ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಭಾರತ ಬಂದ್‌ ಬೆಂಬಲಿಸಿ

ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಸಂಚಾಲಕ ನಾರಾಯಣಸ್ವಾಮಿ ಮನವಿ
Last Updated 6 ಜನವರಿ 2020, 13:12 IST
ಅಕ್ಷರ ಗಾತ್ರ

ಕೋಲಾರ: ‘ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಮಿತಿಯು ಜ.8ರಂದು ಗ್ರಾಮೀಣ ಭಾರತ ಬಂದ್‌ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರು ಬೆಂಬಲ ನೀಡಬೇಕು’ ಎಂದು ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಸಂಚಾಲಕ ಗಾಂಧಿನಗರ ನಾರಾಯಣಸ್ವಾಮಿ ಮನವಿ ಮಾಡಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ರೈತ ವಿರೋಧಿ ನೀತಿ ವಿರುದ್ಧ ಜಿಲ್ಲೆಯಲ್ಲೂ ಸಾರ್ವತ್ರಿಕ ಮುಷ್ಕರ ನಡೆಸಲಾಗುವುದು. ಕೇಂದ್ರವು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿ ಕಾರ್ಮಿಕ ಕಾನೂನುಗಳನ್ನು ನಾಶ ಮಾಡಿದೆ. ರಕ್ಷಣೆ, ಪೆಟ್ರೋಲಿಯಂ ಮುಂತಾದ ಸಾರ್ವಜನಿಕ ವಲಯಗಳಲ್ಲಿ ಬಂಡವಾಳ ಹಿಂತೆಗೆತ ಮಾಡಲಾಗುತ್ತಿದೆ’ ಎಂದು ದೂರಿದರು.

‘ಬಿಜೆಪಿ ಸರ್ಕಾರವು ರೈತರ ಸಮಸ್ಯೆ ನಿವಾರಿಸುವಲ್ಲಿ ತಾರತಮ್ಯ ಮಾಡುತ್ತಿದೆ. ಫಸಲ್ ಭೀಮಾ ಯೋಜನೆ ಸೇರಿದಂತೆ ಸರ್ಕಾರದ ಯೋಜನೆಗಳ ಲಾಭ ಉದ್ಯಮಿಗಳು ಹಾಗೂ ಕಂಪನಿಗಳ ಪಾಲಾಗುತ್ತಿದೆ. ರೈತರಿಗೆ, ಕಾರ್ಮಿಕರಿಗೆ ಅನ್ಯಾಯವಾಗುತ್ತಿದ್ದರೂ ಪ್ರಶ್ನಿಸುವಂತಿಲ್ಲ. ಕೇಂದ್ರವು ಮನಸೋಇಚ್ಛೆ ಕಾನೂನು ತಿದ್ದುಪಡಿ ಮಾಡುತ್ತಿದೆ. ದುಡಿಯುವ ವರ್ಗಗಳು ದುರ್ಬಲಗೊಳ್ಳುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜ.8ರಂದು ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿನಡೆಸಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುತ್ತದೆ. ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಸಲ್ಲಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಬೇಕು. ಸಾರ್ವಜನಿಕರ ಪಡಿತರ ವ್ಯವಸ್ಥೆ ಬಲಪಡಿಸಬೇಕು. ಜಿಲ್ಲೆಯಲ್ಲಿ ಇಎಸ್‌ಐ ಆಸ್ಪತ್ರೆ ನಿರ್ಮಾಣ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು’ ಎಂದು ಮನವಿ ಮಾಡಿದರು.

ಹೋರಾಟ ನಡೆಸಬೇಕು

‘ಬೆಮಲ್ ಕಂಪನಿಯು ದೇಶದ ರಕ್ಷಣಾ ಇಲಾಖೆಗೆ ಆಧುನಿಕ ತಂತ್ರಜ್ಞಾನ ಕೊಡುಗೆಯಾಗಿ ನೀಡಿದೆ. ಜತೆಗೆ ದೇಶದ ಆರ್ಥಿಕ ಲಾಭಕ್ಕೂ ಸಹಕಾರ ನೀಡುತ್ತಿದೆ. ಕೇಂದ್ರವು ಇಂತಹ ಕಂಪನಿಯನ್ನು ಖಾಸಗೀಕರಣಗೊಳಿಸಲು ಮುಂದಾಗಿದ್ದು, ಇದರ ವಿರುದ್ಧ ಹೋರಾಟ ನಡೆಸಬೇಕು’ ಎಂದು ಬೆಮಲ್ ನೌಕರರ ಸಂಘದ ಅಧ್ಯಕ್ಷ ಆಂಜನೇಯರೆಡ್ಡಿ ಹೇಳಿದರು.

‘ಕೆಜಿಎಫ್, ಮೈಸೂರು ಹಾಗೂ ಬೆಂಗಳೂರಿನಲ್ಲಿ ಬೆಮಲ್ ಕಾರ್ಖಾನೆ ಕಾರ್ಯ ನಿರ್ವಹಿಸುತ್ತಿದ್ದು, ರಕ್ಷಣಾ ಇಲಾಖೆ ಬೇಡಿಕೆಗೆ ತಕ್ಕ ಯಂತ್ರೋಪಕರಣ ತಯಾರು ಮಾಡಿಕೊಡುವಲ್ಲಿ ಸಾಧನೆ ಮಾಡಿದೆ. ಕೇಂದ್ರದ ಕಾಯ್ದೆಗಳು ಕಾರ್ಮಿಕರ ಪಾಲಿಗೆ ತೂಗುಗತ್ತಿಯಾಗಿವೆ’ ಎಂದು ಕಿಡಿಕಾರಿದರು.

ಜೆಸಿಟಿಯು ಸಂಚಾಲಕರಾದ ಕೃಷ್ಣಾರೆಡ್ಡಿ, ನಾಗರಾಜ್, ಎಂ.ವಿಜಯಕೃಷ್ಣ, ಶ್ರೀನಿವಾಸರಾವ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT