ಸೋಮವಾರ, ಜನವರಿ 24, 2022
18 °C
ಮಾರುಕಟ್ಟೆಯಲ್ಲಿ ತರಕಾರಿ–ಸೊಪ್ಪು ಆವಕ ಕಡಿಮೆ

ಮಳೆಗೆ ನೆಲಕಚ್ಚಿದ ಬೆಳೆಗಳು, ತರಕಾರಿ ದುಬಾರಿ: ಗ್ರಾಹಕರ ಜೇಬಿಗೆ ಕತ್ತರಿ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಲಾಕ್‌ಡೌನ್‌ ವೇಳೆ ಇಳಿಕೆ ಕಂಡಿದ್ದ ತರಕಾರಿ ಮತ್ತು ಸೊಪ್ಪುಗಳ ಬೆಲೆ ಗಗನಮುಖಿಯಾಗಿದ್ದು, ತರಾವರಿ ತರಕಾರಿ ಹಾಗೂ ಸೊಪ್ಪು ಹಾಕಿ ರುಚಿ ರುಚಿಯಾದ ಅಡುಗೆ ಮಾಡಬೇಕು ಎನ್ನುವವರೀಗ ದುಬಾರಿ ಬೆಲೆ ತೆರಬೇಕಾಗಿದೆ.

ಜಿಲ್ಲೆ ಸೇರಿದಂತೆ ಎಲ್ಲೆಡೆ ಹೆಚ್ಚಿನ ಮಳೆ ಆಗಿರುವುದರಿಂದ ತೋಟಗಾರಿಕೆ ಬೆಳೆಗಳು ನೆಲಕಚ್ಚಿದ್ದು, ದಿನದಿಂದ ದಿನಕ್ಕೆ ತರಕಾರಿ ಮತ್ತು ಸೊಪ್ಪಿನ ಬೆಲೆ ಏರು ಗತಿಯಲ್ಲಿ ಸಾಗಿದೆ. ಕೋವಿಡ್‌ ಸಂಕಷ್ಟದ ಜತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

ಮಾರುಕಟ್ಟೆಯಲ್ಲಿ ಯಾವುದೇ ತರಕಾರಿ ಬೆಲೆ ಒಂದಂಕಿ ಬೆಲೆಗೆ ಇಳಿದಿಲ್ಲ. ದಿನಬಳಕೆಯ ಟೊಮೆಟೊ, ಆಲೂಗಡ್ಡೆ, ಕ್ಯಾರೆಟ್, ತೊಂಡೆಕಾಯಿ, ಬೆಂಡೇ ಕಾಯಿ, ಬೀನ್ಸ್, ನುಗ್ಗೇಕಾಯಿ, ಹೂಕೋಸು, ಬದನೆಕಾಯಿ ಬೆಲೆ ಕೂಡ ಏರಿಕೆಯಾಗಿದೆ. ಮಾರುಕಟ್ಟೆಗಳಲ್ಲಿ ಬಹುತೇಕ ತರಕಾರಿಗಳ ದರ ದುಬಾರಿಯಾಗಿದೆ. ಗಗನಕ್ಕೇರಿದ ತರಕಾರಿ ಬೆಲೆ ನೋಡಿ ಗ್ರಾಹಕರು ದಂಗಾಗಿದ್ದಾರೆ.

ಕೆಲ ತಿಂಗಳ ಹಿಂದೆ ತರಕಾರಿ ಮತ್ತು ಸೊಪ್ಪಿನ ಬೆಲೆ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದ್ದರಿಂದ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದರು. ಆದರೆ, ರೈತರು ಬೆಲೆ ಕುಸಿತದಿಂದ ನಷ್ಟ ಅನುಭವಿಸಿದ್ದರು. ಇದೀಗ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಮತ್ತೊಂದೆಡೆ ಪೆಟ್ರೋಲ್‌, ಡೀಸೆಲ್‌ ಮತ್ತು ಅಡುಗೆ ಅನಿಲದ ಬೆಲೆ ಜನರ ಕೈ ಸುಡುತ್ತಿದೆ.

ಬೇಡಿಕೆ ಹೆಚ್ಚಳ: ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ತರಕಾರಿಗಳ ಬೆಲೆ ಏರಿಕೆ ಸಾಮಾನ್ಯ. ನವರಾತ್ರಿ ಬೆನ್ನಲ್ಲೇ ಮದುವೆ, ಗೃಹಪ್ರವೇಶ ಸೇರಿದಂತೆ ಶುಭ ಕಾರ್ಯಗಳು ಆರಂಭವಾಗಿದ್ದು, ಎಲ್ಲೆಡೆ ತರಕಾರಿಗಳಿಗೆ ಬೇಡಿಕೆ ಹೆಚ್ಚಿದೆ.

ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಲ್ಲಿ ವಿಪರೀತ ಮಳೆಯಿಂದಾಗಿ ತರಕಾರಿ ಬೆಳೆಗಳು ಹಾನಿಗೀಡಾಗಿವೆ. ಮಳೆ ಮತ್ತು ಮೋಡ ಮುಸುಕಿದ ವಾತಾವರಣದ ಕಾರಣಕ್ಕೆ ರೋಗಬಾಧೆ ಕಾಣಿಸಿಕೊಂಡಿದ್ದು, ತರಕಾರಿ ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ನಾಶವಾಗಿವೆ. ಹೊರ ರಾಜ್ಯಗಳಲ್ಲಿ ತರಕಾರಿಗಳಿಗೆ ಬೇಡಿಕೆ ದಿಢೀರ್‌ ಹೆಚ್ಚಳವಾಗಿದೆ. ಬೇಡಿಕೆ ತಕ್ಕಂತೆ ಬೆಲೆ ಏರಿಕೆಯಾಗಿದೆ.

ಕುಸಿದ ಫಸಲು: ಅಕ್ಟೋಬರ್‌ನಿಂದ ಜನವರಿವರೆಗೆ ನುಗ್ಗೆ ಮರಗಳಿಗೆ ಕಂಬಳಿ ಹುಳು ಬಾಧೆ ಸಾಮಾನ್ಯ. ಇದರಿಂದ ಇಳುವರಿ ಕಡಿಮೆಯಾಗುತ್ತದೆ. ಜಿಲ್ಲೆಯಲ್ಲಿ ನುಗ್ಗೆ ಮರಗಳಲ್ಲಿ ಕಂಬಳಿ ಹುಳು ಕಾಣಿಸಿಕೊಂಡಿದ್ದು, ಫಸಲು ಕುಸಿದಿದೆ. ಹೊರ ಜಿಲ್ಲೆಗಳಿಂದ ಸ್ಥಳೀಯ ಮಾರುಕಟ್ಟೆಗೆ ನುಗ್ಗೆ ಕಾಯಿ ಬರುತ್ತಿದ್ದು, ಬೆಲೆ ನಿರೀಕ್ಷೆಗೂ ಮೀರಿ ಏರಿಕೆಯಾಗಿದೆ.

ಎರಡು ತಿಂಗಳ ಹಿಂದೆ ಕೆ.ಜಿಗೆ ₹ 10 ಇದ್ದ ಟೊಮೆಟೊ ಬೆಲೆ ಈಗ ₹ 50ರ ಗಡಿ ದಾಟಿದೆ. ಮನೆ, ಹೋಟೆಲ್‌ ಹಾಗೂ ಶುಭ ಕಾರ್ಯಗಳಲ್ಲಿ ಅಡುಗೆಗೆ ಟೊಮೆಟೊ ಬಳಕೆ ಸರ್ವೇ ಸಾಮಾನ್ಯ. ಮಳೆಯಿಂದಾಗಿ ಜಿಲ್ಲೆಯಲ್ಲಿ ಟೊಮೆಟೊ ಬೆಳೆಗೆ ಹೆಚ್ಚಿನ ಹಾನಿಯಾಗಿದೆ. ಇದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಟೊಮೆಟೊ ಆವಕ ಕಡಿಮೆಯಾಗಿದೆ. ಹೊರ ರಾಜ್ಯ ಮತ್ತು ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿಯಿದೆ.

ಕೊಳೆತ ಸೊಪ್ಪು: ಜಮೀನುಗಳಲ್ಲಿ ಮಳೆ ನೀರು ನಿಂತು ಸೊಪ್ಪಿನ ಗಿಡಗಳು ಕೊಳೆತಿವೆ. ಇದರಿಂದ ಮಾರುಕಟ್ಟೆಯಲ್ಲಿ ಸೊಪ್ಪುಗಳು ಸಿಗುವುದೇ ಕಷ್ಟವಾಗಿದೆ. ಕೊತ್ತಂಬರಿ ಸೊಪ್ಪು ಒಂದು ಕಟ್ಟಿಗೆ ₹ 50, ದಂಟು ಮತ್ತು ಸಬ್ಬಕ್ಕಿ ₹ 30, ಮೆಂತೆ ಸೊಪ್ಪು ₹ 45 ಇದೆ.

ಬೆಲೆ ಏರಿಕೆ ಕಾರಣಕ್ಕೆ ಜಿಲ್ಲೆಯ ಕೆಲ ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ತರಕಾರಿ ಮಾರಾಟ ಸ್ಥಗಿತಗೊಳಿಸಲಾಗಿದೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರು ತರಕಾರಿ ಖರೀದಿ ಪ್ರಮಾಣ ಕಡಿಮೆ ಮಾಡಿದ್ದಾರೆ. ಶಾಖಾಹಾರಿಗಳು ಮೀನು, ಕೋಳಿ ಮತ್ತು ಕುರಿ ಮಾಂಸದತ್ತ ಮುಖ ಮಾಡಿದ್ದಾರೆ. ಮಾರುಕಟ್ಟೆಗಳಲ್ಲಿ ದಿನದಿಂದ ದಿನಕ್ಕೆ ತರಕಾರಿಗಳ ಆವಕ ಕಡಿಮೆಯಾಗುತ್ತಿದ್ದು, ಸದ್ಯಕ್ಕೆ ಬೆಲೆ ಇಳಿಯುವ ಲಕ್ಷಣ ಗೋಚರಿಸುತ್ತಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು