ಶುಕ್ರವಾರ, ಜೂನ್ 5, 2020
27 °C
ಪ್ರಧಾನಿ ಮೋದಿ ಕರೆಗೆ ಸ್ಪಂದಿಸಿದ ಜಿಲ್ಲೆಯ ಜನ

ಹಣತೆ ಹಚ್ಚಿ ಹೋರಾಟಕ್ಕೆ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಸ್ಪಂದಿಸಿದ ಜಿಲ್ಲೆಯ ಜನರು ಭಾನುವಾರ ರಾತ್ರಿ 9 ಗಂಟೆಗೆ ಸರಿಯಾಗಿ ಮನೆಯಲ್ಲಿನ ವಿದ್ಯುತ್‌ ದೀಪಗಳನ್ನು ಆರಿಸಿ ಹಣತೆ ಹಚ್ಚಿ ಕೊರೊನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಕೆಲ ಮನೆಗಳಲ್ಲಿ ನಾಗರಿಕರು ದೀಪ, ಮೇಣದ ಬತ್ತಿ ಹಚ್ಚಿದರು. ಮತ್ತೆ ಕೆಲ ಮನೆಗಳಲ್ಲಿ ಬ್ಯಾಟರಿ, ಲಾಟೀನು, ಮೊಬೈಲ್‌ ಟಾರ್ಚ್‌ ಬೆಳಗಿಸಿದರು. ಹಲವು ಬಡಾವಣೆಗಳಲ್ಲಿ ಪಟಾಕಿ ಸಿಡಿಸಲಾಯಿತು. ಮನೆ ಮಂದಿಯೆಲ್ಲಾ ಬಾಲ್ಕನಿಯಲ್ಲಿ ನಿಂತು ದೀಪ ಬೆಳಗಿ ಕೊರೊನಾ ಸೋಂಕಿನಿಂದ ದೇಶಕ್ಕೆ ಮುಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಕೆಲ ಬಡಾವಣೆಗಳಲ್ಲಿ ಮಹಿಳೆಯರು ಸಂಜೆಯೇ ಮನೆಯ ಮುಂದಿನ ಅಂಗಳವನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿದರು. ರಸ್ತೆಗಳಲ್ಲಿ ರಂಗೋಲಿ, ಭಾರತದ ನಕಾಶೆ ಬಿಡಿಸಿ ಮಧ್ಯ ಭಾಗದಲ್ಲಿ ಹಣತೆಯಿಟ್ಟು ಗಮನ ಸೆಳೆದರು. ಅನೇಕರು ಮನೆಯಂಗಳ, ಬಾಲ್ಕನಿಯಲ್ಲಿ ದೀಪ ಬೆಳಗಿಸಿದರು.

ನಗರದ ಗಲ್‌ಪೇಟೆ ನಿವಾಸಿಗಳು ಚಾಮುಂಡೇಶ್ವರಿ ದೇವಾಲಯ ಮುಂಭಾಗದಲ್ಲಿ ದೊಡ್ಡ ರಂಗೋಲಿ ಬಿಡಿಸಿ ಮಧ್ಯೆ ದೀಪ ಹಚ್ಚಿದರು. ರಂಗೋಲಿಯ ಮಧ್ಯೆ ‘ಹಚ್ಚೇವು ಕನ್ನಡದ ದೀಪ ಆರೋಗ್ಯದ ದೀಪ ಕರುನಾಡ ದೀಪ’ ಎಂದು ಬರೆದು ಸರ್ವರಿಗೂ ಆರೋಗ್ಯ ಭಾಗ್ಯ ಕೋರಿದರು.

ರಂಗೋಲಿ ನಡುವೆ ‘ಎಲ್ಲರೂ ಒಳಗಿರೋಣ ಕೊರೊನಾ ಹೊರಗಿಡೋಣ’ ಎಂಬ ಸಂದೇಶ ಬರೆದು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಯಿತು. ಮಹಿಳೆಯರು ಗಲ್‌ಪೇಟೆ ಮುಖ್ಯ ರಸ್ತೆಯುದ್ದಕ್ಕೂ ರಂಗೋಲಿ ಬಿಡಿಸಿ ದೀಪಗಳನ್ನು ಹಚ್ಚಿ ಲೋಕ ಕಲ್ಯಾಣ ಬಯಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು