ಭಾನುವಾರ, ಜೂನ್ 26, 2022
22 °C
ಕೋಚಿಮುಲ್‌ ನಿರ್ದೇಶಕ ಮಂಜುನಾಥರೆಡ್ಡಿ ಆರೋಪಕ್ಕ ಅಧ್ಯಕ್ಷ ನಂಜೇಗೌಡ ತಿರುಗೇಟು

ಟೆಟ್ರಾ ಪ್ಯಾಕ್‌ ಟೆಂಡರ್‌: ಅಕ್ರಮ ನಡೆದಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಹಾಲಿನ ಟೆಟ್ರಾ ಪ್ಯಾಕ್ ಅಥವಾ ಯುಎಚ್‍ಟಿ ಟೆಂಡರ್ ನೀಡಿಕೆಯು ಒಕ್ಕೂಟದ ಆಡಳಿತ ಮಂಡಳಿಯ ನಿರ್ಧಾರ. ಈ ವಿಚಾರದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಒಕ್ಕೂಟದ ನಿರ್ದೇಶಕರಾಗಿ ಆಡಳಿತ ಮಂಡಳಿ ಸಭೆಯಲ್ಲಿ ಒಪ್ಪಿಗೆ ಸೂಚಿಸಿರುವ ಮಂಜುನಾಥರೆಡ್ಡಿ ಅವರು ₹ 6 ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವುದು ಶೋಭೆಯಲ್ಲ’ ಎಂದು ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ತಿರುಗೇಟು ನೀಡಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಟೆಟ್ರಾ ಪ್ಯಾಕ್ ಗುತ್ತಿಗೆ ನೀಡಿರುವುದು ನನ್ನ ವೈಯಕ್ತಿಕ ನಿರ್ಧಾರವಲ್ಲ. ಕೋಲಾರ, ಚಾಮರಾಜನಗರ, ಹಾಸನ, ಮದರ್‌ ಡೇರಿ ಸೇರಿ ಟೆಂಡರ್ ಕರೆದು ಹಾಗೂ ಕೋಚಿಮುಲ್ ಆಡಳಿತ ಮಂಡಳಿಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡ ನಂತರ ನಿರ್ಧಾರವಾಗಿದೆ. ಆದರೆ, ಮಂಜುನಾಥರೆಡ್ಡಿ ಸುಳ್ಳು ಆರೋಪ ಮಾಡಿ ಜನರಿಗೆ ತಪ್ಪು ಸಂದೇಶ ರವಾನಿಸಿದ್ದಾರೆ’ ಎಂದು ಕಿಡಿಕಾರಿದರು.

‘ಪಾರದರ್ಶಕವಾಗಿ ಟೆಂಡರ್ ಪ್ರಕ್ರಿಯೆ ನಡೆಸಿ ಕಾರ್ಯಾದೇಶ ನೀಡಲಾಗಿದೆ. 2020-21ನೇ ಸಾಲಿನಲ್ಲಿ ಟೆಂಡರ್ ನೀಡಿದ ಬಳಿಕ ದಿನಕ್ಕೆ 2.78 ಲಕ್ಷ ಲೀಟರ್‌ನಿಂದ 3.64 ಲಕ್ಷ ಲೀಟರ್‌ವರೆಗೆ ಯುಎಚ್‍ಟಿ ಹಾಲು ಉತ್ಪಾದಿಸಿ ಮಾರುಕಟ್ಟೆ ವೃದ್ಧಿಯಾಗಿ ಒಕ್ಕೂಟಕ್ಕೆ ಲಾಭವಾಗಿದೆ’ ಎಂದು ಮಾಹಿತಿ ನೀಡಿದರು.

‘ಪ್ರತಿ ಲೀಟರ್ ಟೆಟ್ರಾ ಪ್ಯಾಕ್‍ಗೆ ಟೆಂಡರ್‌ನಲ್ಲಿ ಚಾಮರಾಜನಗರ ಹಾಲು ಒಕ್ಕೂಟ ₹ 1.12, ಹಾಸನ ಹಾಲು ಒಕ್ಕೂಟವು 0.95 ಪೈಸೆ, ಮದರ್ ಡೇರಿಯು ₹ 2.76 ನಿಗದಿಪಡಿಸಿವೆ. ಕೋಚಿಮುಲ್‌ 0.91 ಪೈಸೆ ನಿಗದಿಪಡಿಸಿದ್ದು, ಎಲ್ಲಾ ಹಾಲು ಒಕ್ಕೂಟಗಳಿಗಿಂತ ಕಡಿಮೆ ನೀಡುತ್ತಿದೆ. ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಟೆಂಡರ್‌ಗೆ ಸರ್ವಾನುಮತದ ಒಪ್ಪಿಗೆ ನೀಡಿ ಈಗ ಅಪಸ್ವರ ಎತ್ತಿರುವುದು ಸರಿಯಲ್ಲ’ ಎಂದರು.

ಹತಾಶೆ ಮಾತು: ‘ಕೋಚಿಮುಲ್ ವಿಭಜನೆಯ ಪ್ರಯತ್ನ ಹೈಕೋರ್ಟ್ ಆದೇಶದಿಂದ ತಪ್ಪಿ ಹೋಗಿದೆ. ಒಕ್ಕೂಟದ ವಿಭಜನೆಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಸರ್ಕಾರವೇ ಹಿಂದೆ ಸರಿದಿದ್ದು, ವಿಭಜನೆಯ ಪರವಿದ್ದ ಮಂಜುನಾಥರೆಡ್ಡಿ ಹತಾಶೆಯಿಂದ ಸೂಕ್ತ ಮಾಹಿತಿ ಇಲ್ಲದೆ ಮನಬಂದಂತೆ ಮಾತನಾಡಿರಬಹುದು’ ಎಂದು ವ್ಯಂಗ್ಯವಾಡಿದರು.

‘ಕೋಚಿಮುಲ್‍ನಲ್ಲಿ 357 ಹುದ್ದೆ ಖಾಲಿ ಇವೆ. ಟೆಟ್ರಾ ಪ್ಯಾಕ್ ತಂತ್ರಜ್ಞಾನವನ್ನು ಹೊರಗುತ್ತಿಗೆ ನೌಕರರಿಂದ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಟೆಂಡರ್ ನೀಡಿರುವುದರಿಂದ ಒಕ್ಕೂಟಕ್ಕೆ ಲಾಭವಾಗಿದೆ. ಟೆಟ್ರಾ ಪ್ಯಾಕ್ ಹಾಲಿನ ಗುಣಮಟ್ಟ ಹಾಳಾದರೆ ಆ ನಷ್ಟವನ್ನು ಟೆಂಡರ್‌ದಾರರೇ ಭರಿಸಬೇಕು. ಇದರಿಂದ ಕೋಚಿಮುಲ್‌ಗೆ ಯಾವುದೇ ಸಮಸ್ಯೆಯಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಸ್ವೀಡನ್‌ನಿಂದ ತರಿಸಿರುವ ಯುಎಚ್‍ಟಿ ಟೆಟ್ರಾ ಪ್ಯಾಕ್ ತಂತ್ರಜ್ಞಾನದ ಒಂದೊಂದು ಉಪಕರಣದ ಬೆಲೆ ಸುಮಾರು ₹ 15 ಕೋಟಿ. ಈ ಉಪಕರಣದ ನಿರ್ವಹಣೆಗೆ ಹೆಚ್ಚು ನೈಪುಣ್ಯತೆ ಇರುವ ಸಿಬ್ಬಂದಿ ಬೇಕು. ಆದರೆ, ಒಕ್ಕೂಟದಲ್ಲಿನ ಹುದ್ದೆಗಳ ಭರ್ತಿಗೆ ಸರ್ಕಾರ ಅನುಮತಿ ನೀಡಿಲ್ಲ. ಇದರಿಂದ ಅನಿವಾರ್ಯವಾಗಿ ಟೆಟ್ರಾ ಪ್ಯಾಕ್‌ಗೆ ಟೆಂಡರ್‌ ಮೂಲಕ ನೀಡಲಾಗಿದೆ’ ಎಂದು ಹೇಳಿದರು.

ಲಾಭದಲ್ಲಿದೆ: ‘ಒಕ್ಕೂಟ ಲಾಭದಲ್ಲಿದೆ, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ 14 ಹಾಲು ಒಕ್ಕೂಟಗಳು ಹಾಲು ಖರೀದಿ ದರ ಕಡಿಮೆ ಮಾಡಿದವು. ಆದರೆ, ಕೋಚಿಮುಲ್‌ ದರ ಇಳಿಕೆ ಮಾಡಲಿಲ್ಲ. ₹ 30 ಕೋಟಿ ನಷ್ಟದಲ್ಲಿದ್ದ ಒಕ್ಕೂಟ ಈಗ ನಷ್ಟ ತುಂಬಿಕೊಂಡು ಲಾಭದ ಹಾದಿಯಲ್ಲಿ ಸಾಗಿದೆ’ ಎಂದು ಕೋಚಿಮುಲ್‌ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಸಂತಸ ವ್ಯಕ್ತಪಡಿಸಿದರು.

‘ಹಾಲಿ ಒಕ್ಕೂಟದಲ್ಲಿನ ಯಂತ್ರೋಪರಣಗಳು ಸುಮಾರು 30 ವರ್ಷದಷ್ಟು ಹಳೆಯವು. ಈ ಯಂತ್ರೋಪಕರಣಗಳು ಯಾವುದೇ ಕ್ಷಣದಲ್ಲಿ ಸ್ಥಗಿತಗೊಂಡು ಸಮಸ್ಯೆಯಾಗುವ ಆತಂಕವಿದೆ. ಹೀಗಾಗಿ ಜಿಲ್ಲೆಯಲ್ಲಿ ಸುಸಜ್ಜಿತ ಮೆಗಾ ಡೇರಿ ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ಎಂ.ವಿ.ಕೃಷ್ಣಪ್ಪ ಮೆಗಾ ಡೇರಿ ಸ್ಥಾಪನೆಗೆ ಅಡ್ಡಗಾಲು ಹಾಕಿದೆ. ಇದರ ವಿರುದ್ಧ ಹೋರಾಟ ಮಾಡಿದ್ದೇವೆ’ ಎಂದರು.

ಕೋಚಿಮುಲ್‌ ನಿರ್ದೇಶಕರಾದ ವೈ.ಬಿ.ಅಶ್ವತ್ಥ ನಾರಾಯಣ, ಎನ್‌.ಸಿ.ವೆಂಕಟೇಶ್‌, ಎನ್‌.ಹನುಮೇಶ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು