ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರಿಂದ ದೆಹಲಿ ಮಾದರಿ ಹೋರಾಟ

ಬೆಮಲ್‌ ಖಾಸಗೀಕರಣದ ವಿರುದ್ಧ ಕಾರ್ಮಿಕರ ಪ್ರತಿಭಟನೆ ಜ. 21ಕ್ಕೆ ಮುಂದಿನ ಹೋರಾಟದ ರೂಪುರೇಷೆ ನಿರ್ಧಾರ
Last Updated 19 ಜನವರಿ 2021, 2:26 IST
ಅಕ್ಷರ ಗಾತ್ರ

ಕೆಜಿಎಫ್‌: ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಅಹಿಂಸಾತ್ಮಕ ಹೋರಾಟದ ಮಾದರಿಯಲ್ಲಿಯೇ ಬೆಮಲ್‌ ಕಾರ್ಮಿಕರು ಕೂಡ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.

ದೇಶದಲ್ಲಿ ಕೈಗಾರಿಕಾ ಕ್ರಾಂತಿಗೆ ನಾಂದಿ ಹಾಡಿದ ಬೆಮೆಲ್‌ ಕಾರ್ಖಾನೆಯ ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಬೆಮಲ್‌ ಕಾರ್ಮಿಕರು ಸೋಮವಾರ ಪ್ರತಿಭಟನೆ ನಡೆಸಿದರು.

‘ಸರ್ಕಾರಿ ಸ್ವಾಮ್ಯದ ಕಾರ್ಖಾನೆ ಬಿಟ್ಟು ಖಾಸಗಿಯವರ ಬಳಿ ಗುಲಾಮಗಿರಿ ಮಾಡಲು ಕಾರ್ಮಿಕರು ಸಿದ್ಧರಿಲ್ಲ. ಪ್ರಾಣವನ್ನಾದರೂ ನೀಡುತ್ತೇವೆ. ಆದರೆ ಖಾಸಗೀಕರಣಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಕಾರ್ಮಿಕರು ಗೇಟ್‌ಮೀಟಿಂಗ್‌ನಲ್ಲಿ
ಪ್ರತಿಜ್ಞೆಗೈದರು.

ದೇಶೀಯ ತಂತ್ರಜ್ಞಾನ ಬಳಸಿಕೊಂಡು ವಿಶ್ವದ ಗಮನ ಸೆಳೆದಿರುವ ಬೆಮಲ್‌ ಕಾರ್ಖಾನೆಯನ್ನುಕೇಂದ್ರ ಸರ್ಕಾರ ಖಾಸಗಿವರ ಕೈಗೆ ಒಪ್ಪಿಸಲು ಹುನ್ನಾರ ನಡೆಸಿದೆ ಎಂದುಬೆಮಲ್‌ ಕಾರ್ಮಿಕ ಸಂಘದ ಅಧ್ಯಕ್ಷ ಆಂಜನೇಯ ರೆಡ್ಡಿ ಆರೋಪಿಸಿದರು.

‘ದೆಹಲಿಯಲ್ಲಿ ರೈತರು ಉದ್ರೇಕಕ್ಕೆ ಒಳಗಾಗದೆ ಹೋರಾಟ ನಡೆಸುತ್ತಿದ್ದಾರೆ. ಅದೇ ಮಾದರಿಯಲ್ಲಿ ಕಾರ್ಮಿಕರು ಕೂಡ ಅನಿರ್ದಿಷ್ಟ ಹೋರಾಟಕ್ಕೆ ಅಣಿಯಾಗಬೇಕು. ನಾವು ಯಾರಿಗೂ ಭಯ ಪಡುವ ಅಗತ್ಯ ಇಲ್ಲ. ಜನವರಿ 21ರಂದು ಜಂಟಿ ಕ್ರಿಯಾ ಸಮಿತಿ ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ರೂಪರೇಷೆಗಳನ್ನು ತೀರ್ಮಾನಿಸಲಾಗುವುದು’ ಎಂದರು.

‘ಬೆಮಲ್‌ ತನ್ನ ಕಾರ್ಮಿಕರ ಸಂಬಳಕ್ಕಾಗಿ ₹800 ಕೋಟಿ ಖರ್ಚು ಮಾಡುತ್ತಿದೆ. ಅದರಲ್ಲಿ ಅರ್ಧ ಭಾಗ ಕೆಜಿಎಫ್‌ ಘಟಕಕ್ಕೆ ಸೇರುತ್ತದೆ. ಈ ಹಣವನ್ನು ಕಾರ್ಮಿಕರು ಸ್ಥಳೀಯವಾಗಿ ಖರ್ಚುಮಾಡುತ್ತಿದ್ದಾರೆ. ನಗರ ಕೂಡ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದೆ. 56 ವರ್ಷಗಳಿಂದ ಕಟ್ಟಿ ಬೆಳೆಸಿದ ಬೆಮಲ್‌ ಕಾರ್ಖಾನೆಯಲ್ಲಿ ನಮ್ಮ ಮುಂದಿನ ಸಂತತಿ ಕೂಡ ಕೆಲಸ ಮಾಡಬೇಕು. ಪ್ರಸ್ತುತ 50 ವರ್ಷ ದಾಟಿದವರು ಶೇ 50ರಷ್ಟು ಇದ್ದಾರೆ. ಅವರೆಲ್ಲರೂ ಸ್ವಯಂ ನಿವೃತ್ತಿ ಯೋಜನೆ ಬಯಸುತ್ತಿದ್ದಾರೆ. ಆದರೆ ಅದು ಲಾಭದಾಯಕವಲ್ಲ. ಆದ್ದರಿಂದ ಸುಳ್ಳು ವದಂತಿಗಳಿಗೆ ಕಿವಿ ಕೊಡಬಾರದು’ ಎಂದು ಮನವಿ ಮಾಡಿದರು.

‘ಬೆಮಲ್‌ ಕಂಪನಿಯಿಂದ 1,200 ಸಣ್ಣ ಪ್ರಮಾಣದ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲಿ ಕೂಡ ಸಾವಿರಾರು ನೌಕರರು ಕೆಲಸ ಮಾಡುತ್ತಿದ್ದಾರೆ. ಖಾಸಗೀಕರಣದ ಪೆಟ್ಟು ಈ ಕಂಪನಿಗಳ ಮೇಲೆ ಬಿದ್ದು, ಅಲ್ಲಿಯೂ ನಿರುದ್ಯೋಗ ಸೃಷ್ಟಿಯಾಗುತ್ತದೆ. ಖಾಸಗೀಯವರು ಸಾಮಾಜಿಕ ನ್ಯಾಯ ಕೊಡಲು ಸಾಧ್ಯವಿಲ್ಲ. ಕೂಡಲೇ ಕೇಂದ್ರ ಸರ್ಕಾರ ಪ್ರಕಟಿಸಿರುವ ಇಒಐ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಕಾರ್ಮಿಕರು ಶಕ್ತಿ ಪ್ರದರ್ಶನಕ್ಕೆ ಇಳಿಯಬೇಕಾಗುತ್ತದೆ’ ಎಂದು ಸಂಘದ ಉಪಾಧ್ಯಕ್ಷ ಓ.ರಾಮಚಂದ್ರ ರೆಡ್ಡಿ ಎಚ್ಚರಿಕೆ ನೀಡಿದರು.

ಬೆಮಲ್‌ನಲ್ಲಿರುವ 1,733 ಎಕರೆ ಜಮೀನನ್ನು ಕಬಳಿಕೆ ಮಾಡಲು ಖಾಸಗಿ ಕಂಪನಿಗಳು ಮಾಡುತ್ತಿರುವ ಹುನ್ನಾರಕ್ಕೆ ಕೇಂದ್ರ ಸರ್ಕಾರ ಮಣಿಯಬಾರದು ಎಂದು ಮುಖಂಡ ಸೋಮನಾಥ ಮರಡಿ ಹೇಳಿದರು.

ಕಾರ್ಮಿಕ ಮುಖಂಡರಾದ ಗಣೇಶ್‌ ಕುಮಾರ್‌, ಗೋಪಿ, ಆನಂದ್‌, ಗೋಪಾಲಕೃಷ್ಣ, ಲೋಕೇಶ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT