ಶನಿವಾರ, ಆಗಸ್ಟ್ 20, 2022
21 °C
ರೈತ ಸಂಘ ಸದಸ್ಯರ ಪ್ರತಿಭಟನೆ

ರೈತರ ವಿರುದ್ಧದ ಹೇಳಿಕೆಗೆ ಖಂಡನೆ: ಕೃಷಿ ಸಚಿವ ಬಿ.ಸಿ. ಪಾಟೀಲರ ಪ್ರತಿಕೃತಿ ದಹನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳೆಂದು ಹೇಳಿಕೆ ನೀಡಿರುವ ಕೃಷಿ ಸಚಿವ ಬಿ.ಸಿ. ಪಾಟೀಲರ ವರ್ತನೆ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಶುಕ್ರವಾರ ಪ್ರತಿಭಟನೆ ಮಾಡಿದರು.

ಸಚಿವರ ಪ್ರತಿಕೃತಿ ದಹಿಸಿದ ಪ್ರತಿಭಟನಾಕಾರರು ಬಿ.ಸಿ.ಪಾಟೀಲ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಪಾಟೀಲ ಅವರು ಸಚಿವ ಸ್ಥಾನದ ಘನತೆ ಮರೆತು ರೈತರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಬೆಳೆ ನಷ್ಟ, ಬೆಲೆ ಕುಸಿತ, ಸಾಲದ ಕಾರಣಕ್ಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿದೆ. ಸಚಿವರು ಸಂಕಷ್ಟದಲ್ಲಿರುವ ರೈತರಿಗೆ ಧೈರ್ಯ ತುಂಬುವುದನ್ನು ಬಿಟ್ಟು ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಟೀಕಿಸಿದರು.

‘ಸಚಿವ ಪಾಟೀಲ ಅವರು ತಿಂಗಳ ಹಿಂದೆ ಮಂಡ್ಯ ಜಿಲ್ಲೆಯ ಮಡುವಿನಕೋಡಿ ಗ್ರಾಮದಲ್ಲಿ ಕಾಳು ಕಟ್ಟಿದ್ದ ಭತ್ತದ ಬೆಳೆಗೆ ಗೊಬ್ಬರ ಹಾಕಿ ತಮ್ಮ ಅಜ್ಞಾನ ಪ್ರದರ್ಶಿಸಿದ್ದರು. ರೈತಪರ ಎಂದು ಭಾಷಣ ಮಾಡುವ ಪಾಟೀಲ ಅವರಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ರೈತರನ್ನು ಹೇಡಿಗಳೆಂದು ಕರೆದಿರುವ ಅವರಿಗೆ ಸಚಿವ ಸ್ಥಾನದಲ್ಲಿ ಮುಂದುವರಿಯುವ ನೈತಿಕತೆಯಿಲ್ಲ’ ಎಂದು ಟೀಕಿಸಿದರು.

‘ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಅವರು ಕೃಷಿ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದ್ದಾರೆ. ರೈತಪರ ಆಡಳಿತ ನೀಡುತ್ತೇವೆಂದು ಹೇಳಿದ್ದ ಯಡಿಯೂರಪ್ಪ ರೈತರ ಹಿತ ಕಡೆಗಣಿಸಿ ಬಂಡವಾಳಶಾಹಿಗಳು ಹಾಗೂ ಕಾರ್ಪೊರೇಟ್‌ ಕಂಪನಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

‘ಕೃಷಿಯ ಗಂಧ ಗಾಳಿ ಗೊತ್ತಿಲ್ಲದ ಸಚಿವ ಪಾಟೀಲ ಅವರು ಕೃಷಿ ಸಚಿವರಾಗಿರುವುದು ದೊಡ್ಡ ದುರಂತ. ಹಣ ಮತ್ತು ಸಚಿವ ಸ್ಥಾನದ ಆಸೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷಾಂತರ ಮಾಡಿದ ಪಾಟೀಲ ಅವರಿಗೆ ರೈತರ ಬಗ್ಗೆ ಮಾತನಾಡುವ ಯೋಗ್ಯತೆಯಿಲ್ಲ. ರೈತರನ್ನು ಹೇಡಿಗಳೆಂದು ಜರಿದಿರುವ ಅವರು ಇಡೀ ರೈತ ಕುಲಕ್ಕೆ ಅವಮಾನ ಮಾಡಿದ್ದಾರೆ’ ಎಂದು ಗುಡುಗಿದರು.

ಘೇರಾವ್‌ ಎಚ್ಚರಿಕೆ: ‘ಸಚಿವ ಪಾಟೀಲ ಅವರು ರೈತರ ಕಾಲು ಹಿಡಿದು ಕ್ಷಮೆ ಕೇಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಅದು ಸಾಧ್ಯವಾಗದಿದ್ದರೆ ಮುಖ್ಯಮಂತ್ರಿಗಳು ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಇಲ್ಲವಾದರೆ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಸಚಿವರಿಗೆ ಘೇರಾವ್‌ ಹಾಕಿ ಮುಖಕ್ಕೆ ಮಸಿ ಬಳಿಯುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸಂಘಟನೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಶಿವು, ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಅನುಶ್ರೀ, ಕೋಲಾರ ತಾಲ್ಲೂಕು ಘಟಕದ ಅಧ್ಯಕ್ಷ ಇ.ಮಂಜುನಾಥ್, ಬಂಗಾರಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್, ಸದಸ್ಯರಾದ ಚಾಂದ್‌ಪಾಷಾ, ಕಿರಣ್, ಸುಪ್ರೀಂಚಲ, ತಿಮ್ಮಣ್ಣ, ನಾಗೇಶ್, ಕೇಶವ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು