ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ನು ಹುರಿ ಸಮಸ್ಯೆಗೆ ತಬ್ಬಲಿಯಾದ ಕಂದಮ್ಮ

ಆಸ್ಪತ್ರೆಯಲ್ಲಿ ನವಜಾತ ಶಿಶು ಬಿಟ್ಟು ಹೋದ ಸುಶಿಕ್ಷಿತ ದಂಪತಿ
Last Updated 27 ಜನವರಿ 2020, 19:30 IST
ಅಕ್ಷರ ಗಾತ್ರ

ಕೋಲಾರ: ಬೆನ್ನು ಹುರಿ ಸಮಸ್ಯೆಯೊಂದಿಗೆ ಜನಿಸಿದ ಕಂದಮ್ಮವೊಂದು ತಬ್ಬಲಿಯಾದ ಕಥೆಯಿದು. ಬೆನ್ನು ಹುರಿ ಸಮಸ್ಯೆಯಿಂದ ಬಳಲುತ್ತಿರುವ ನವಜಾತ ಶಿಶುವನ್ನು ಪೋಷಕರು ನಿಷ್ಕರುಣೆಯಿಂದ ಆಸ್ಪತ್ರೆಯಲ್ಲೇ ಬಿಟ್ಟು ಹೋಗಿದ್ದು, ಮಗು ಈಗ ಅನಾಥವಾಗಿದೆ.

ಜಿಲ್ಲೆಯ ಮಾಲೂರು ತಾಲ್ಲೂಕಿನ ಕೆಂಪಸಂದ್ರ ಗ್ರಾಮದ ಅನಿಲ್‌ (ಹೆಸರು ಬದಲಿಸಲಾಗಿದೆ) ಎಂಬುವರ ಪತ್ನಿ ವಿದ್ಯಾ (ಹೆಸರು ಬದಲಿಸಲಾಗಿದೆ) ಅವರು ಜಿಲ್ಲಾ ಕೇಂದ್ರದ ಆಸ್ಪತ್ರೆಯಲ್ಲಿ ಜ.4ರಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಈ ಪೈಕಿ ಒಂದು ಮಗು ಬೆನ್ನು ಹುರಿ ಸಮಸ್ಯೆಗೆ ತುತ್ತಾಗಿದೆ.

ಇದರಿಂದ ಬೇಸರಗೊಂಡಿರುವ ದಂಪತಿಯು ಅನಾರೋಗ್ಯಪೀಡಿತ ಮಗುವನ್ನು ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದಾರೆ. ವೈದ್ಯರು ಹಾಗೂ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರ ಮನವೊಲಿಕೆ ಪ್ರಯತ್ನಕ್ಕೂ ದಂಪತಿಯ ಮನಸ್ಸು ಕರಗಿಲ್ಲ.

ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ದಂಪತಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಆಪ್ತ ಸಮಾಲೋಚನೆ ಮಾಡಿದರೂ ಮಗುವನ್ನು ತಾಯಿಯ ಮಡಿಲು ಸೇರಿಸುವ ಪ್ರಯತ್ನ ಸಫಲವಾಗಿಲ್ಲ. ವಿದ್ಯಾ ಬಿ.ಎ ಪದವೀಧರೆ. ಪಿಯುಸಿ ಓದಿರುವ ಅನಿಲ್‌ ಕೃಷಿಕರಾಗಿದ್ದಾರೆ. ಆರ್ಥಿಕವಾಗಿ ಸ್ಥಿತಿವಂತರಾಗಿರುವ ದಂಪತಿ ಅನಾರೋಗ್ಯಪೀಡಿತ ಮಗುವಿನ ಪೋಷಣೆಗೆ ಹಿಂದೇಟು ಹಾಕಿದ್ದಾರೆ.

ಸಂಬಂಧದಲ್ಲೇ ಮದುವೆ: ‘ಅನಿಲ್‌ ಮತ್ತು ವಿದ್ಯಾ ಅವರ ಮದುವೆಯಾಗಿ 2 ವರ್ಷವಾಗಿದೆ. ಅನಿಲ್‌ ಅವರು ವಿದ್ಯಾ ಅವರಿಗೆ ಸೋದರ ಮಾವ (ತಾಯಿಯ ತಮ್ಮ). ರಕ್ತ ಸಂಬಂಧದಲ್ಲೇ ಮದುವೆಯಾಗಿರುವ ಕಾರಣಕ್ಕೆ ಮಗುವಿಗೆ ಬೆನ್ನು ಹುರಿ ಸಮಸ್ಯೆ ಕಾಣಿಸಿಕೊಂಡಿದೆ’ ಎಂದು ವೈದ್ಯರು ‘ಪ್ರಜಾವಾಣಿ’ಗೆ ತಿಳಿಸಿದರು.

ದಂಪತಿಯು ಮನೆಗೆ ಕರೆದೊಯ್ದಿದಿರುವ ಮಗುವಿಗೆ ಹೋಲಿಸಿದರೆ ಆಸ್ಪತ್ರೆಯಲ್ಲಿರುವ ಮಗು ದೈಹಿಕವಾಗಿ ಹೆಚ್ಚು ಚುರುಕಾಗಿದೆ. ಈ ಮಗುವಿನ ತೂಕ 1.75 ಕೆ.ಜಿಯಿದೆ. ದಂಪತಿ ಜತೆಗಿರುವ ಮಗುವಿನ ತೂಕ 1.60 ಕೆ.ಜಿಯಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಮಾನದಂಡದ ಪ್ರಕಾರ ಆರೋಗ್ಯವಂತ ಮಗುವಿನ ತೂಕ 2.5 ಕೆ.ಜಿಗಿಂತ ಕಡಿಮೆ ಇರಬಾರದು.

60 ದಿನದ ಗಡುವು: ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರದ (ಸಿಎಆರ್‌ಎ) ಮಾರ್ಗಸೂಚಿ ಅನ್ವಯ ಪೋಷಕರಿಗೆ ಮಗುವನ್ನು ವಾಪಸ್‌ ಪಡೆಯಲು 60 ದಿನಗಳ ಕಾಲಾವಕಾಶವಿದೆ. ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಆಸ್ಪತ್ರೆಯಲ್ಲಿರುವ ಮಗುವನ್ನು ಬೆಂಗಳೂರಿನ ಶಿಶು ಮಂದಿರಕ್ಕೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆ ಕೊಡಿಸಿ 6 ವರ್ಷದವರೆಗೆ ಪಾಲನೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT