ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್‌ ಬಂದ್‌ಗೆ ಕೋಲಾರದಲ್ಲಿ ವ್ಯಾಪಕ ಬೆಂಬಲ: ಜನಜೀವನ ಅಸ್ತವ್ಯಸ್ತ

ಕೃಷಿ ಕಾಯ್ದೆಗೆ ವಿರೋಧ: ಕೇಂದ್ರ ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ
Last Updated 8 ಡಿಸೆಂಬರ್ 2020, 13:14 IST
ಅಕ್ಷರ ಗಾತ್ರ

ಕೋಲಾರ: ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ 3 ಪ್ರಮುಖ ಕೃಷಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ರೈತ ಸಂಘಟನೆಗಳು ‘ಭಾರತ ಬಂದ್‌’ಗೆ ಕರೆ ಕೊಟ್ಟಿದ್ದರಿಂದ ಜಿಲ್ಲೆಯಾದ್ಯಂತ ಮಂಗಳವಾರ ವಾಣಿಜ್ಯ ವಹಿವಾಟು ಹಾಗೂ ಬಸ್‌ ಸೇವೆ ಸ್ಥಗಿತಗೊಂಡು ಜನಜೀವನ ಅಸ್ತವ್ಯಸ್ತವಾಯಿತು.

ಬಂದ್‌ ಹಿನ್ನೆಲೆಯಲ್ಲಿ ಇಡೀ ದಿನ ಅಂಗಡಿಗಳು ಮುಚ್ಚಿದ್ದವು. ಖಾಸಗಿ ಬಸ್‌ಗಳು ರಸ್ತೆಗೆ ಇಳಿಯಲೇ ಇಲ್ಲ. ಸರಕು ಸಾಗಣೆ ವಾಹನ ಸೇವೆಯಲ್ಲಿ ವ್ಯತ್ಯಯವಾಗಿ ಜನಜೀವನಕ್ಕೆ ತೊಂದರೆಯಾಯಿತು. ಬೆಳಿಗ್ಗೆ ರಸ್ತೆಗಿಳಿದ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ವಿವಿಧ ಸಂಘಟನೆ ಸದಸ್ಯರು ತಡೆದರು.

ಬ್ಯಾಂಕ್‌, ಅಂಚೆ ಕಚೇರಿ, ಬಿಎಸ್‌ಎನ್‌ಎಲ್‌ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಕೆಲ ಹೊತ್ತು ಕಾರ್ಯ ಚಟುವಟಿಕೆ ನಡೆದವು. ಬಳಿಕ ವಿವಿಧ ಸಂಘಟನೆಗಳ ಸದಸ್ಯರು ಖಾಸಗಿ ಕಂಪನಿ ಹಾಗೂ ಸರ್ಕಾರಿ ಕಚೇರಿಗಳನ್ನು ಬಲವಂತವಾಗಿ ಮುಚ್ಚಿಸಿದರು. ಅಲ್ಲದೇ, ಆಟೊಗಳನ್ನು ತಡೆದು ಬಂದ್‌ ಬೆಂಬಲಿಸುವಂತೆ ಒತ್ತಾಯಿಸುತ್ತಿದ್ದ ದೃಶ್ಯ ಹಲವೆಡೆ ಕಂಡುಬಂತು.

ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಬಸ್‌ಗಾಗಿ ಗಂಟೆಗಟ್ಟಲೇ ಕಾಯುತ್ತಾ ಕುಳಿತಿದ್ದರು. ಕೊನೆಗೂ ಬಸ್‌ ಸಂಚಾರ ಆರಂಭವಾಗದಿದ್ದರಿಂದ ಪ್ರಯಾಣ ಮೊಟಕುಗೊಳಿಸಿ ಮನೆಯತ್ತ ಹೆಜ್ಜೆ ಹಾಕಿದರು. ಸಾರ್ವಜನಿಕರು ಅನಿವಾರ್ಯವಾಗಿ ಸರಕು ಸಾಗಣೆ ಆಟೊಗಳಲ್ಲಿ ಸಂಚರಿಸುತ್ತಿದ್ದ ದೃಶ್ಯ ಕಂಡುಬಂತು.

ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಹಾಜರಾತಿ ಕಡಿಮೆ ಇತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಕೆಲ ಎಟಿಎಂ ಕೇಂದ್ರಗಳನ್ನು ಮುಚ್ಚಲಾಗಿತ್ತು. ಇದರಿಂದ ಗ್ರಾಹಕರು ತೊಂದರೆ ಅನುಭವಿಸಿದರು. ಆಸ್ಪತ್ರೆಗಳು, ಔಷಧ ಮಾರಾಟ ಮಳಿಗೆಗಳು ಎಂದಿನಂತೆ ಸೇವೆ ಒದಗಿಸಿದವು. ಪೆಟ್ರೋಲ್‌ ಬಂಕ್‌ಗಳಲ್ಲಿ ವಹಿವಾಟು ಸಹಜವಾಗಿತ್ತು.

ಆಕ್ರೋಶ ವ್ಯಕ್ತ

ರಸ್ತೆ ತಡೆ, ಬೈಕ್‌ ರ್‌್ಯಾಲಿ, ಎತ್ತಿನ ಬಂಡಿ ಮೆರವಣಿಗೆ ನಡೆಸಿದ ವಿವಿಧ ಸಂಘಟನೆಗಳ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು. ಅಲ್ಲದೇ, ರಸ್ತೆ ಮಧ್ಯೆಯೇ ಅಡುಗೆ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸದಾ ಜನಜಂಗುಳಿ ಮತ್ತು ವಾಹನ ದಟ್ಟಣೆಯಿಂದ ಗಿಜಿಗುಡುತ್ತಿದ್ದ ಮಾರುಕಟ್ಟೆಗಳು ಬಿಕೋ ಎನ್ನುತ್ತಿದ್ದವು. ರಸ್ತೆಗಳಲ್ಲಿ ಜನರ ಓಡಾಟ ಮತ್ತು ವಾಹನ ಸಂಚಾರ ವಿರಳವಾಗಿತ್ತು. ಮಕ್ಕಳು ಕೆಎಸ್‌ಆರ್‌ಟಿಸಿ ನಿಲ್ದಾಣದೊಳಗೆ ಮತ್ತು ಮಾರುಕಟ್ಟೆ ಆವರಣದಲ್ಲಿ ಕ್ರಿಕೆಟ್‌ ಆಡಿ ಸಂಭ್ರಮಿಸಿದರು.

ಬಂದೋಬಸ್ತ್

ವರ್ತಕರು, ಹೋಟೆಲ್ ಮಾಲೀಕರ ಸಂಘ, ರೈತ, ದಲಿತ ಮತ್ತು ಕಾರ್ಮಿಕ ಸಂಘಟನೆಗಳು, ಸಿಪಿಎಂ, ಕರ್ನಾಟಕ ಪ್ರಾಂತ ರೈತ ಸಂಘ, ಕಾಂಗ್ರೆಸ್‌ ಕಿಸಾನ್‌ ಖೇತ್‌ ಘಟಕ, ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ, ಸರಕು ಸಾಗಣೆ ವಾಹನ ಮಾಲೀಕರು ಮತ್ತು ಚಾಲಕರ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಬಂದ್‌ಗೆ ಬೆಂಬಲ ಸೂಚಿಸಿದರು.

ಸರ್ಕಾರಿ ಕಚೇರಿಗಳು, ಬಸ್‌ ನಿಲ್ದಾಣ, ರೈಲು ನಿಲ್ದಾಣ, ಪ್ರಮುಖ ವೃತ್ತ, ರಸ್ತೆಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಜತೆಗೆ ಪೊಲೀಸ್‌ ಗಸ್ತು ಹೆಚ್ಚಿಸಲಾಗಿತ್ತು. ಹಿರಿಯ ಪೊಲೀಸ್‌ ಅಧಿಕಾರಿಗಳು ನಿಯಮಿತವಾಗಿ ಗಸ್ತು ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT