ಕುಷ್ಟಗಿ (ಕೊಪ್ಪಳ ಜಿಲ್ಲೆ): ಪಟ್ಟಣದಲ್ಲಿ ಬುಧವಾರ ರಾತ್ರಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪಟಾಕಿ ಸಿಡಿದು ಮಾರುತಿ ನಗರದ ನಿವಾಸಿ ಕಲ್ಲೇಶ ಸುಲೇಕಿ (25) ಎಂಬ ಯುವಕ ತೀವ್ರವಾಗಿ ಗಾಯಗೊಂಡಿದ್ದಾನೆ.
ಪಟಾಕಿ ಹೊಡೆತಕ್ಕೆ ಒಂದು ಕಣ್ಣು ಸಂಪೂರ್ಣ ಛಿದ್ರವಾಗಿದ್ದು ತಲೆಯೊಳಗೆ ತೀವ್ರಗಾಯವಾಗಿ ರಕ್ತಸ್ರಾವವಾಗಿದೆ. ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಕಿತ್ಸೆ ನೀಡಲಾಗಿದೆ. ಆದರೆ ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದರಿಂದ ತುರ್ತು ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಗಣಪತಿ ವಿಸರ್ಜನೆ ವೇಳೆ ಮಾರುತಿ ವೃತ್ತದಲ್ಲಿ ಎರಡು ಮೆರವಣಿಗೆಗಳು ಸೇರಿವೆ. ಭಾರಿ ಪ್ರಮಾಣದ ಡಿಜೆ ಸದ್ದಿಗೆ ಯುವಕರು ಕುಣಿಯುತ್ತಿದ್ದಾಗ ದೊಡ್ಡ ಪ್ರಮಾಣದಲ್ಲಿ ಪಟಾಕಿ ಸಿಡಿಸಲಾಗುತ್ತಿತ್ತು. ಗೊಂದಲದಲ್ಲಿ ಪಟಾಕಿ ಯುವಕನ ತಲೆಗೆ ಬಡೆದಿದೆ. ಘಟನೆ ನಂತರ ಡಿಜೆ ಬಂದ್ ಮಾಡಿಸಿ ಮೆರವಣಿಗೆ ಕಳಿಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ನಿಷ್ಕ್ರಿಯ ಪೊಲೀಸರು: ಡಿಜೆ ಬಳಕೆಗೆ ಅವಕಾಶ ನಿರ್ಬಂಧಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊದಲೇ ಆದೇಶ ಹೊರಡಿಸಿದ್ದರಾದರೂ ಆದೇಶ ಕಾರ್ಯರೂಪಕ್ಕೆ ಬಂದಿಲ್ಲ. ಸಾರ್ವಜನಿಕರ ಆಕ್ಷೇಪದ ನಡುವೆಯೂ ರಾಜಕಾರಣಿಗಳ ಒತ್ತಡಕ್ಕೆ ಮಣಿದ ಪೊಲೀಸರು ಡಿಜೆಗೆ ಅವಕಾಶ ಕಲ್ಪಿಸಿರುವುದು ಈ ಅವಘಡಕ್ಕೆ ಕಾರಣವಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
‘ಭಾರಿ ಪ್ರಮಾಣದಲ್ಲಿನ ಡಿಜೆ ಸದ್ದಿಗೆ ಅನಾರೋಗ್ಯ ಪೀಡಿತರು, ವೃದ್ಧರು, ಬಾಣಂತಿಯರು, ಶಿಶುಗಳು ಬೆಚ್ಚಿಬಿದ್ದರು ಎಂದು ಸಾರ್ವಜನಿಕರಾದ ದೇವಪ್ಪ, ಬಸವರಾಜ ಮಠಪತಿ, ಚಿರಂಜೀವಿ ಆರೋಪಿಸಿದರು.
ಈ ಕುರಿತು ಮಂಗಳವಾರ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ್ದ ಸರ್ಕಲ್ ಇನ್‌ಸ್ಪೆಕ್ಟರ್ ಯಶವಂತ್, ನಿಯಮಗಳ ಪ್ರಕಾರ ಯಾವುದೇ ಧ್ವನಿವರ್ಧಕದ ಶಬ್ದ ನಿರ್ದಿಷ್ಟ ಪ್ರಮಾಣದಲ್ಲಿರುವುದು ಕಡ್ಡಾಯ. ಸೋಮವಾರ ಇಲ್ಲಿ ನಡೆದ ಗಣೇಶ ವಿಸರ್ಜನೆ ವೇಳೆ ಕೆಲ ಸಂಘಟನೆಯವರು ಡಿಜೆ ಬಳಸಿದ್ದರೂ ಕಡಿಮೆ ಧ್ವನಿ ಹೊರಸೂಸುವಂತೆ ಸಮಿತಿಯವರಿಗೆ ತಾಕೀತು ಮಾಡಲಾಗಿತ್ತು ಎಂದರು.
ಶಾಸಕರಿಗೂ ಒತ್ತಾಯ: ಪಟ್ಟಣದ ಹಾಗೂ ತಾಲ್ಲೂಕಿನ ಕೆಲ ಗ್ರಾಮಗಳ ಗಜಾನನ ಸಮಿತಿಯ ನೂರಾರು ಜನರು ಶಾಸಕ ದೊಡ್ಡನಗೌಡ ಪಾಟೀಲ ಅವರ ಮನೆಗೆ ಭೇಟಿ ನೀಡಿ ಡಿಜೆ ಧ್ವನಿವರ್ಧಕಕ್ಕೆ ಅನುಮತಿ ಕೊಡಿಸುವಂತೆ ಮನವಿ ಮಾಡಿದ್ದಾರೆ. ಜನರ ಒತ್ತಾಯಕ್ಕೆ ಮಣಿದ ಶಾಸಕ ಪಾಟೀಲ ಪೊಲೀಸ್ ವರಿಷ್ಠ ಡಾ.ರಾಮ್.ಎಲ್.ಅರಸಿದ್ದಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ತಾಲ್ಲೂಕಿನ ಜನ ಶಾಂತಿಪ್ರಿಯರಾಗಿದ್ದು ಕೋಮುಸೌಹಾರ್ದತೆ ಹೊಂದಿದ್ದಾರೆ, ಅಲ್ಲದೆ ಈ ಹಿಂದೆಯೂ ಯಾವುದೇ ಸಮಸ್ಯೆಯಾಗಿಲ್ಲ. ಹಾಗಾಗಿ ಡಿಜೆಗೆ ಅವಕಾಶ ನೀಡುವಂತೆ ಹೇಳಿದ್ದರು ಎಂದು ಗೊತ್ತಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ದೊಡ್ಡನಗೌಡ, ವರ್ಷಕೊಮ್ಮೆ ಯುವಕರು ಗಣೇಶೋತ್ಸವ ಆಚರಿಸುತ್ತಾರೆ, ಈ ಕುರಿತು ಎಸ್‌ಪಿ ಅವರನ್ನು ಸಂಪರ್ಕಿಸಲಾಗಿದ್ದು ಕಡಿಮೆ ಶಬ್ದ ಹೊರಸೂಸುವ ರೀತಿಯಲ್ಲಿ ಧ್ವನಿವರ್ಧಕಗಳನ್ನು ಬಳಸುವುದಕ್ಕೆ ಅನುಮತಿಸುವಂತೆ ತಿಳಿಸಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.