ಸೋಮವಾರ, ಮಾರ್ಚ್ 1, 2021
31 °C
ಶ್ರದ್ಧಾಂಜಲಿ ಸಭೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟಮುನಿಯಪ್ಪ ಸ್ಮರಣೆ

ಸುಷ್ಮಾ ಸ್ವರಾಜ್‌ ಸೇವೆ ಸ್ಮರಣೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಪಕ್ಷ ಸಂಘಟನೆಯಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಇತರ ನಾಯಕರಿಗೆ ಹೆಗಲು ಕೊಟ್ಟು ಶ್ರಮಿಸಿದ ಕೇಂದ್ರದ ಸಚಿವೆ ಸುಷ್ಮಾ ಸ್ವರಾಜ್ ಅವರ ಸೇವೆ ಸ್ಮರಣೀಯ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಸ್ಮರಿಸಿದರು.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ‘ಸುಷ್ಮಾ ಸ್ವರಾಜ್‌ ಅವರು ಬಾರಿ ಸಂಸದರಾಗಿ ಮತ್ತು 3 ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ, ದೆಹಲಿ ಮುಖ್ಯಮಂತ್ರಿ, ವಿದೇಶಾಂಗ ಸಚಿವೆ ಹುದ್ದೆ ಸೇರಿದಂತೆ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ್ದರು’ ಎಂದು ಹೇಳಿದರು.

‘ಸುಷ್ಮಾ ಸ್ವರಾಜ್ ಮಾಜಿ ಪ್ರಧಾನಿ ವಾಜಪೇಯಿ ಅಧಿಕಾರಾವಧಿಯಲ್ಲಿ ಪಕ್ಷ ಸಂಘಟನೆಗೆ ಭುಜಕ್ಕೆ ಭುಜ ಕೊಟ್ಟು ಕೆಲಸ ಮಾಡಿದರು. ಅವರಿಗೂ ಬಳ್ಳಾರಿಗೂ ಅವಿನಾಭಾವ ಸಂಬಂಧವಿತ್ತು. ರಾಜ್ಯ ರಾಜಕೀಯದಲ್ಲಿ ಬಿಜೆಪಿಗೆ ಹೆಚ್ಚಿನ ಶಕ್ತಿ ಬರಲು ಕಾರಣಕರ್ತರಾದವರಲ್ಲಿ ಅವರು ಸಹ ಒಬ್ಬರು. ಮಹಿಳೆಯರು ಅವರ ಸಾಧನೆ ನೆನಪಿಸಿಕೊಂಡು ರಾಜಕೀಯದಲ್ಲಿ ಮುನ್ನಡೆಯಬೇಕು’ ಎಂದರು.

‘ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ 370ನೇ ವಿಧಿ ರದ್ದುಗೊಳಿಸಿದ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಷಾ ಅವರ ಕ್ರಮವನ್ನು ಜಗತ್ತಿನೆಲ್ಲೆಡೆ ಎಲ್ಲರೂ ಸ್ವಾಗತಿಸುತ್ತಿದ್ದಾರೆ. ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗಿ ಮುಂದುವರಿದರೆ ದೇಶದ ಸಾಕಷ್ಟು ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ ಎಂಬ ನಿರೀಕ್ಷೆ ಜನರಲ್ಲಿದೆ. ಸುಷ್ಮಾ ಸ್ವರಾಜ್ ಅವರು ಮೋದಿಯವರ ಆಡಳಿತಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟರು’ ಎಂದು ಬಣ್ಣಿಸಿದರು.

ನಿರ್ಣಾಯಕ ಪಾತ್ರ: ‘ವಿದೇಶದಲ್ಲಿ ಭಾರತೀಯರಿಗೆ ಸಂಕಷ್ಟ ಎದುರಾದಾಗ ಸುಷ್ಮಾ ಸ್ವರಾಜ್‌ ಅವರು ಸಕಲ ನೆರವು ನೀಡಿ ವಾಪಸ್‌ ತಾಯ್ನಡಿಗೆ ಕರೆತಂದಿದ್ದಾರೆ. ಬೇಹುಗಾರಿಕೆ ಆರೋಪದ ಮೇರೆಗೆ ಪಾಕಿಸ್ತಾನದಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಪ್ರಕರಣವನ್ನು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ದು ಭಾರತಕ್ಕೆ ನ್ಯಾಯ ದೊರಕಿಸಿಕೊಡುವಲ್ಲಿ ಸುಷ್ಮಾ ಸ್ವರಾಜ್ ನಿರ್ಣಾಯಕ ಪಾತ್ರ ವಹಿಸಿದ್ದಾರೆ’ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಓಂಶಕ್ತಿ ಚಲಪತಿ ತಿಳಿಸಿದರು.

‘ಸುಷ್ಮಾ ಸ್ವರಾಜ್‌ ಅವರ ಸಾವಿನಿಂದ ಮಕ್ಕಳು ತಾಯಿಯನ್ನು ಕಳೆದುಕೊಂಡಷ್ಟು ನೋವಾಗಿದೆ. ಅವರು ಇಡೀ ಜೀವನವನ್ನು ಪಕ್ಷಕ್ಕಾಗಿ ಮುಡುಪಾಗಿಟ್ಟಿದ್ದರು. ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವ ಕರ್ನಾಟಕದಲ್ಲಿ ಪಕ್ಷಕ್ಕೆ ಬಲ ತಂದುಕೊಟ್ಟಿದ್ದರು’ ಎಂದು ಬಿಜೆಪಿ ಮುಖಂಡ ನಾರಾಯಣಸ್ವಾಮಿ ಹೇಳಿದರು.

ಮಹಾ ತಾಯಿ: ‘ಸುಷ್ಮಾ ಸ್ವರಾಜ್‌ ಅವರು ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಸೋತರೂ ರಾಜ್ಯದ ಜತೆಗೆ ನಂಟು ಉಳಿಸಿಕೊಂಡಿದ್ದರು. 70ರ ದಶಕದಲ್ಲಿ ಎಬಿವಿಪಿ ಮೂಲಕ ರಾಜಕೀಯ ಪ್ರವೇಶಿಸಿದ ಅವರು ಪಕ್ಷದಲ್ಲಿ ಹಲವು ಮಹತ್ವದ ಹುದ್ದೆ ನಿಭಾಯಿಸಿದ್ದರು. 90 ಲಕ್ಷ ಜನರಿಗೆ ಮಡಿಲು ಕಾರ್ಯಕ್ರಮ ನೀಡಿದ ಮಹಾ ತಾಯಿ’ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ ಬಣ್ಣಿಸಿದರು.

‘ಪಕ್ಷದ ಕಾರ್ಯಕರ್ತರು ಸುಷ್ಮಾ ಸ್ವರಾಜ್‌ ಅವರು ಮತ್ತೊಮ್ಮೆ ಕೇಂದ್ರದ ಸಚಿವೆಯಾಗಬೇಕೆಂದು ಬಯಸಿದ್ದರು. ಆದರೆ, ಆರೋಗ್ಯದ ಕಾರಣಕ್ಕೆ ಅವರು ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಪಕ್ಷಕ್ಕೆ ಮಾರ್ಗದರ್ಶಕರಾಗಿದ್ದ ಅವರ ಸಾವಿನಿಂದ ಕಾರ್ಯಕರ್ತರು ಆಘಾತಗೊಂಡಿದ್ದಾರೆ’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಬಿ.ಮುನಿವೆಂಕಟಪ್ಪ, ನಗರಸಭೆ ಮಾಜಿ ಸದಸ್ಯ ಎಸ್.ಆರ್.ಮುರಳೀಗೌಡ, ಬಿಜೆಪಿ ಮುಖಂಡರಾದ ಬೈಚಪ್ಪ, ಹನುಮಂತಪ್ಪ, ತಿಮ್ಮರಾಯಪ್ಪ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು