. ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಬೇಕು. ಜತೆಗೆ ಸಂಶೋಧನೆ ಮೇಲೆ ನಿಗಾ ವಹಿಸುವ ಕೆಲಸ ಆಗಬೇಕು’ ಎಂದರು.

ಸ್ಪರ್ಧಾತ್ಮಕ ಜಗತ್ತು: ‘ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಕಲಿಕೆ ಸೇರಿದಂತೆ ಕಲಿಕೆ ಮತ್ತಷ್ಟು ವೇಗದಲ್ಲಿ ಸಾಗುತ್ತಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿಗೆ ಹೊಂದಿಕೊಳ್ಳಬೇಕು. ಆಧುನಿಕ ವ್ಯವಸ್ಥೆ ಅರ್ಥ ಮಾಡಿಕೊಳ್ಳಬೇಕು. ಕಲಿಕೆ ದೃಢಪಡಿಸಿಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯಲು ಸಾಧ್ಯ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು.

‘ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ವಿಜ್ಞಾನದ ಚಿಂತನೆ ಒಳಪಡುವ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಚರ್ಚೆ ಆಗಬೇಕು. ಶಿಕ್ಷಕರು ಇದಕ್ಕೆ ಮಾರ್ಗದರ್ಶಕರಾಗಿ 15 ದಿನಕ್ಕೊಮ್ಮೆ ದಿನಗಳಿಗೊಮ್ಮೆ ರಸಪ್ರಶ್ನೆ ಸ್ಪರ್ಧೆ ಅಥವಾ ಪ್ರಬಂಧ ಸ್ಪರ್ಧೆಯಂತಹ ಚಟುವಟಿಕೆ ನಡೆಸಬೇಕು. ಆ ಮೂಲಕ ವಿದ್ಯಾರ್ಥಿಗಳನ್ನು ಚಟುವಟಿಕೆ ಆಧಾರಿತ ಕಲಿಕೆಗೆ ಸರಳೀಕರಿಸುವ ಅಗತ್ಯವಿದೆ’ ಎಂದು ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್‌ ಹೇಳಿದರು.

ವಿವಿಧ ಶಾಲಾ ಶಿಕ್ಷಕರಾದ ವಿ.ಭಾಗ್ಯಲಕ್ಷ್ಮಮ್ಮ, ಚಾಮುಂಡೇಶ್ವರಿ ದೇವಿ, ಎಸ್‌.ಭಾರತಿ, ಸುನಿತಾ, ವಿ.ಕವಿತಾ, ವರಲಕ್ಷ್ಮೀ, ಸವಿತಾಕುಮಾರಿ ಅವರಿಗೆ ಜಿಲ್ಲಾ ಮಟ್ಟದ ಅನಿತಾಕೌಲ್ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ರಾಜ್ಯ ಜ್ಞಾನ ವಿಜ್ಞಾನ ಸಮಿತಿ ಗೌರವಾಧ್ಯಕ್ಷ ಜಿ.ಶ್ರೀನಿವಾಸ್‌, ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸ್, ಸಂಚಾಲಕ ಶರಣಪ್ಪ ಗಬ್ಬೂರ್, ಸಹ ಕಾರ್ಯದರ್ಶಿ ಪದ್ಮಾವತಿ, ವಿಷಯ ಪರಿವೀಕ್ಷಕಿ ಶಶಿವದನಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT