ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಕೇಂದ್ರೀಯ ವಿದ್ಯಾಲಯ; ಗುಣಮಟ್ಟ ಮರೀಚಿಕೆ?

Published 31 ಜುಲೈ 2023, 5:43 IST
Last Updated 31 ಜುಲೈ 2023, 5:43 IST
ಅಕ್ಷರ ಗಾತ್ರ

ಪ್ರಮೋದ

ಕೊಪ್ಪಳ: ಗುಣಮಟ್ಟದ ಶಿಕ್ಷಣಕ್ಕೆ ದೇಶದಾದ್ಯಂತ ಹೆಸರಾಗಿರುವ ಕೇಂದ್ರೀಯ ವಿದ್ಯಾಲಯವು ಇಲ್ಲಿ ಹಲವು ಕಾರಣಗಳಿಂದ ಸುದ್ದಿಯಾಗುತ್ತಿದೆ. ಗುಣಮಟ್ಟದ ಕಾಯಂ ಸಿಬ್ಬಂದಿ ಕೊರತೆಯಿಂದ ಶಾಲೆ ನಲುಗುತ್ತಿದ್ದು, ಗುತ್ತಿಗೆ ಆಧಾರದ ಮೇಲೆ ಪ್ರತಿವರ್ಷವೂ ನೇಮಕವಾಗುವ ಅತಿಥಿ ಶಿಕ್ಷಕರೇ ಇಲ್ಲಿನ ಕೇಂದ್ರೀಯ ವಿದ್ಯಾಲಯಕ್ಕೆ ಆಸರೆಯಾಗಿದ್ದಾರೆ.

ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ವಿದ್ಯಾಲಯದ ಕಟ್ಟಡ ಸುಂದರವಾಗಿದೆ. ವಿಶಾಲ ಮೈದಾನವೂ ಇದೆ. ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸಿಕೊಂಡು ಮೂರು ವರ್ಷಗಳೇ ಕಳೆದಿವೆ. ಉತ್ತಮ ಕಂಪ್ಯೂಟರ್‌ ಸವಲತ್ತುಗಳಿವೆ. ಆದರೆ, ಇವು ಸಮರ್ಪಕವಾಗಿ ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತಿಲ್ಲ ಎನ್ನುವ ದೂರುಗಳು ಕೇಳಿ ಬಂದಿವೆ.

ಕೊಪ್ಪಳದ ಕೇಂದ್ರೀಯ ವಿದ್ಯಾಲಯದಲ್ಲಿ 1ರಿಂದ 10ನೇ ತರಗತಿ ತನಕ 425 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದೇ ವರ್ಷ ಯುಕೆಜಿ (ಬಾಲವಾಟಿಕ–3) ಆರಂಭವಾಗಿದ್ದು, ಅಲ್ಲಿಯೂ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಮುಂಬರುವ ವರ್ಷಗಳಲ್ಲಿ ಇನ್ನಷ್ಟು ತರಗತಿಗಳು ಆರಂಭವಾಗಲಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ.

ಆದರೆ, ಈ ಶಾಲೆಯ ಪ್ರಾಚಾರ್ಯರು ವಾರದಲ್ಲಿ ಎರಡ್ಮೂರು ದಿನ ರಜೆಯಲ್ಲಿಯೇ ಇರುತ್ತಾರೆ. ಹೀಗಾಗಿ  ಪೋಷಕರ ಕೈಗೆ ಸರಿಯಾಗಿ ಸಿಗುವುದಿಲ್ಲ. ಶಾಲೆ ಸಂಪೂರ್ಣವಾಗಿ ಕೆಲವರ ಹಿಡಿತದಲ್ಲಿದೆ. ವೇಳಾಪಟ್ಟಿಯ ಪ್ರಕಾರ ತರಗತಿಗಳು ನಡೆಯುವುದಿಲ್ಲ. ಬಹಳಷ್ಟು ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ಶಿಕ್ಷಣವೇ ಲಭಿಸುತ್ತಿಲ್ಲ. ಹಲವು ವಿಷಯಗಳ ಶಿಕ್ಷಕರ ಕೊರತೆಯೂ ಇದೆ. ವಿಜ್ಞಾನದ ಪ್ರಯೋಗಗಳು ಪರಿಣಾಮಕಾರಿಯಾಗಿ ಆಗುತ್ತಿಲ್ಲ ಎಂದು ಕೇಂದ್ರೀಯ ವಿದ್ಯಾಲಯದಲ್ಲಿ ಓದುವ ಮಕ್ಕಳ ಪೋಷಕರು ಆರೋಪಿಸಿದ್ದಾರೆ. ಅವರು ಹೆಸರು ಹೇಳಲು ನಿರಾಕರಿಸಿದ್ದಾರೆ.

ಕೊಪ್ಪಳದ ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯರ ಜೊತೆ ಈಗಾಗಲೇ ಮಾತನಾಡಿದ್ದೇನೆ. ಇನ್ನೊಂದು ಸಲ ಕರೆದು ಮಾತನಾಡುವೆ. ಏನೇ ಸಮಸ್ಯೆಗಳಿದ್ದರೂ ಪರಿಹರಿಸುವೆ.
ಎಂ. ಸುಂದರೇಶ ಬಾಬು, ಜಿಲ್ಲಾಧಿಕಾರಿ ಶಾಲೆಯ ಅಧ್ಯಕ್ಷ

‘ನಾನೊಬ್ಬ ಸರ್ಕಾರಿ ನೌಕರಿ. ನನ್ನ ಮಗನಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎನ್ನುವ ಕಾರಣಕ್ಕಾಗಿ ಬಹಳಷ್ಟು ಕಷ್ಟಪಟ್ಟು ಕೇಂದ್ರಿಯ ವಿದ್ಯಾಲಯದಲ್ಲಿ ಪ್ರವೇಶ ಕೊಡಿಸಿದ್ದೇನೆ. ಸ್ಪರ್ಧಾತ್ಮಕ ಜಗತ್ತಿನ ಸವಾಲಿಗೆ ತಕ್ಕಂತೆ ಗುಣಮಟ್ಟದ ಶಿಕ್ಷಣ ಲಭಿಸುತ್ತಿಲ್ಲ.  ಬಹುತೇಕ ಸಂದರ್ಭಗಳಲ್ಲಿ ಪ್ರತಿ ವರ್ಷವೂ ಶಿಕ್ಷಕರು ಬದಲಾವಣೆ ಆಗುತ್ತಿರುವುದು ಕೂಡ ಮಕ್ಕಳ ಓದಿನ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ಪೋಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಮಾನ್ಯ ಶಾಲೆಗಳಿಗಿಂತ ಕೇಂದ್ರೀಯ ವಿದ್ಯಾಲಯದ ಬಗ್ಗೆ ಪೋಷಕರಿಗೂ ಬಹಳಷ್ಟು ನಿರೀಕ್ಷೆಗಳಿವೆ. ಬೇರೆ ಶಾಲೆಗಳಿಗಿಂತಲೂ ಉತ್ಕೃಷ್ಟ ಶೈಕ್ಷಣಿಕ ನಿಯಮಾವಳಿ ಇರಬೇಕೆನ್ನುವ ಆಸೆಯೂ ಇರುತ್ತದೆ. ಶಾಲೆಯ ವಿದ್ಯಾರ್ಥಿಗಳ ಡೈರಿ ನಿರ್ವಹಣೆ ಮಾಡಬೇಕು ಎಂದು ಅವರು ಹೇಳಿದರು.

ಬೇಕಿದೆ ಸಿಬ್ಬಂದಿ

ಬೋಧಕ ಹಾಗೂ ಶಾಲೆ ನಿರ್ವಹಣೆ ಸೇರಿ ಒಟ್ಟು 26 ಸಿಬ್ಬಂದಿಯಿದ್ದು ಇದರಲ್ಲಿ ಎಂಟು ಜನ ಮಾತ್ರ ಕಾಯಂ ಇದ್ದಾರೆ.

ಕಳೆದ ವರ್ಷದ ಎಸ್ಸೆಸ್ಸೆಲ್ಸಿಯಲ್ಲಿ ಇಲ್ಲಿನ ಶಾಲೆ ಶೇ 99ರಷ್ಟು ಫಲಿತಾಂಶ ಪಡೆದಿದೆ. ಬೇರೆ ಜಿಲ್ಲೆಗಳಲ್ಲಿರುವಂತೆ ಇಲ್ಲಿನ ಕೇಂದ್ರಿಯ ವಿದ್ಯಾಲಯದ ಗುಣಮಟ್ಟ ಹೆಚ್ಚಾಗಲು ಕೇಂದ್ರ ಸರ್ಕಾರ ಕೂಡ ಕಾಯಂ ಶಿಕ್ಷಕರನ್ನು ಇಲ್ಲಿಗೆ ವರ್ಗಾವಣೆ ಮಾಡಿ ಕಡ್ಡಾಯವಾಗಿ ಇಂತಿಷ್ಟು ವರ್ಷ ಸೇವೆ ಸಲ್ಲಿಸಬೇಕು ಎನ್ನುವ ನಿಯಮ ಮಾಡಬೇಕಾದ ಅಗತ್ಯವೂ ಇದೆ.

ಸಮಸ್ಯೆಯಿದ್ದರೆ ನೇರವಾಗಿ ನನಗೇ ಹೇಳಲಿ

ಕೇಂದ್ರೀಯ ವಿದ್ಯಾಲಯದಲ್ಲಿ ಎಲ್ಲ ಸರಿಯಾಗಿಯೇ ನಡೆಯುತ್ತಿದೆ. ಏನಾದರೂ ಸಮಸ್ಯೆ ಕಂಡು ಬಂದರೆ ಪೋಷಕರು ನೇರವಾಗಿ ನನ್ನ ಗಮನಕ್ಕೆ ತರಲಿ. ಸಿಬ್ಬಂದಿ ಕೊರತೆ ಎಲ್ಲ ಕಡೆಯೂ ಇದೆ ಎಂದು ವಿದ್ಯಾಲಯದ ಪ್ರಾಚಾರ್ಯ ಸಿದ್ಧಾರೂಢ ಮೇತ್ರೆ ಹೇಳಿದರು. ‘ವಿದ್ಯಾಲಯದ ನಿಯಮದ ಪ್ರಕಾರ ಪ್ರತಿವರ್ಷವೂ ಅರ್ಜಿ ಆಹ್ವಾನಿಸಿಯೇ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮವಾಗಿ ಕಂಪ್ಯೂಟರ್‌ ಶಿಕ್ಷಣ ಸಿಗುತ್ತಿದೆ. ನಿಯಮಿತವಾಗಿ ಪೋಷಕರ ಸಭೆ ನಡೆಸುತ್ತಿದ್ದು ಎಸ್ಸೆಸ್ಸೆಲ್ಸಿ ಮಕ್ಕಳ ಪೋಷಕರಿಗೆ ಜೂನ್‌ 30ರಂದು ಕೊನೆಯ ಬಾರಿ ಸಭೆ ಕರೆದಿದ್ದವು. 40 ಜನರಿಗೆ ಆಹ್ವಾನ ನೀಡಿದರೆ 8ರಿಂದ 10 ಜನ ಪೋಷಕರು ಮಾತ್ರ ಬಂದಿದ್ದರು’ ಎಂದು ತಿಳಿಸಿದರು.

ಕೆಲ ಪೋಷಕರ ಸಭೆ

ವಿದ್ಯಾಲಯದಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ಹಲವು ಪೋಷಕರು ವ್ಯಾಟ್ಸ್‌ ಆ್ಯಪ್‌ ಗ್ರೂಪ್‌ ರಚಿಸಿಕೊಂಡಿದ್ದಾರೆ. ಕೊಪ್ಪಳದಿಂದ ಶಾಲೆಗೆ ಹೋಗುವ ಮಕ್ಕಳು ರಾಷ್ಟ್ರೀಯ ಹೆದ್ದಾರಿ ದಾಟಿಕೊಂಡು ಹೋಗಬೇಕಾಗಿದೆ. ಮಕ್ಕಳ ಸುರಕ್ಷತೆಗೆ ಆದ್ಯತೆ ಕೊಡುವ ಜೊತೆಗೆ ವಿದ್ಯಾಲಯದಲ್ಲಿ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಬೇಕಾಗಿದೆ ಎನ್ನುವುದರ ಬಗ್ಗೆಯೂ ಅಲ್ಲಿ ಚರ್ಚೆಯಾಗಿದೆ. ‘ಪೋಷಕರ ಸಭೆ ಕರೆದಿದ್ದು ನಮಗೆ ಗೊತ್ತೇ ಇಲ್ಲ. ಮುಂದಿನ ದಿನಗಳಲ್ಲಿ ಈ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಪೋಷಕರ ಸಭೆಗೆ ಕರೆದಿದ್ದರೆ ಬಗ್ಗೆ ದಾಖಲೆ ನಿರ್ವಹಣೆ ಮಾಡಲಿ. ಸಭೆಗೆ ಬಂದ ಪೋಷಕರ ಸಹಿ ಮಾಡಿಸಿಕೊಳ್ಳಲಿ. ಆಗಲಾದರೂ ಇಲ್ಲಿನ ವ್ಯವಸ್ಥೆ ಬದಲಾಗಬಹುದು’ ಎಂದು ಹೆಸರು ಹೇಳಲು ಬಯಸದ ಪೋಷಕರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT