ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ದಾಖಲೆ ಏರಿಕೆ ಕಂಡ ಟೊಮೆಟೊ ಬೆಲೆ

ರಫ್ತು ಗಣನೀಯವಾಗಿ ಹೆಚ್ಚಳ: ಜಿಲ್ಲೆಯ ಅನ್ನದಾತರ ಮೊಗದಲ್ಲಿ ಸಂತಸ
Last Updated 12 ಸೆಪ್ಟೆಂಬರ್ 2020, 14:48 IST
ಅಕ್ಷರ ಗಾತ್ರ

ಕೋಲಾರ: ಕೋವಿಡ್‌–19 ಕಾರಣಕ್ಕೆ ಲಾಕ್‌ಡೌನ್‌ ಜಾರಿಯಾದ ವೇಳೆ ಪಾತಾಳಕ್ಕೆ ಕುಸಿದಿದ್ದ ಟೊಮೆಟೊ ಬೆಲೆ ಶನಿವಾರ ದಾಖಲೆಯ ಏರಿಕೆ ಕಂಡಿದ್ದು, ಅನ್ನದಾತರ ಮೊಗದಲ್ಲಿ ಸಂತಸ ಮೂಡಿದೆ.

ಹೊರ ರಾಜ್ಯ ಹಾಗೂ ಜಿಲ್ಲೆಗಳಿಗೆ ಟೊಮೆಟೊ ರಫ್ತು ಪ್ರಮಾಣ ಗಣನೀಯವಾಗಿ ಹೆಚ್ಚಿದ್ದು, ದಿನದಿಂದ ದಿನಕ್ಕೆ ಟೊಮೆಟೊ ದರ ಗಗನಮುಖಿಯಾಗುತ್ತಾ ಸಾಗಿದೆ. ವಾರದ ಹಿಂದೆ ಸೆ.6ರಂದು ಟೊಮೆಟೊ ದರ ಕ್ವಿಂಟಾಲ್‌ಗೆ ಕನಿಷ್ಠ ₹ 667 ಮತ್ತು ಗರಿಷ್ಠ ₹ 4 ಸಾವಿರವಿತ್ತು. ಮಂಗಳವಾರದಿಂದ ದರ ಏರು ಗತಿಯಲ್ಲಿ ಸಾಗಿದ್ದು, ಶನಿವಾರ ಸಾರ್ವಕಾಲಿಕ ದಾಖಲೆ ದಾಖಲಿಸಿದೆ.

ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಟೊಮೆಟೊ ಬೆಳೆಯಲಾಗುತ್ತದೆ. ಸದ್ಯ ಜಿಲ್ಲೆಯ 16,328 ಹೆಕ್ಟೇರ್‌ ಭೂಪ್ರದೇಶದಲ್ಲಿ ಟೊಮೆಟೊ ಬೆಳೆ ಇದೆ. ಸಾಮಾನ್ಯವಾಗಿ ಜೂನ್‌ ತಿಂಗಳಿಂದ ಆಗಸ್ಟ್‌ ಅಂತ್ಯದವರೆಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬರುತ್ತದೆ. ವಾರ್ಷಿಕ ಸರಾಸರಿ 9.30 ಲಕ್ಷ ಮೆಟ್ರಿಕ್‌ ಟನ್‌ ಟೊಮೆಟೊ ಉತ್ಪಾದನೆಯಾಗುತ್ತದೆ.

ಜಿಲ್ಲೆಯಿಂದ ರಾಜಸ್ಥಾನ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್‌, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ರಾಜ್ಯಕ್ಕೆ ಪ್ರತಿನಿತ್ಯ ಟೊಮೆಟೊ ಪೂರೈಕೆಯಾಗುತ್ತದೆ. ಅಲ್ಲದೇ, ಬಾಂಗ್ಲಾದೇಶ, ಅಫ್ಘಾನಿಸ್ತಾನ ದೇಶಕ್ಕೂ ಟೊಮೆಟೊ ರಫ್ತಾಗುತ್ತದೆ.

ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಲಾಕ್‌ಡೌನ್‌ ಕಾರಣಕ್ಕೆ ಸರಕು ಸಾಗಣೆ ವಾಹನಗಳ ಸೇವೆಯಲ್ಲಿ ವ್ಯತ್ಯಯವಾಗಿದ್ದರಿಂದ ಕಾರಣ ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ಟೊಮೆಟೊ ರಫ್ತು ಸ್ಥಗಿತಗೊಂಡಿತ್ತು. ಮತ್ತೊಂದೆಡೆ ಹೊರ ರಾಜ್ಯಗಳ ವರ್ತಕರು ಕೋವಿಡ್‌ ಭೀತಿಯಿಂದಾಗಿ ಜಿಲ್ಲೆಯ ಮಾರುಕಟ್ಟೆಗಳತ್ತ ಮುಖ ಮಾಡಿರಲಿಲ್ಲ. ಹೀಗಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಟೊಮೆಟೊ ಕೇಳುವವರಿರಲಿಲ್ಲ.

ಟೊಮೆಟೊ ಬೆಳೆಗೆ ಖರ್ಚು ಮಾಡಿದ ಹಣ ಸಹ ಸಿಗದೆ ಸಾಕಷ್ಟು ರೈತರು ಜಮೀನಿನಲ್ಲೇ ಬೆಳೆ ನಾಶಪಡಿಸಿದ್ದರು. ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತರು ಮಾರುಕಟ್ಟೆಯಲ್ಲೇ ಕಸದ ರಾಶಿಗೆ ಟೊಮೆಟೊ ಸುರಿದು ಹೋಗುವುದು ಸಾಮಾನ್ಯವಾಗಿತ್ತು.

ಹೆಚ್ಚಿದ ಬೇಡಿಕೆ: ಹೊರ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿರುವ ಕಾರಣ ಟೊಮೆಟೊ ಬೆಳೆಗೆ ಹಾನಿಯಾಗಿದೆ. ಹೀಗಾಗಿ ಹೊರಗಡೆಯಿಂದ ಸ್ಥಳೀಯ ಮಾರುಕಟ್ಟೆಗೆ ಟೊಮೆಟೊ ಬರುತ್ತಿಲ್ಲ.

ಮತ್ತೊಂದೆಡೆ ಹೊರ ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಟೊಮೆಟೊಗೆ ಬೇಡಿಕೆ ಹೆಚ್ಚಿದ್ದು, ಅಲ್ಲಿನ ವರ್ತಕರು ಜಿಲ್ಲೆಯ ಮಾರುಕಟ್ಟೆಗಳಲ್ಲಿ ಟೊಮೆಟೊ ಖರೀದಿಸಿಕೊಂಡು ಹೋಗುತ್ತಿದ್ದಾರೆ. ಟೊಮೆಟೊಗೆ ಬೇಡಿಕೆ ಹೆಚ್ಚಿರುವುದರಿಂದ ಬೆಲೆ ಹೆಚ್ಚಳವಾಗಿದೆ.

ಆರು ಪಟ್ಟು ಹೆಚ್ಚು: ಮೇ ತಿಂಗಳಲ್ಲಿ ಸ್ಥಳೀಯ ಎಪಿಎಂಸಿಯಲ್ಲಿ ಟೊಮೆಟೊ ಸಗಟು ದರ ಕ್ವಿಂಟಾಲ್‌ಗೆ ಕನಿಷ್ಠ ₹ 300 ಮತ್ತು ಗರಿಷ್ಠ ₹ 767 ಇತ್ತು. ಶನಿವಾರ (ಸೆ.12) ಸಗಟು ದರ ಕ್ವಿಂಟಾಲ್‌ಗೆ ಕನಿಷ್ಠ ₹ 1,333 ಮತ್ತು ಗರಿಷ್ಠ ₹ 4,800ಕ್ಕೆ ತಲುಪಿದೆ. ಶನಿವಾರ 15,076 ಕ್ವಿಂಟಾಲ್‌ ಟೊಮೆಟೊ ಮಾರುಕಟ್ಟೆಗೆ ಬಂದಿದೆ.

ಆವಕ ಹೆಚ್ಚಿದ್ದರೂ ಬೆಲೆ ಮಾತ್ರ ಇಳಿಕೆಯಾಗುತ್ತಿಲ್ಲ. ಬೇಡಿಕೆಗೆ ತಕ್ಕಂತೆ ಸಗಟು ಮತ್ತು ಚಿಲ್ಲರೆ ಮಾರಾಟ ದರ ದಿನದಿಂದ ದಿನಕ್ಕೆ ಏರುತ್ತಿದೆ. ಜಿಲ್ಲೆಯಲ್ಲಿ ಜೂನ್‌ ತಿಂಗಳಲ್ಲಿ ಟೊಮೆಟೊ ಚಿಲ್ಲರೆ ಮಾರಾಟ ದರ ಕೆ.ಜಿಗೆ ₹ 10 ಇತ್ತು. ಈಗ ದರ ₹ 70ರ ಗಡಿ ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT