ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮುಕ್ತ ರಾಷ್ಟ್ರ ಮಾಡುತ್ತೇವೆ: ಮಾಜಿ ಸಂಸದ ಮುನಿಯಪ್ಪ ಹೇಳಿಕೆ

ಪತ್ರಿಕಾಗೋಷ್ಠಿ
Last Updated 30 ಜೂನ್ 2020, 14:47 IST
ಅಕ್ಷರ ಗಾತ್ರ

ಕೋಲಾರ: ‘ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರ ಪದಗ್ರಹಣ ಕಾರ್ಯಕ್ರಮವನ್ನು ಕೋವಿಡ್-–19 ಹಿನ್ನೆಲೆಯಲ್ಲಿ ಡಿಜಿಟಲ್‌ ತಂತ್ರಜ್ಞಾನ ಬಳಸಿಕೊಂಡು ಕೋಟ್ಯಂತರ ಮಂದಿ ವೀಕ್ಷಿಸಲು ಸಿದ್ಧತೆ ಮಾಡಲಾಗಿದೆ’ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ತಿಳಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡಂತೆ 30 ಜಿಲ್ಲೆಯಲ್ಲೂ ಪ್ರತಿಯೊಬ್ಬರು ಸಮಾರಂಭ ವೀಕ್ಷಿಸುವುದಕ್ಕೆ ಆದ್ಯತೆ ನೀಡಲಾಗಿದೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಸುರಕ್ಷತಾ ಮಾರ್ಗಸೂಚಿ ಪಾಲಿಸಬೇಕು’ ಎಂದರು.

‘ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬೇರು ಮಟ್ಟದಿಂದ ಪಕ್ಷ ಸಂಘಟಿಸಿ ಕಾಂಗ್ರೆಸ್‌ನ ಗತ ವೈಭವ ಮರುಕಳಿಸುವಂತೆ ಮಾಡುತ್ತೇವೆ. ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ. ಭಾರತವನ್ನು ಬಿಜೆಪಿ ಮುಕ್ತ ರಾಷ್ಟ್ರವಾಗಿ ಮಾಡುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ವಿಫಲ: ‘ಬಡ ಕೂಲಿ ಕಾರ್ಮಿಕರು, ರೈತರು ಹಾಗೂ ನಿರ್ಗತಿಕರಿಗೆ 3 ತಿಂಗಳಿಂದ ಸೂಕ್ತ ಪರಿಹಾರ ಒದಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸಿದ್ದರೂ ಅದರ ಲಾಭ ಸಂಪೂರ್ಣವಾಗಿ ಫಲಾನುಭವಿಗಳಿಗೆ ತಲುಪಿಲ್ಲ. ಈ ಪ್ಯಾಕೇಜ್‌ಗಳು ಬಡವರ ಮೂಗಿಗೆ ತುಪ್ಪ ಸವರಿದಂತಾಗಿವೆ’ ಎಂದು ಟೀಕಿಸಿದರು.

‘ದೇಶದ ಆರ್ಥಿಕತೆ ಪಾತಳಕ್ಕೆ ಕುಸಿದಿದೆ. ಜಿಡಿಪಿ ದರ ಸಹ ಕುಸಿದಿದ್ದು, ಬಹುತೇಕ ಕೈಗಾರಿಕೆಗಳು ನಷ್ಟದಿಂದ ಮುಚ್ಚುವ ಹಂತ ತಲುಪಿವೆ. ಬಡ ಜನರ ಬಗ್ಗೆ ಸರ್ಕಾರ ಕಾಳಜಿ ತೋರುತ್ತಿಲ್ಲ. ವಿಪಕ್ಷಗಳು ನೀಡಿದ ಬೆಂಬಲವನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸುಗ್ರೀವಾಜ್ಞೆ ಜಾರಿ ಮೂಲಕ ತುಘಲಕ್ ದರ್ಬಾರ್‌ ನಡೆಸುತ್ತಿದೆ’ ಎಂದು ಕಿಡಿಕಾರಿದರು.

7,831 ಕಡೆ ವೀಕ್ಷಣೆ: ‘ಪದಗ್ರಹಣ ಕಾರ್ಯಕ್ರಮವನ್ನು 7,831 ಕಡೆ ಸುಮಾರು 10 ಲಕ್ಷ ಮಂದಿ ವೀಕ್ಷಿಸಲು ಸಿದ್ಧತೆ ಮಾಡಲಾಗಿದೆ. ರಾಜ್ಯದಲ್ಲಿ ಪಕ್ಷದ 7 ಸಾವಿರ ಪದಾಧಿಕಾರಿಗಳು ಸಂಘಟನೆಯಲ್ಲಿ ತೊಡಗಿದ್ದು. ರಾಷ್ಟ್ರಗೀತೆಯೊಂದಿಗೆ ಉನ್ನತ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಕಾಂಗ್ರೆಸ್‌ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ವಿವರಿಸಿದರು.

‘ಜಿಲ್ಲೆಯಲ್ಲಿ 187 ಕಡೆ ಪದಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಆಯಾ ಕ್ಷೇತ್ರದ ಕಾಂಗ್ರೆಸ್‌ ಶಾಸಕರು ಇದರ ಜವಾಬ್ದಾರಿ ವಹಿಸಿದ್ದಾರೆ. ಜಿಲ್ಲೆಯಲ್ಲಿ ಪಕ್ಷದ 12 ಮಂದಿ ಮುಖಂಡರು ಇದರ ಮೇಲ್ವಿಚಾರಣೆ ನಡೆಸುತ್ತಾರೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾಹಿತಿ ನೀಡಿದರು.

ಕಾಂಗ್ರೆಸ್‌ ವಕ್ತಾರೆ ವಸಂತ ಕವಿತಾರೆಡ್ಡಿ, ಕಾಂಗ್ರೆಸ್‌ ಜಿಲ್ಲಾ ಘಟಕದ ಉಪಾಧ್ಯಕ್ಷ ಎಲ್.ಎ.ಮಂಜುನಾಥ್, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಪ್ರಸಾದ್‌ಬಾಬು, ಉದಯ್‌ಶಂಕರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT