ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ತೂರಾಟ: ಸಹಜ ಸ್ಥಿತಿಯತ್ತ ಮುಳಬಾಗಿಲು

ನಿಷೇಧಾಜ್ಞೆ ಜಾರಿ: ಪಟ್ಟಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌
Last Updated 9 ಏಪ್ರಿಲ್ 2022, 14:23 IST
ಅಕ್ಷರ ಗಾತ್ರ

ಕೋಲಾರ: ಶ್ರೀರಾಮ ಶೋಭಾ ಯಾತ್ರೆ ವೇಳೆ ನಡೆದ ಕಲ್ಲು ತೂರಾಟದಿಂದ ಉದ್ವಿಗ್ನಗೊಂಡಿದ್ದ ಜಿಲ್ಲೆಯ ಮುಳಬಾಗಿಲು ಪಟ್ಟಣವು ಶನಿವಾರ ಸಹಜ ಸ್ಥಿತಿಗೆ ಮರಳಿದ್ದು, ತಾಲ್ಲೂಕು ಆಡಳಿತವು ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ.

ಕಲ್ಲು ತೂರಾಟ ಮತ್ತು ಪೊಲೀಸ್‌ ಲಾಠಿ ಪ್ರಹಾರದ ಬೆನ್ನಲ್ಲೇ ಶುಕ್ರವಾರ ರಾತ್ರಿಯೇ ಕೇಂದ್ರ ವಲಯ ಐಜಿಪಿ ಎಂ.ಚಂದ್ರಶೇಖರ್‌ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಮುಳಬಾಗಿಲು ಪಟ್ಟಣಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದು, ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ತಹಶೀಲ್ದಾರ್‌ ಆರ್‌.ಶೋಭಿತಾ ಅವರು ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಭಾನುವಾರ (ಏ.10) ರಾತ್ರಿ 12 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಕಲ್ಲು ತೂರಾಟ ನಡೆದ ಜಹಂಗೀರ್‌ ಮೊಹಲ್ಲಾ ವೃತ್ತದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನಿಷೇಧಾಜ್ಞೆ ಕಾರಣಕ್ಕೆ ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚಿ ವಾಣಿಜ್ಯ ಚಟುವಟಿಕೆ ಸ್ಥಗಿತಗೊಳಿಸಿದರು. ವಾಹನ ಸಂಚಾರ ಮತ್ತು ಜನರ ಓಡಾಟ ವಿರಳವಾಗಿತ್ತು.

ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆ (ಡಿಎಆರ್‌), ರಾಜ್ಯ ಸಶಸ್ತ್ರ ಮೀಸಲು ಪೊಲೀಸ್ ಪಡೆಯನ್ನು (ಕೆಎಸ್‌ಆರ್‌ಪಿ) ಮುಳಬಾಗಿಲಿನಲ್ಲಿ ನಿಯೋಜಿಸಲಾಗಿದೆ. ಅಲ್ಲದೇ, ಬೆಂಗಳೂರಿನಿಂದ ಹೆಚ್ಚಿನ ಪೊಲೀಸ್‌ ಸಿಬ್ಬಂದಿಯನ್ನು ಮುಳಬಾಗಿಲಿಗೆ ಕರೆಸಿಕೊಳ್ಳಲಾಗಿದೆ. ಕಲ್ಲು ತೂರಾಟ ಮತ್ತು ನಂತರ ನಡೆದ ಅಹಿತಕರ ಘಟನೆ ಸಂಬಂಧ ಪೊಲೀಸರು 9 ಮಂದಿಯನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯ ಮುಂದುವರಿಸಿದ್ದಾರೆ.

ಘಟನೆ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಐಜಿಪಿ ಚಂದ್ರಶೇಖರ್‌, ‘ಶೋಭಾ ಯಾತ್ರೆ ವೇಳೆ ಕಲ್ಲು ತೂರಾಟ ನಡೆದಿದೆ. ಘಟನೆ ವೇಳೆ ವಿದ್ಯುತ್‌ ಸಂಪರ್ಕ ಸಹ ಕಡಿತಗೊಂಡಿತ್ತು. ಈ ವಿಚಾರವಾಗಿ ಪರಿಶೀಲನೆ ನಡೆಸುತ್ತಿದ್ದೇವೆ. ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಮಾಡಿದ್ದೇವೆ’ ಎಂದು ತಿಳಿಸಿದರು.

ನಡೆದದ್ದು ಏನು?: ಶ್ರೀರಾಮನವಮಿ ಹಿನ್ನೆಲೆಯಲ್ಲಿ ಮುಳಬಾಗಿಲಿನಿಂದ ಆವಣಿವರೆಗೆ ಶುಕ್ರವಾರ ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಮುಳಬಾಗಿಲಿನ ಮುತ್ಯಾಲಪೇಟೆಯಿಂದ ಆರಂಭವಾದ ಶೋಭಾ ಯಾತ್ರೆ ರಾತ್ರಿ ಜಹಂಗೀರ್‌ ಮೊಹಲ್ಲಾ ಬಳಿ ಬಂದಾಗ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು. ಆಗ ಕಿಡಿಗೇಡಿಗಳು ಏಕಾಏಕಿ ಕಲ್ಲು ತೂರಾಟ ನಡೆಸಿದ್ದರು. ಅಲ್ಲದೇ, ಅದೇ ಮಾರ್ಗವಾಗಿ ಸಾಗುತ್ತಿದ್ದ ಬೈಕ್‌ ಸವಾರನನ್ನು ತಡೆದು ಹಲ್ಲೆ ನಡೆಸಿ ಬೈಕ್‌ಗೆ ಬೆಂಕಿ ಹಚ್ಚಿದ್ದರು.

ಅಕ್ಕಪಕ್ಕದ ಅಂಗಡಿಗಳ ಮೇಲೂ ಕಲ್ಲು ತೂರಿದ್ದ ಕಿಡಿಗೇಡಿಗಳ ಗುಂಪು, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹಚ್ಚಿತ್ತು ಮತ್ತು ಈದ್ಗಾ ಮೈದಾನದಲ್ಲಿ ನಿಂತಿದ್ದ ಟ್ರಕ್‌ ಜಖಂಗೊಳಿಸಿತ್ತು. ಘಟನೆಯಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಕಾರಣ ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಿದ್ದರು. ನಂತರ ಶೋಭಾ ಯಾತ್ರೆ ಆವಣಿ ಗ್ರಾಮಕ್ಕೆ ತಲುಪಿತು.

ಮಾಂಸ ಮಾರಾಟಕ್ಕೆ ನಿರ್ಬಂಧ: ನಿಷೇಧಾಜ್ಞೆ ಜಾರಿಯ ಜತೆಗೆ ಮುಳಬಾಗಿಲಿನಲ್ಲಿ ಭಾನುವಾರ ಪ್ರಾಣಿಗಳ ವಧೆ ಹಾಗೂ ಮಾಂಸ ಮಾರಾಟ ಮಾಡದಂತೆ ನಿರ್ಬಂಧ ವಿಧಿಸಿ ನಗರಸಭೆ ಆದೇಶ ಹೊರಡಿಸಿದೆ.

ಈ ಆದೇಶ ಉಲ್ಲಂಘಿಸಿ ಪ್ರಾಣಿಗಳ ವಧೆ ನಡೆಸಿದರೆ ಅಥವಾ ಮಾಂಸದ ವಹಿವಾಟು ನಡೆಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ನಗರಸಭೆ ಹಿರಿಯ ಅರೋಗ್ಯ ನಿರೀಕ್ಷಕರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT