ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಬಾಗಿಲು: ಟೊಮೆಟೊ ಬೆಲೆ ಏರಿಕೆ, ಸಂತೃಪ್ತರಾಗದ ರೈತರು

Published 27 ಜೂನ್ 2023, 14:29 IST
Last Updated 27 ಜೂನ್ 2023, 14:29 IST
ಅಕ್ಷರ ಗಾತ್ರ

ಮುಳಬಾಗಿಲು: ಟೊಮೆಟೊ ಬೆಲೆ ಇತ್ತೀಚೆಗೆ ಗಗನಕ್ಕೆ ಏರುತ್ತಿದ್ದು ಟೊಮೆಟೊ ಬೆಳೆಗಾರರು ಒಂದು ಕಡೆ ಸಂತೋಷ ಪಟ್ಟರೂ ಮತ್ತೊಂದು ಕಡೆಗೆ ಅಸಂತೃಪ್ತರಾಗಿದ್ದಾರೆ.

ತಾಲ್ಲೂಕಿನ ಎನ್.ವಡ್ಡಹಳ್ಳಿ ಟೊಮೆಟೊ ಮಾರುಕಟ್ಟೆಯಲ್ಲಿ ಹದಿನೈದು ಕೆ.ಜಿಗಳ ಒಂದು ಬಾಕ್ಸ್ ಟೊಮೆಟೊ ₹1,000, ₹1,100ಕ್ಕೆ ಮಾರಾಟವಾಗುತ್ತಿದೆ. ಇದರಿಂದ ಟೊಮೆಟೊ ಬೆಳೆಗಾರರು ಖುಷಿಗೊಂಡಿದ್ದಾರೆ. ತಾಲ್ಲೂಕಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಟೊಮೆಟೊವನ್ನು ತಾಲ್ಲೂಕಿನ ಬಹುತೇಕ ರೈತರು ವರ್ಷಪೂರ್ತಿ ಬೆಳೆಯುತ್ತಾರೆ. ಆದರೆ ಈಚೆಗೆ ಸುಮಾರು ವರ್ಷಗಳಿಂದ ಟೊಮೆಟೊ ಬೆಳೆಗೆ ಸರಿಯಾದ ಬೆಲೆ ಇಲ್ಲದ ಕಾರಣದಿಂದ ಲಕ್ಷಾಂತರ ರೂಗಳ ನಷ್ಟ ಅನುಭವಿಸಿದ್ದರು.

ರಾಜ್ಯದಲ್ಲಿಯೇ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ಎನ್.ವಡ್ಡಹಳ್ಳಿ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಸುಮಾರು 50,000 ಬಾಕ್ಸ್‌ ಟೊಮೆಟೊ ಮಾರುಕಟ್ಟೆಗೆ ಬರುತ್ತಿತ್ತು. ಈಚೆಗೆ ಸುರಿದ ಮಳೆಯಿಂದಾಗಿ ಟೊಮೆಟೊ ಬೆಳೆ ಕೆಲವು ಸಂಪೂರ್ಣವಾಗಿ ನಾಶವಾದರೆ, ಮತ್ತೆ ಕೆಲವು ಬೆಳೆಗಳು ವೈರಸ್ ರೋಗಕ್ಕೆ ತುತ್ತಾಗಿ ಅಲ್ಪಸ್ವಲ್ಪ ಉಳಿದಿವೆ. ಹೀಗಾಗಿ ಈಗ ಮಾರುಕಟ್ಟೆಗೆ ಕೇವಲ 25,000ದಿಂದ 30,000 ಟೊಮೆಟೊ ಬಾಕ್ಸ್‌ಗಳು ಮಾತ್ರ ಮಾರುಕಟ್ಟೆಗೆ ಬರುತ್ತಿವೆ. ಬರುವ ಟೊಮೆಟೊಗೆ ಗುಣಮಟ್ಟ ಚೆನ್ನಾಗಿದ್ದರೆ ₹1000ದಿಂದ ₹1100ಕ್ಕೆ ಮಾರಾಟವಾದರೆ, ಕಡಿಮೆ ಗುಣಮಟ್ಟದ 15 ಕೆ.ಜಿಗಳ ಟೊಮೆಟೊ ಒಂದು ಬಾಕ್ಸ್ ₹500ರಿಂದ ₹600ಕ್ಕೆ ಮಾರಾಟವಾಗುತ್ತಿದೆ.

ಸುಮಾರು ಮೂರು ವರ್ಷಗಳಿಂದ ಟೊಮೆಟೊಗೆ ಸೂಕ್ತವಾದ ಬೆಲೆ ಇಲ್ಲದೆ ಎಷ್ಟೋ ಮಂದಿ ರೈತರು ಟೊಮೆಟೊ ನಾಟಿ ಮಾಡಿ ಬೆಳೆಗಳನ್ನು ಕಿತ್ತು ನಾಶಪಡಿಸಿದರೆ, ಮತ್ತೆ ಕೆಲವರು ನಾಟಿ ಮಾಡಿಯೂ ಹಣ್ಣುಗಳನ್ನು ತೋಟದಿಂದ ಕೀಳದೆ ಹಾಗೆಯೇ ಬಿಡುತ್ತಿದ್ದರು. ಒಂದು ಎಕರೆ ಟೊಮೆಟೊ ಬೆಳೆಯಲು ₹2 ರಿಂದ ₹2.5 ಲಕ್ಷ ನಷ್ಟವನ್ನು ಅನುಭವಿಸುತ್ತಿದ್ದರು.

ಈಚೆಗೆ ಕೆಲವು ದಿನಗಳಿಂದ ಮಳೆಯ ಅಬ್ಬರಕ್ಕೆ ಹಾಗೂ ವೈರಸ್ ರೋಗಕ್ಕೆ ಟೊಮೆಟೊ ಬಹುತೇಕ ಶೇ 50ರಷ್ಟು ನಾಶಗೊಂಡಿವೆ. ಟೊಮೆಟೊಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದ್ದು ಬೆಲೆಯೂ ತೀವ್ರಗತಿಯಲ್ಲಿ ಏರುತ್ತಿದೆ. ಟೊಮೆಟೊ ಅಲ್ಪಸ್ವಲ್ಪ ಇರುವವರು ಖುಷಿಪಟ್ಟರೆ, ಮಳೆ ಹಾಗೂ ವೈರಸ್ ರೋಗದಿಂದ ಟೊಮೆಟೊ ನಷ್ಟವಾದವರು ಬೆಲೆ ನೋಡಿ ಚಿಂತಿತರಾಗುತ್ತಿದ್ದಾರೆ.

ರಾಜ್ಯದ ಪ್ರಮುಖ ಟೊಮೆಟೊ ಮಾರುಕಟ್ಟೆಗಳಲ್ಲಿ ಒಂದಾದ ಎನ್.ವಡ್ಡಹಳ್ಳಿಗೆ ತಾಲ್ಲೂಕಿನ ಮೂಲೆ ಮೂಲೆಗಳಿಂದ ಟೊಮೆಟೊ ಬರುತ್ತಿದೆ. ಇಲ್ಲಿಂದ ಒಡಿಶಾ, ಕಲ್ಕತ್ತಾ, ಪಶ್ಚಿಮ ಬಂಗಾಳ ರಾಜ್ಯಗಳಿಗೆ ಸರಬರಾಜಾಗುತ್ತದೆ. ಇತರೆ ರಾಜ್ಯಗಳಿಂದ ವ್ಯಾಪಾರಿಗಳು ವಡ್ಡಹಳ್ಳಿ ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ ಎಂದು ಮಾರುಕಟ್ಟೆ ಮಾಲೀಕ ನಗವಾರ ಎನ್.ಆರ್.ಸತ್ಯಣ್ಣ ಹೇಳಿದರು.

ಇನ್ನೂ ಎರಡು ಮೂರು ತಿಂಗಳ ಕಾಲ ಟೊಮೆಟೊಗೆ ಬೆಲೆ ಇರುವ ವಿಶ್ವಾಸವಿದ್ದು ರೈತರು ಇರುವ ಬೆಳೆಗಳನ್ನು ಚೆನ್ನಾಗಿ ಕಾಪಾಡಿಕೊಂಡರೆ ಉತ್ತಮ ಲಾಭ ಪಡೆಯಬಹುದು ಎಂದು ಹೇಳಿದರು.

ಟೊಮೆಟೊವನ್ನು ನಮ್ಮ ಖಾಯಂ ಬೆಳೆಯಾಗಿ ಮಾಡಿಕೊಂಡಿದ್ದೇವೆ. ಸುಮಾರು ವರ್ಷಗಳಿಂದ ₹10 ಲಕ್ಷ ನಷ್ಟ ಆಗಿದೆ. ಆದರೆ ಹದಿನೈದು ದಿನಗಳಿಂದ ಟೊಮೆಟೊಗೆ ಭಾರೀ ಬೇಡಿಕೆ ಇರುವ ಕಾರಣದಿಂದ ಬೆಲೆ ಹೆಚ್ಚಾಗುತ್ತಿದೆ. ಈ ಬಾರಿ ಎರಡು ಎಕರೆ ಜಮೀನಿನಲ್ಲಿ ಹತ್ತರಿಂದ ಹದಿನೈದು ಲಕ್ಷ ಲಾಭ ಬರುವ ನಿರೀಕ್ಷೆ ಇದೆ ಎಂದು ರೈತ ಮೋಹನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT