ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ ಹಣ್ಣಿನ ವಿಶೇಷ ಅಂಚೆ ಲಕೋಟೆ ಬಿಡುಗಡೆ

Last Updated 31 ಡಿಸೆಂಬರ್ 2022, 10:10 IST
ಅಕ್ಷರ ಗಾತ್ರ

ಕೋಲಾರ: ಅಂಚೆ ಇಲಾಖೆಯಿಂದ ಶನಿವಾರ ಇಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿ ಟೊಮೆಟೊ ಹಣ್ಣಿನ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲಾಯಿತು.

ಕೇಂದ್ರ ಸರ್ಕಾರದ 'ಒಂದು ಜಿಲ್ಲೆ ಒಂದು ಉತ್ಪನ್ನ'ದಡಿ‌‌ ಜಿಲ್ಲೆಯಿಂದ ಆಯ್ಕೆಯಾಗಿರುವ ಟೊಮೆಟೊ‌ ಹಣ್ಣಿನ ವಿಶೇಷ ಲಕೋಟೆಯನ್ನು ಕೋಲಾರ ರೋಟರಿ ಸೆಂಟ್ರಲ್ ಅಧ್ಯಕ್ಷ,‌ ಸಿಎಂಆರ್ ಟೊಮೆಟೊ‌ ಮಂಡಿ‌‌ ಮಾಲೀಕ ಸಿಎಂಆರ್ ಶ್ರೀನಾಥ್ ಪ್ರಾಯೋಜಕತ್ವದಲ್ಲಿ ಮುದ್ರಿಸಲಾಗಿದೆ.

ಲಕೋಟೆ ಮೇಲೆ ಟೊಮೆಟೊ ಹಣ್ಣಿನ ಚಿತ್ರ ಹಾಗೂ ಬೆಳೆಯ ಮಾಹಿತಿ ಇದೆ‌. ಇದರ ಮುಖಬೆಲೆ ₹ 15. ಸುಮಾರು ಎರಡು ಸಾವಿರ ವಿಶೇಷ ಅಂಚೆ ಲಕೋಟೆ ಮುದ್ರಿಸಲಾಗಿದೆ. ಮೈಸೂರು, ಬೆಂಗಳೂರು, ಧಾರವಾಡ ಹಾಗೂ ಮಂಗಳೂರು ಅಂಚೆ ಇಲಾಖೆಯ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತದೆ. ಅಲ್ಲದೇ, ಬೆಂಗಳೂರು, ಮುಂಬೈ, ನವದೆಹಲಿ‌ ಹಾಗೂ ವಿದೇಶಗಳಲ್ಲೂ ಪ್ರದರ್ಶಿಸಲಾಗುತ್ತದೆ. ಈ ಮೂಲಕ ಟೊಮೆಟೊ ಬೆಳೆಯನ್ನು ಪ್ರಚುರ ಪಡಿಸಿ ಬೆಳೆಗಾರರಿಗೆ ಪ್ರೋತ್ಸಾಹ ತುಂಬಲಾಗುತ್ತಿದೆ. ಬೆಂಗಳೂರು, ‌ಕೋಲಾರ ಹಾಗೂ ಚಿಕ್ಕಬಳ್ಳಾಪುರ ಪ್ರಧಾನ ಅಂಚೆ‌ ಕಚೇರಿಯಲ್ಲಿ ಮಾರಾಟಕ್ಕೆ ಲಭ್ಯ ಇವೆ.

ಟೊಮೆಟೊ ಉದ್ಯಮಿ ಸಿಎಂಆರ್ ಶ್ರೀನಾಥ್ ಮಾತನಾಡಿ, 'ಟೊಮೆಟೊ ಬೆಳೆ ಗುರುತಿಸಿ, ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಪರಿಚಯಿಸುತ್ತಿರುವುದು ಉತ್ತಮ ಬೆಳವಣಿಗೆ. ಇದರಿಂದ ಟೊಮೆಟೊ ಘನತೆ ಹೆಚ್ಚಿದೆ. ಟೊಮೆಟೊ‌ ಜಿಲ್ಲೆಯ ಜನರ ಬದುಕಿನ ಭಾಗವಾಗಿದೆ. ಹಾಗೆಯೇ, ಅಂಚೆ ಇಲಾಖೆ ಹಾಗೂ ಜನರ ನಡುವೆ ಭಾವಾನಾತ್ಮಕ ಸಂಬಂಧ ಇದೆ' ಎಂದರು.

'ಟೊಮೆಟೊ ಬೆಳೆ ಮಹತ್ವ ಗುರುತಿಸಿ ಅಂಚೆ ಲಕೋಟೆ ತಂದಿರುವುದು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಸಲ್ಲುವ ಗೌರವ' ಎಂದು ಹೇಳಿದರು.

'ಈ ಹಿಂದೆ ಆಲೂಗಡ್ಡೆ ಜಿಲ್ಲೆಯ ಪ್ರಮುಖ ಬೆಳೆ ಆಗಿತ್ತು. ಈಗ ಟೊಮೆಟೊ ಆ ಸ್ಥಾನ ಆವರಿಸಿಕೊಂಡಿದೆ‌. ಹೈಬ್ರೀಡ್ ಹಾಗೂ ನಾಟಿ ಟೊಮೆಟೊ ಬೆಳೆಯಲಾಗುತ್ತಿದೆ. ಜಿಲ್ಲೆಯು ಚಿನ್ನದ ಗಣಿ ಮಾತ್ರವಲ್ಲ; ಶತಶೃಂಗ ಪರ್ವತದಲ್ಲಿ ಔಷಧ ಸಸ್ಯಗಳು ಇವೆ. ರೇಷ್ಮೆ, ಕುಕ್ಕಟೋದ್ಯಮ, ಹೈನುಗಾರಿಕೆಗೂ ಪ್ರಸಿದ್ಧಿ ಪಡೆದಿವೆ. ಈ ಕ್ಷೇತ್ರಗಳನ್ನೂ ಮುಂದಿನ ದಿನಗಳಲ್ಲಿ ಗುರುತಿಸಿ ಪ್ರಚುರಪಡಿಸಬೇಕು' ಎಂದು ಮನವಿ ಮಾಡಿದರು.

'ಟೊಮೆಟೊ ಮಾರಾಟಕ್ಕೆ ಮಾತ್ರವಲ್ಲ; ಸಾಸ್, ಜಾಮ್, ತಂಪು ಪಾನೀಯದಂಥ ಉಪ ಉತ್ಪನ್ನ ತಯಾರಿಸಿ ಮಾರಾಟ‌ ಮಾಡಬಹುದು. ಹಲವು ಸಂಘ ಸಂಸ್ಥೆಗಳು ಹಾಗೂ ಸರ್ಕಾರ ಇದಕ್ಕೆ ಉತ್ತೇಜನ ನೀಡುತ್ತಿವೆ. ಆದರೆ, ಆ ಕೆಲಸ‌ ಜಿಲ್ಲೆಯಲ್ಲಿ ನಡೆಯುತ್ತಿಲ್ಲ. ಕೇಂದ್ರ ಸರ್ಕಾರ ಸಹಾಯಧನ ಕೊಡುತ್ತಿದೆ.‌ ಅದನ್ನು ಬಳಸಿಕೊಳ್ಳಬೇಕು. ರಾಜ್ಯ ಸರ್ಕಾರದಿಂದಲೂ ಆಂಧ್ರ ಪ್ರದೇಶ ಮಾದರಿಯಲ್ಲಿ ಸಹಾಯಧನ ಕೊಡಬೇಕು' ಎಂದು ಮನವಿ ಮಾಡಿದರು.

'ಕೋಲಾರದ ರೈತರ ಬೆಳೆಯುವ ಟೊಮೆಟೊ ಗುರುತಿಸಿ ಲಕೋಟೆ ಮೂಲಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರದರ್ಶನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಈ ಮೂಲಕ ಕೋಲಾರ ಜಿಲ್ಲೆಯು ರಾಷ್ಟ್ರ ಮಟ್ಟದಲ್ಲಿ ‌ಮಿಂಚಬೇಕು' ಎಂದು ಹೇಳಿದರು.

ದೆಹಲಿ, ಬಾಂಬೆ, ಬೆಂಗಳೂರಿನಲ್ಲಿ ಪ್ರದರ್ಶನ ಇಡಲಾಗುವುದು ಎಂದು ಕೋಲಾರ ವಿಭಾಗದ ಅಂಚೆ ಅಧೀಕ್ಷಕ ಆರ್. ಸುಭಾನಿ ತಿಳಿಸಿದರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರ, ಪೋಸ್ಟ್ ಮಾಸ್ಟರ್ ಭಾಗ್ಯಲಕ್ಷ್ಮಿ, ಒಂದು ಬೆಳೆ ಒಂದು ಉತ್ಪನ್ನ ಜಿಲ್ಲಾ ಸಮನ್ವಯಕ ಸೋಮಶೇಖರ್, ನಟರಾಜ್, ಅಂಚೆ ಇಲಾಖೆಯ ಬಿ.ವಿ.ಸತೀಶ್ ಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT