ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಂದಕ್ಕೆ ಟೈರಿಲ್ಲ, ಇನ್ನೊಂದಕ್ಕೆ ಎಂಜಿನ್ ದುರಸ್ತಿ: ಕುಂಟುತ್ತಾ ಸಾಗಿದ 108 ಸೇವೆ

Published 19 ಆಗಸ್ಟ್ 2023, 6:47 IST
Last Updated 19 ಆಗಸ್ಟ್ 2023, 6:47 IST
ಅಕ್ಷರ ಗಾತ್ರ

ಕುಷ್ಟಗಿ: ಜನರು ಅನಾರೋಗ್ಯಕ್ಕೆ ಒಳಗಾಗಿ ಆಪತ್ಕಾಲದಲ್ಲಿ ನೆರವಾಗಬೇಕಿದ್ದ 108 ಆಂಬುಲೆನ್ಸ್‌ ತುರ್ತು ಚಿಕಿತ್ಸಾ ವಾಹನ ಸೇವೆ ತಾಲ್ಲೂಕಿನಲ್ಲಿ ಅಸಮರ್ಪಕ ನಿರ್ವಹಣೆಯಿಂದ ಅಸ್ತವ್ಯಸ್ತಗೊಂಡಿದೆ.

ಪಟ್ಟಣದ ತಾಲ್ಲೂಕು ಆಸ್ಪತ್ರೆ ಮತ್ತು ತಾವರಗೇರಾ ಸಮುದಾಯ ಆರೋಗ್ಯ ಕೇಂದ್ರದ ಎರಡು ವಾಹನಗಳ ಸಂಚಾರ ಕಳೆದ ಎರಡು ವಾರಗಳಿಂದಲೂ ಸ್ಥಗಿತಗೊಂಡಿದ್ದು ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಪರದಾಡುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲ ತುರ್ತು ಸಂದರ್ಭದಲ್ಲಿ ಗರ್ಭಿಣಿಯರು, ಅಪಘಾತಕ್ಕೆ ಒಳಗಾದ ಗಾಯಾಳುಗಳಿಗೆ ಸಕಾಲದಲ್ಲಿ ಚಿಕಿತ್ಸೆ ಲಭ್ಯವಾಗದಿರುವುದರಿಂದ ತುರ್ತು ಸೇವೆ ಇಲ್ಲಿ ಹೆಸರಿಗೆ ಮಾತ್ರ ಎನ್ನುವಂತಾಗಿದೆ. ದುಬಾರಿ ಬಾಡಿಗೆ ಕೊಟ್ಟು ಖಾಸಗಿ ವಾಹನಗಳನ್ನು ಅವಲಂಬಿಸುವ ಅನಿವಾರ್ಯತೆ ಎದುರಾಗಿದೆ ಎಂದು ಪಟ್ಟಣದ ಅಮರೇಗೌಡ ಪಾಟೀಲ, ಬಸವರಾಜ ಇತರರು ಆರೋಪಿಸಿದರು.

ಆಗಿದ್ದೇನು: ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಯ ವಾಹನಗಳ ಎಂಜಿನ್‌ ಸುಸ್ಥಿತಿಯಲ್ಲಿದೆ ಆದರೆ ಅದಕ್ಕೆ ಟೈರ್‌ಗಳೇ ಇಲ್ಲ, ಹಾಗಾಗಿ ವಾಹನವನ್ನು ಎಷ್ಟೋ ದಿನಗಳಿಂದ ಆಸ್ಪತ್ರೆ ಆವರಣದ ಶೆಡ್‌ದಲ್ಲಿಯೇ ನಿಂತಿರುವುದು ಕಂಡುಬಂದಿದೆ. ಇನ್ನು ತಾವರಗೇರಾ ಆರೋಗ್ಯ ಕೇಂದ್ರದ ವಾಹನದ ಎಂಜಿನ್‌ ಬಹಳಷ್ಟು ದುರಸ್ತಿಯಲ್ಲಿದ್ದು ನಿಶ್ಚಲವಾಗಿದೆ. ತುರ್ತು ವಾಹನಗಳ ಸೇವೆಯ ಏಜೆನ್ಸಿ ಪಡೆದಿರುವ ಜಿವಿಕೆಎಂಆರ್ ಸಂಸ್ಥೆ ಗಮನಕ್ಕೆ ಸಮಸ್ಯೆ ಬಂದರೂ ವಾಹನಗಳನ್ನು ಸುಸ್ಥಿತಿಗೆ ತರುವುದಕ್ಕೆ ಪ್ರಯತ್ನಿಸಿಲ್ಲ ಎಂಬುದು ತಿಳಿದುಬಂದಿದೆ.

ತುರ್ತು ಅಗತ್ಯ: ಚತುಷ್ಪಥ ಹೆದ್ದಾರಿ ಸೇರಿದಂತೆ ಪ್ರಮುಖ ರಾಜ್ಯ ಹೆದ್ದಾರಿಗಳ ಸಂಪರ್ಕ ಹೊಂದಿರುವ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಪದೇಪದೇ ಅಪಘಾತಗಳು ಸಂಭವಿಸುವುದು ಸಾಮಾನ್ಯವಾಗಿದೆ. ಇಂಥ ಸಂದರ್ಭದಲ್ಲಿ ಸಮೀಪದ ಆಸ್ಪತ್ರೆ, ಹೆಚ್ಚಿನ ಚಿಕಿತ್ಸೆಗಳಿಗೆ ಜಿಲ್ಲಾ ಆಸ್ಪತ್ರೆಗೆ ಗಾಯಾಳು ಅಥವಾ ರೋಗಿಗಳನ್ನು ಕರೆದೊಯ್ಯಬೇಕಾದರೆ 108 ವಾಹನದ ಅಗತ್ಯವಿದೆ. ಆದರೆ ಅಂಥ ಸೇವೆ ಜನರ ಪಾಲಿಗೆ ಇಲ್ಲದಂತಾಗಿದೆ ಎಂದು ಜನರು ಬೇಸರ ವ್ಯಕ್ತಪಡಿಸಿದರು.

ಅಧಿಕಾರಿ ಹೇಳಿಕೆ: ಈ ಸಮಸ್ಯೆ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಆನಂದ ಗೋಟೂರು, ವಾಹನ ಸೇವೆ ಸ್ಥಗಿತಗೊಂಡಿರುವುದನ್ನು ಜಿವಿಕೆಎಂಆರ್ ಏಜೆನ್ಸಿಯವರ ಗಮನಕ್ಕೆ ತರಲಾಗಿದ್ದು ಶೀಘ್ರದಲ್ಲಿ ವಾಹನ ಸಂಚಾರ ಪುನರಾಭಿಸುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

ಈ ಕುರಿತು ಮಾಹಿತಿಗಾಗಿ 'ಪ್ರಜಾವಾಣಿ' ಹಲವು ಬಾರಿ ಸಂಪರ್ಕಿಸಿದರೂ ಹುಬ್ಬಳ್ಳಿ, ಕೊಪ್ಪಳ ಮತ್ತು ಹಾವೇರಿ ಜಿಲ್ಲೆಗಳ ಉಪ ವ್ಯವಸ್ಥಾಪಕ ಪ್ರಭಾಕರ ಕರೆ ಸ್ವೀಕರಿಸಲಿಲ್ಲ. ವ್ಯವಸ್ಥಾಪಕ ರಾಘವೇಂದ್ರ ಎಂಬುವವರು ತಾವು ವೈಯಕ್ತಿಕ ಕಾರಣಗಳಿಂದ ರಜೆಯಲ್ಲಿರುವುದಾಗಿ ತಿಳಿಸಿದರು.

ತುರ್ತು ಚಿಕಿತ್ಸಾ ವಾಹನಗಳು ಸದಾ ಸುಸ್ಥಿತಿಯಲ್ಲಿರುವುದು ಕಡ್ಡಾಯ. ಜನರ ಆರೋಗ್ಯ ಕಾಪಾಡುವ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು. ಅಗತ್ಯ ಕ್ರಮಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿಗೆ ಸೂಚಿಸುತ್ತೇನೆ
–ಶಿವರಾಜ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT