ಮಂಗಳವಾರ, ಮೇ 26, 2020
27 °C
ರೇಷ್ಮೆ ಬೆಳೆಗಾರರು– ರೀಲರ್ಸ್‌ಗಳಿಗೆ ಜಿ.ಪಂ ಸಿಇಒ ದರ್ಶನ್‌ ಕಿವಿಮಾತು

ಗೂಡು ಮಾರುಕಟ್ಟೆ: ಸಾಮಾಜಿಕ ಅಂತರ ಮುಖ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೊರೊನಾ ಸೋಂಕು ತಡೆಗೆ ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ರೈತರು ಹಾಗೂ ವರ್ತಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ದುರಾದೃಷ್ಟವಶಾತ್‌ ಒಬ್ಬರಿಗೆ ಸೋಂಕು ತಗುಲಿದರೂ ಎಲ್ಲರೂ ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್‌.ವಿ.ದರ್ಶನ್‌ ಕಿವಿಮಾತು ಹೇಳಿದರು.

ಕೋವಿಡ್‌–19 ಭೀತಿ ಕಾರಣಕ್ಕೆ ಸರ್ಕಾರದ ಆದೇಶದಂತೆ ಕಳೆದೊಂದು ವಾರದಿಂದ ಬಂದ್‌ ಆಗಿದ್ದ ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಗುರುವಾರ ವಹಿವಾಟು ಪುನರಾರಂಭವಾದ ಹಿನ್ನೆಲೆಯಲ್ಲಿ ಅವರು ಮಾರುಕಟ್ಟೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಮಾತನಾಡಿದರು.

ಮಾರುಕಟ್ಟೆಯಲ್ಲಿ ವರ್ತಕರು ಹಾಗೂ ರೈತರು ಅಕ್ಕಪಕ್ಕ ಗುಂಪು ಗುಂಪಾಗಿ ನಿಂತಿದ್ದನ್ನು ಗಮನಿಸಿದ ಸಿಇಒ, ‘ಸಾಮಾಜಿಕ ಅಂತರ ಕಾಯ್ದುಕೊಂಡು ವಹಿವಾಟು ನಡೆಸಬೇಕು ಮತ್ತು ಮಾರುಕಟ್ಟೆ ಆವರಣ ಪ್ರವೇಶಿಸುವ ಪ್ರತಿಯೊಬ್ಬರು ಕಡ್ಡಾಯವಾಗಿ ಮುಖಗವಸು ಧರಿಸಬೇಕು’ ಎಂದು ಸೂಚನೆ ನೀಡಿದರು.

‘ಜಿಲ್ಲೆಯ ವಿವಿಧೆಡೆ ಮಾರುಕಟ್ಟೆಗೆ ವಾಹನಗಳಲ್ಲಿ ಗೂಡು ತರುತ್ತಿರುವ ರೈತರಿಗೆ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ. ವಹಿವಾಟಿನ ನಂತರ ರೀಲರ್ಸ್‌ಗಳು ಗೂಡು ಸಾಗಿಸಿಕೊಂಡು ಹೋಗುವ ವಾಹನಗಳನ್ನು ಪೊಲೀಸರು ತಡೆದು ಶೋಷಣೆ ಮಾಡುತ್ತಿದ್ದಾರೆ’ ಎಂದು ಜಿಲ್ಲೆ ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ವಿ.ನಾರಾಯಣಸ್ವಾಮಿ ದೂರಿದರು.

‘ರೇಷ್ಮೆಗೂಡು ಸಾಗಣೆ ವಾಹನಗಳನ್ನು ತಡೆಯದಂತೆ ಪೊಲೀಸರಿಗೆ ಸೂಚನೆ ನೀಡಬೇಕು. ರೇಷ್ಮೆ ಬೆಳೆಗಾರರು ಮತ್ತು ರೀಲರ್ಸ್‌ಗಳ ವಾಹನಗಳ ಸಂಚಾರಕ್ಕೆ ಪೊಲೀಸ್‌ ಇಲಾಖೆಯಿಂದ ಪಾಸ್‌ ವಿತರಣೆ ಮಾಡಬೇಕು. ರೇಷ್ಮೆ ಬೆಳೆಗಾರರಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಸಮಸ್ಯೆ ತಪ್ಪಿದೆ: ‘ರೇಷ್ಮೆಗೂಡು ಮಾರುಕಟ್ಟೆಯಲ್ಲಿ ವಹಿವಾಟು ಪುನರಾರಂಭವಾಗಿರುವುದರಿಂದ ರೈತರು ರೀಲರ್ಸ್‌ಗಳ ಮನೆಗೆ ಗೂಡು ತೆಗೆದುಕೊಂಡು ಹೋಗುವ ಸಮಸ್ಯೆ ತಪ್ಪಿದೆ. ಇದರಿಂದ ರೀಲರ್ಸ್‌ಗಳಿಗೂ ಅನುಕೂಲವಾಗಿದೆ’ ಎಂದು ಕರ್ನಾಟಕ ರಾಜ್ಯ ನೂಲು ಬಿಚ್ಚಾಣಿಕೆದಾರರ ಸಂಘದ ಉಪಾಧ್ಯಕ್ಷ ಸಾಬೀರ್‌ ಪಾಷಾ ಹೇಳಿದರು.

‘ರೀಲರ್ಸ್‌ಗಳು ಬೈಕ್‌ಗಳಲ್ಲಿ ಮಾರುಕಟ್ಟೆಗೆ ಬರುವಾಗ ಮತ್ತು ಮಾರುಕಟ್ಟೆಯಿಂದ ಆಟೊಗಳಲ್ಲಿ ಗೂಡು ತೆಗೆದುಕೊಂಡು ಹೋಗುವಾಗ ಪೊಲೀಸರು ತಡೆದು ತೊಂದರೆ ಮಾಡುತ್ತಿದ್ದಾರೆ. ಜಿಲ್ಲೆಯ ರಾಮಸಂದ್ರ ಗಡಿ ಭಾಗದಲ್ಲಿ ಗೂಡು ಸಾಗಣೆ ವಾಹನಗಳ್ನು ತಡೆಯಲಾಗುತ್ತಿದೆ. ಇದರಿಂದ ಬೆಂಗಳೂರಿಗೆ ಗೂಡು ಸಾಗಿಸಲು ಸಮಸ್ಯೆಯಾಗಿದೆ’ ಎಂದು ಅಳಲು ತೋಡಿಕೊಂಡರು.

ಪೊಲೀಸರ ಬೆದರಿಕೆ: ‘ದಿಗ್ಬಂಧನ ಆದೇಶದ ನೆಪದಲ್ಲಿ ಪೊಲೀಸರು ನೂಲು ಬಿಚ್ಚಾಣಿಕೆ ಕಾರ್ಖಾನೆಗಳನ್ನು ಪ್ರವೇಶಿಸಿ ಅಲ್ಲಿನ ಕಾರ್ಮಿಕರನ್ನು ಬೆದರಿಸುತ್ತಿದ್ದಾರೆ. ಕೆಲಸ ಸ್ಥಗಿತಗೊಳಿಸುವಂತೆ ತಾಕೀತು ಮಾಡಿ ಕಾರ್ಮಿಕರನ್ನು ಹೊರ ಕಳುಹಿಸಿ ಕಾರ್ಖಾನೆಗಳನ್ನು ಬಂದ್ ಮಾಡುತ್ತಿದ್ದಾರೆ. ಪೊಲೀಸರು ಈ ರೀತಿ ವರ್ತಿಸಿದರೆ ನಾವು ಬದುಕುವುದು ಹೇಗೆ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೂರಿಗೆ ಸ್ಪಂದಿಸಿದ ಸಿಇಒ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ. ‘ರೇಷ್ಮೆ ಬೆಳೆಗಾರರು ಮತ್ತು ರೀಲರ್ಸ್‌ಗಳ ವಾಹನಗಳನ್ನು ತಡೆಯಬೇಡಿ. ಜತೆಗೆ ಅವರ ವಾಹನಗಳಿಗೆ ಪಾಸ್‌ ವ್ಯವಸ್ಥೆ ಕಲ್ಪಿಸಿ’ ಎಂದು ಸೂಚಿಸಿದರು.

‘ಬೈಕ್ ಮತ್ತು ಆಟೊಗಳಲ್ಲಿ ರೇಷ್ಮೆಗೂಡು ಸಾಗಿಸುವ ರೀಲರ್ಸ್‌ಗಳಿಗೆ ರೇಷ್ಮೆ ಇಲಾಖೆಯಿಂದ ಗುರುತಿನ ಚೀಟಿ ವಿತರಿಸಬೇಕು. ಗೂಡು ಮಾರುಕಟ್ಟೆಯಲ್ಲಿ ಹೆಚ್ಚಿನ ಜನರು ಒಂದೆಡೆ ಗುಂಪುಗೂಡದಂತೆ ನೋಡಿಕೊಳ್ಳಬೇಕು. ನೂಲು ಬಿಚ್ಚಾಣಿಕೆ ಕೇಂದ್ರಗಳಲ್ಲಿ ಶೇ 50ರಷ್ಟು ಕಾರ್ಮಿಕರನ್ನು ಮಾತ್ರ ಕೆಲಸಕ್ಕೆ ನಿಯೋಜಿಸಬೇಕು’ ಎಂದು ಸಲಹೆ ನೀಡಿದರು.

ಮಾರುಕಟ್ಟೆ ಪ್ರವೇಶ ಭಾಗದಲ್ಲಿ ರೈತರು, ಅಧಿಕಾರಿಗಳು ಹಾಗೂ ವರ್ತಕರಿಗೆ ಕೈ ಸ್ವಚ್ಛಗೊಳಿಸಿಕೊಳ್ಳಲು ಸ್ಯಾನಿಟೈಸರ್‌ ಇಟ್ಟಿರುವುದನ್ನು ಸಿಇಒ ಪರಿಶೀಲಿಸಿದರು. ರೇಷ್ಮೆ ಇಲಾಖೆ ಉಪ ನಿರ್ದೇಶಕ ಎಂ.ಕೆ.ಪ್ರಭಾಕರ್, ಸಹಾಯಕ ನಿರ್ದೇಶಕ ಮಂಜುನಾಥ್, ಗೂಡು ಮಾರುಕಟ್ಟೆ ಸಹಾಯಕ ನಿರ್ದೇಶಕಿ ರೆಡ್ಡಿಲಕ್ಷ್ಮಿ, ರೈತರು, ರೀಲರ್ಸ್‌ಗಳು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.