ಜಿಲ್ಲೆಯಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು ರಾತ್ರಿ ಓಡಾಡುವಂತಿಲ್ಲ ಬೈಕ್ ಓಡಿಸುವಂತಿಲ್ಲ ಮಕ್ಕಳನ್ನು ಹೊರಗೆ ಬಿಡುವಂತಿಲ್ಲ ಎಂಬ ಪರಿಸ್ಥಿತಿ ನೆಲೆಸಿದೆ. ದಿನೇದಿನೇ ಹೆಚ್ಚುತ್ತಿರುವ ಈ ಶ್ವಾನಗಳ ‘ರೌಡಿಸಂ’ನಿಂದ ಜನರ ಸ್ಥಿತಿ ‘ನಾಯಿ’ಪಾಡಾಗಿದೆ. ‘ಕಳ್ಳರನ್ನಾದರೂ ಎದುರಿಸಬಹುದು ಈ ನಾಯಿ ಕಾಟ ಬೇಡ’ ಎನ್ನುಷ್ಟರ ಮಟ್ಟಿಗೆ ಜನರು ತಲುಪಿದ್ದಾರೆ. ಗ್ಯಾಂಗ್ ಕಟ್ಟಿಕೊಂಡು ರಸ್ತೆಯಲ್ಲಿ ಓಡಾಡುತ್ತಿರುವ ರೌಡಿಗಳಂತೆ ಈ ಶ್ವಾನಗಳು ವರ್ತಿಸುತ್ತಿವೆ. ಪ್ರತಿ ಗಲ್ಲಿಯಲ್ಲಿಯೂ ಸರಿಸುಮಾರು 50 ರಿಂದ 100 ನಾಯಿಗಳಿವೆ. ನಾಯಿಗಳಿಂದ ಕಚ್ಚಿಸಿಕೊಂಡು ಆಸ್ಪತ್ರೆ ಸೇರುವವ ಸಂಖ್ಯೆ ಹೆಚ್ಚುತ್ತಲೇ ಇದೆ. ಜಿಲ್ಲೆಯ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ 2024ರಲ್ಲಿ ಒಂದೇ ವರ್ಷದಲ್ಲಿ ಜಿಲ್ಲೆಯಲ್ಲಿ 8582 ಮಂದಿಗೆ ಬೀದಿನಾಯಿಗಳು ಕಚ್ಚಿವೆ. ಈ ವರ್ಷ ಆಗಸ್ಟ್ ಅಂತ್ಯದವರೆಗೆ 7887 ಮಂದಿಗೆ ನಾಯಿ ಕಚ್ಚಿದ ಪ್ರಕರಣ ದಾಖಲಾಗಿದೆ.