ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ಜಿಲ್ಲೆಯ ಹನುಮನಾಳದಲ್ಲಿ ಒಂದೇ ದಿನ 15 ಸೆಂ.ಮೀ ಮಳೆ!

ಮನೆಗಳಿಗೆ ನುಗ್ಗಿದ ನೀರು, ಜನರ ಪರದಾಟ
Published 4 ಸೆಪ್ಟೆಂಬರ್ 2023, 5:20 IST
Last Updated 4 ಸೆಪ್ಟೆಂಬರ್ 2023, 5:20 IST
ಅಕ್ಷರ ಗಾತ್ರ

ಕೊಪ್ಪಳ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗಿನ ಜಾವದ ತನಕ ಜೋರು ಮಳೆ ಸುರಿದಿದ್ದು ಕುಷ್ಟಗಿ ತಾಲ್ಲೂಕಿನ ಹನುಮನಾಳ ಗ್ರಾಮದಲ್ಲಿ ಮನೆಗೆಳಿಗೆ ನೀರು ನುಗ್ಗಿವೆ.

ರಾತ್ರಿಪೂರ್ತಿ ಮಳೆ ಸುರಿದ ಕಾರಣ ಜನ ನಿದ್ದೆಯಿಲ್ಲದಂತೆ ನೀರು ಹೊರಹಾಕಿದರು. ಹನುಮಸಾಗರದಲ್ಲಿಯೂ ಜೋರು ಮಳೆಯಾಗಿದೆ. ಹನುಮನಾಳ ಗ್ರಾಮದಲ್ಲಿ ಒಂದೇ ದಿನ 15 ಸೆಂ.ಮೀ. ಮಳೆಯಾಗಿದೆ. ಈ ಗ್ರಾಮದಲ್ಲಿ ಮಹಿಳೆಯರ ಸಣ್ಣ ಮಕ್ಕಳನ್ನು ಹೊತ್ತುಕೊಂಡು ಮನೆಗೆ ನುಗ್ಗಿದ ನೀರು ಹೊರಹಾಕುತ್ತಿದ್ದ ಚಿತ್ತಣ ಕಂಡುಬಂದಿತು.

ಜಿಲ್ಲೆಯ ಗುಳದಳ್ಳಿಯಲ್ಲಿ 1.8 (ಸೆಂ.ಮಿ.ಗಳಲ್ಲಿ), ಪ್ರಗತಿ ನಗರ 1.93, ಅಳವಂಡಿ 4.16, ಕಾರಟಗಿ 3.2, ಕುಷ್ಟಗಿ 3.82, ಕೊಪ್ಪಳ 3.38, ಗಂಗಾವತಿಯಲ್ಲಿ 2.5 ಸೆಂ.ಮೀ. ಮಳೆಯಾಗಿದೆ. ಗಂಗಾವತಿ ತಾಲ್ಲೂಕಿನ ವೆಂಕಟಗಿರಿಯಲ್ಲಿ 9.6 ಎಂ.ಎಂ. ಮಳೆ ಸುರಿದಿದೆ.

ರೈತರಿಗೆ ಖುಷಿ: ಬರ ಎದುರಾಗುವ ಆತಂಕದ ಕಾರ್ಮೋಡದಲ್ಲಿರುವ ಜಿಲ್ಲೆಯ ರೈತರಿಗೆ ಮೇಲಿಂದ ಮೇಲೆ ಸುರಿಯುತ್ತಿರುವ ಮಳೆ ಆಶಾದಾಯಕ ಎನಿಸಿದೆ.

ಮುಂಗಾರು ನಿಗದಿತ ಸಮಯಕ್ಕೆ ಬಾರದ ಕಾರಣ ಈ ಬಾರಿ ಮಳೆಯ ಕೊರತೆ ಎದುರಾಗಿತ್ತು. ಆಗಸ್ಟ್‌ನಲ್ಲಂತೂ ವಾಡಿಕೆಗಿಂತಲೂ ಕಡಿಮೆ ಮಳೆ ಬಂದಿದ್ದರಿಂದ ರೈತರಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಹಿಂದಿನ ಒಂದು ವಾರದ ಅವಧಿಯಲ್ಲಿ ಎರಡು ಬಾರಿ ಜೋರಾಗಿ ಸುರಿದ ಮಳೆ ರೈತರ ಆತಂಕವನ್ನು ದೂರ ಮಾಡಲು ಸಹಕಾರಿಯಾಗಲಿದೆ. ಬಹಳಷ್ಟು ರೈತರು ಈಗ ಮೆಕ್ಕೆಜೋಳದ ಫಸಲು ಎದುರು ನೋಡುತ್ತಿದ್ದಾರೆ.

ಪರದಾಟ: ಮಳೆ ರೈತರಲ್ಲಿ ಸಡಗರಕ್ಕೆ ಕಾರಣವಾದರೆ ನಗರದಲ್ಲಿನ ಅವ್ಯವಸ್ಥೆ ಪಾದಚಾರಿಗಳು ಹಾಗೂ ದ್ವಿಚಕ್ರವಾಹನಗಳ ಸವಾರರಿಗೆ ಸಮಸ್ಯೆಯಾಗಿ ಪರಿಣಮಿಸಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಎದುರಿನ ರಸ್ತೆ ಕತ್ತಲಮಯವಾಗಿತ್ತು. ಅಲ್ಲಿ ರಸ್ತೆ ನಿರ್ಮಾಣ ಹಂತದಲ್ಲಿದ್ದು, ಎರಡು ರಸ್ತೆಗಳ ನಡುವೆ ವಿಜಭಕ ಬಿಡಲಾಗಿದೆ. ವಿಭಜಕದ ಜಾಗದಲ್ಲಿ ದೊಡ್ಡದಾಗಿ ಖಾಲಿ ಜಾಗ ಬಿಡಲಾಗಿದ್ದು, ಅಲ್ಲಿ ಕಾರು ಸಿಲುಕಿಕೊಂಡಿತ್ತು.

ಒಂದೆಡೆ ಮಳೆ, ಇನ್ನೊಂದೆಡೆ ಕಾರ್ಗತ್ತಲು ನಡುವೆ ಸ್ಥಳದಲ್ಲಿದ್ದ ಕೆಲವರು ಕಾರು ವಿಭಜಕ ಜಾಗದ ಗುಂಡಿಯಿಂದ ಮೇಲೆತ್ತಲು ಪ್ರಯಾಸ ಪಟ್ಟರು. ಸೋರುತ್ತಿದ್ದ ರೈಲ್ವೆ ಕೆಳ ಸೇತುವೆಯಲ್ಲಿ ನೀರು ನಿಂತುಕೊಂಡಿತ್ತು. ರಸ್ತೆ ಬದಿಯ ವ್ಯಾಪಾರಿಗಳು, ಅಂಗಡಿ ಮತ್ತು ನಿತ್ಯದ ಕೆಲಸಗಳನ್ನು ಮುಗಿಸಿಕೊಂಡು ಹೋಗುವವರು ಮಳೆಗೆ ಸಿಲುಕಿ ಪರದಾಡಿದರು. ಜವಾಹರ ರಸ್ತೆ, ಲೇಬರ್‌ ಸರ್ಕಲ್‌, ಬಸ್ ನಿಲ್ದಾಣ, ಗಡಿಯಾರ ಕಂಬ ಹೀಗೆ ವಿವಿಧೆಡೆ ಜನ ಮಳೆಯಲ್ಲಿ ಸಿಲುಕಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT