ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2021ಕ್ಕೆ ಯರಗೋಳ್‌ ಯೋಜನೆ ಲೋಕಾರ್ಪಣೆ: ಸಚಿವ ನಾಗೇಶ್

ಪತ್ರಕರ್ತರ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್‌ ಭರವಸೆ
Last Updated 1 ಜುಲೈ 2020, 16:04 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ಪ್ರಮುಖ ಕುಡಿಯುವ ನೀರಿನ ಯರಗೋಳ್‌ ಯೋಜನೆ 2021ರ ಜ.27ರಂದು ಲೋಕಾರ್ಪಣೆಯಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ತಿಳಿಸಿದರು.

ಇಲ್ಲಿ ಬುಧವಾರ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಸಾಧಕ ಪತ್ರಕರ್ತರಿಗೆ 2019-20ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ‘ಬಹು ನಿರೀಕ್ಷಿತ ಯರಗೋಳ್‌ ಕುಡಿಯುವ ನೀರಿನ ಯೋಜನೆಯ ಲೋಕಾರ್ಪಣೆ ದಿನಾಂಕವನ್ನು ಮುಖ್ಯಮಂತ್ರಿಗಳು ಈಗಾಗಲೇ ನಿಗದಿಪಡಿಸಿದ್ದಾರೆ’ ಎಂದು ಹೇಳಿದರು.

‘ಕೋವಿಡ್‌–19 ಸಂದರ್ಭದಲ್ಲಿ ವಾರಿಯರ್ಸ್ ರೀತಿ ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ವಿಮೆ ಸೌಲಭ್ಯ ನೀಡುವ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚಿಸುತ್ತೇನೆ. ಜಿಲ್ಲೆಯ ಪತ್ರಕರ್ತರಿಗೆ ನಿವೇಶನ ನೀಡಲು ಜಿಲ್ಲಾಡಳಿತ 10 ಎಕರೆ ಜಮೀನು ಗುರುತಿಸಬೇಕು. ಯರಗೋಳ್‌ ಯೋಜನೆ ಕಾರ್ಯಾರಂಭದ ದಿನವೇ ಪತ್ರಕರ್ತರಿಗೆ ನಿವೇಶನ ಕೊಡಲು ಕ್ರಮ ವಹಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಜಿಲ್ಲಾ ಕೇಂದ್ರದ ರಸ್ತೆಗಳಲ್ಲಿನ ಗುಂಡಿ ಮುಚ್ಚುವಂತೆ ತಿಳಿಸಿದರೆ ಜಿಲ್ಲಾಧಿಕಾರಿಯುವರು ಕೊರೊನಾ ಸೋಂಕಿನ ಕಾರ್ಯ ಒತ್ತಡ ಹೆಚ್ಚಿದೆ ಎನ್ನುತ್ತಾರೆ. ಜನರಿಗೆ ಗುಂಡಿಮಯ ರಸ್ತೆಯಲ್ಲಿ ಓಡಾಡಲು ಕಷ್ಟವಾಗುತ್ತಿದ್ದು, ಶೀಘ್ರವೇ ರಸ್ತೆಗಳನ್ನು ದುರಸ್ತಿ ಮಾಡಲಾಗುತ್ತದೆ’ ಎಂದರು.

‘ಮಾಧ್ಯಮದವರು ಮನಸ್ಸು ಮಾಡಿದರೆ ಯಾರನ್ನು ಬೇಕಾದರೂ ಖಳ ನಾಯಕರಾಗಿ ಹಾಗೂ ನಾಯಕರಾಗಿ ಮಾಡುತ್ತೀರಿ. ಆದರೆ, ಈ ರೀತಿ ಆಗಬಾರದು. ಪತ್ರಕರ್ತರು ಸತ್ಯಾಸತ್ಯತೆ ಅರಿತು ಸುದ್ದಿ ಮಾಡಬೇಕು’ ಎಂದು ಸಂಸದ ಎಸ್‌.ಮುನಿಸ್ವಾಮಿ ಕಿವಿಮಾತು ಹೇಳಿದರು.

ನೆರವಾಗಬೇಕು: ‘ಕೋವಿಡ್ ಸಂಕಷ್ಟದಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಸರ್ಕಾರ ನೆರವಾಗಬೇಕು. ಎಲ್ಲಾ ಕ್ಷೇತ್ರದವರಿಗೆ ವಿಶೇಷ ಪ್ಯಾಕೇಜ್‌ ಘೋಷಿಸದ ಸರ್ಕಾರಕ್ಕೆ ಪತ್ರಕರ್ತರು ಏಕೆ ಕಾಣಲಿಲ್ಲ?. ಪತ್ರಕರ್ತರ ಮಕ್ಕಳ ಶಿಕ್ಷಣ, ಪತ್ರಕರ್ತರ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲು ಸಿದ್ಧ’ ಎಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಘೋಷಿಸಿದರು.

‘ಈ ಹಿಂದೆ ಪತ್ರಕರ್ತರ ಸಲಹೆ ಕೇಳಲು ರಾಜಕಾರಣಿಗಳು ಹೋಗುತ್ತಿದ್ದರು. ಆದರೆ, ಇಂದು ಪತ್ರಕರ್ತರೇ ರಾಜಕಾರಣಿಗಳ ಹಿಂದೆ ಓಡಾಡುವಂತಾಗಿದೆ. ಪತ್ರಕರ್ತರ ಜತೆಗೆ ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ವಿಧಾನ ಪರಿಷತ್ ಸದಸ್ಯ ನಸೀರ್ ಅಹಮ್ಮದ್‌ ಅಭಿಪ್ರಾಯಪಟ್ಟರು.

ಎಚ್ಚರ ವಹಿಸಿ: ‘ಪತ್ರಕರ್ತರು ಕಾರ್ಯ ನಿರ್ವಹಣೆ ವೇಳೆ ಎಚ್ಚರ ವಹಿಸಬೇಕು. ಸುದ್ದಿಯ ಧಾವಂತದಲ್ಲಿ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬೇಡಿ. ಸಮಾಜಕ್ಕೆ ಅದ್ಭುತ ಜೀವಾಮೃತ ಒಣಬಡಿಸಿದ ಡಿವಿಜಿ ಅವರು ಪತ್ರಕರ್ತರ ಸಂಘದ ಮೊದಲ ಅಧ್ಯಕ್ಷರಾಗಿದ್ದರು. ಪತ್ರಕರ್ತರು ಅವರ ಹಾದಿಯಲ್ಲಿ ಸಾಗಬೇಕು’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಆಶಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಚಿನ್ನಸ್ವಾಮಿ, ಸಿಇಒ ಎಚ್.ವಿ.ದರ್ಶನ್, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಾಹ್ನವಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT