ಭಾನುವಾರ, ಜೂನ್ 26, 2022
28 °C

ದೇಗುಲ ರಕ್ಷಣೆ: ಹೈಕೋರ್ಟ್‌ಗೆ ಪಿಐಎಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ನಗರದ ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವಾಲಯ ಮತ್ತು ಅದರ ಪಕ್ಕದ ಕಲ್ಯಾಣಿ ಸ್ವಚ್ಛತೆ ಕಾಪಾಡಲು ಹಾಗೂ ಒತ್ತುವರಿ ತೆರವಿಗಾಗಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತೇವೆ’ ಎಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ ತಿಳಿಸಿದರು.

ಸೋಮೇಶ್ವರ ದೇಗುಲದ ಕಲ್ಯಾಣಿಯನ್ನು ಗುರುವಾರ ಪರಿಶೀಲಿಸಿ ಮಾತನಾಡಿ, ‘ಮುಜರಾಯಿ ಇಲಾಖೆಯ ಸೋಮೇಶ್ವರ ದೇವಾಲಯವು ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆಗೂ ಸೇರಿದೆ. ಮುಜರಾಯಿ ಮತ್ತು ಪುರಾತತ್ವ ಇಲಾಖೆಯು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಸೋಮೇಶ್ವರ ದೇವಾಲಯ ಮತ್ತು ಕಲ್ಯಾಣಿಯು ಹಿಂದೂಗಳ ಶ್ರದ್ಧಾಕೇಂದ್ರವಾಗಿದ್ದು, ಇದರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಸಂಗತಿಯನ್ನು ಸಂಸದರ ಗಮನಕ್ಕೆ ತರುತ್ತೇವೆ. ಕಲ್ಯಾಣಿ ಸುತ್ತಲಿನ ಕಬ್ಬಿಣದ ಕಾಂಪೌಂಡ್‌ ಹಾಳಾಗಿದ್ದು, ಅದರ ದುರಸ್ತಿಗೆ ಮುಜರಾಯಿ ತಹಶೀಲ್ದಾರ್‌ ನಾಗವೇಣಿ ಕ್ರಮ ಕೈಗೊಂಡಿದ್ದಾರೆ. ಜತೆಗೆ ಕಲ್ಯಾಣಿಯಲ್ಲಿ ಸ್ವಚ್ಛತೆ ಕಾಪಾಡುವಂತೆ ಸೂಚಿಸಿದ್ದಾರೆ’ ಎಂದು ಹೇಳಿದರು.

‘20 ವರ್ಷಗಳ ಹಿಂದೆ ಹೋರಾಟ ನಡೆಸಿ ಕಲ್ಯಾಣಿ ಜಾಗದ ಒತ್ತುವರಿ ತೆರವುಗೊಳಿಸಿ ಸುತ್ತಲೂ ಕಬ್ಬಿಣದ ಕಾಂಪೌಂಡ್ ಹಾಕಿಸಲಾಗಿತ್ತು. ಪುರಾತತ್ವ ಇಲಾಖೆ ನಿಯಮದ ಪ್ರಕಾರ ದೇವಾಲಯದ ಸುತ್ತ ಕನಿಷ್ಠ 100 ಮೀಟರ್ ವ್ಯಾಪ್ತಿಯಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶವಿಲ್ಲ. ಈ ಸಂಬಂಧ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಲು ನಿರ್ಧರಿಸಲಾಗಿದೆ’ ಎಂದರು.

‘ಶ್ರದ್ಧಾಕೇಂದ್ರದ ರಕ್ಷಣೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಕಲ್ಯಾಣಿಯಲ್ಲಿ ಕಸ ಹಾಕುವುದಕ್ಕೆ ತಡೆಯೊಡ್ಡಬೇಕು. ಇತಿಹಾಸ ಪ್ರಸಿದ್ಧ ಪುರಾತನ ದೇವಾಲಯದ ಸಂರಕ್ಷಣೆಗೆ ಜನರು ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಮುಖಂಡರಾದ ವಿನೋದ್, ಮಂಜು, ರಾಧಾಕೃಷ್ಣ, ಅನಿಲ್, ಸೂರಿ, ದೇವಾಲಯ ಸಮಿತಿ ಸದಸ್ಯರು, ಮುಜರಾಯಿ ಇಲಾಖೆ ಸಿಬ್ಬಂದಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು