ಕೊಪ್ಪಳ/ಕುಷ್ಟಗಿ: ‘ಜಿಲ್ಲೆಯಲ್ಲಿ ಮುಂಗಾರು ಮಳೆ ಈ ಬಾರಿ ಜೂಜಾಟದಂತಾಗಿದೆ, ಹಸಿ ಬರ ಎನ್ನಬೇಕೊ, ಒಣ ಬರವೊ ಒಂದೂ ಅರ್ಥವಾಗುತ್ತಿಲ್ಲ. ಒಟ್ಟಾರೆ ನಮ್ಮ ಪಾಲಿಗೆ ಈ ವರ್ಷದ ಬೆಳೆ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ’
ಜಿಲ್ಲೆಯ ರೈತರು ಅತ್ಯಂತ ಬೇಸರಿಂದ ಹೇಳುತ್ತಿರುವ ಮಾತುಗಳು ಇವು. ಈ ಸಲದ ಮುಂಗಾರು ಹಂಗಾಮಿನ ಆರಂಭದಲ್ಲಿ ಮಳೆ ಕೈಕೊಟ್ಟರೂ ಕೆಲ ತಾಲ್ಲೂಕುಗಳ ಒಂದಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಮಕ್ಕೆಜೋಳ, ಸಜ್ಜೆ ಬೆಳೆಗಳು ತೆನೆಯೊಡೆಯುವ ಮಟ್ಟಕ್ಕೆ ಬೆಳೆದು ನಳನಳಿಸುತ್ತಿದ್ದವು. ಆದರೆ ಸದ್ಯ ನೋಡಿದರೆ ಮೆಕ್ಕೆಜೋಳ ದಂಟಿನಲ್ಲಿಯ ಜುಟ್ಟು ಮೇಲೆ ಬಂದಿಲ್ಲ, ತೆನೆಯೊಡೆದ ಸಜ್ಜೆ ಕಾಳು ಕಟ್ಟಲಿಲ್ಲ. ಎರಡು ವಾರಗಳ ಹಿಂದಷ್ಟೇ ಹಸಿರಾಗಿದ್ದ ಹೊಲಗಳಲ್ಲಿನ ಬೆಳೆಗಳು ತೆವಾಂಶ ಕೊರತೆಯಿಂದ ಬತ್ತಿದ್ದು ರೈತರನ್ನು ಮತ್ತೆ ಕೊರಗುವಂತೆ ಮಾಡಿವೆ.
ಮುಂಗಾರು ವಿಳಂಬದಿಂದಾಗಿ ಜಿಲ್ಲೆಯ ರೈತರಲ್ಲಿ ಆರಂಭದಲ್ಲಿ ಬರದ ಆತಂಕ ಮನೆ ಮಾಡಿತ್ತು. ಕ್ರಮೇಣವಾಗಿ ಸುರಿದ ಮಳೆ ಅನ್ನದಾತನ ಮೊಗದಲ್ಲಿನ ಚಿಂತೆಯ ಗೆರೆಗಳನ್ನು ದೂರ ಮಾಡಿದ್ದವು. ಈಗ ಮಳೆ ಕಣ್ಣಾಮುಚ್ಚಾಲೆಯಾಡುತ್ತಿದೆ. ಅಗತ್ಯವಿದ್ದಾಗ ಬಾರದೆ, ಬೆಳೆ ಕಟಾವಿನ ಸಮಯದಲ್ಲಿ ಮಳೆ ಬರುತ್ತಿದೆ. ತೇವಾಂಶದ ಕೊರತೆಯಿಂದಾಗಿ ಯಲಬುರ್ಗಾ ತಾಲ್ಲೂಕಿನ ಕರಮುಡಿ, ಮುಧೋಳ, ಹಿರೇಮ್ಯಾಗೇರಿ, ಕುಕನೂರು ತಾಲ್ಲೂಕು ಹಾಗೂ ಅಳವಂಡಿ ಭಾಗದಲ್ಲಿ ಬೆಳೆಗೆ ಬಿಳಿ ರೋಗ ಹಾಗೂ ಲದ್ದಿ ರೋಗ ಕಾಣಿಸಿಕೊಂಡಿದೆ.
ಜಿಲ್ಲೆಯಲ್ಲಿ ಒಟ್ಟು 3.08 ಲಕ್ಷ ಹೆಕ್ಟೇರ್ ಭೂಮಿ ಬಿತ್ತನೆ ಪ್ರದೇಶವಿದ್ದು, 2.83 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದ್ದು, ಶೇ. 92ರಷ್ಟು ಬಿತ್ತನೆಯಾಗಿದೆ. ಮೊದಲ ಬೆಳೆಗೆ ತುಂಗಭದ್ರಾ ಜಲಾಶಯದಿಂದ ನೀರು ಹರಿಸಿರುವ ಕಾರಣ ರಾಜ್ಯದ ಭತ್ತದ ಕಣಜ ಎನಿಸಿರುವ ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ಭಾಗದ ರೈತರಿಗೆ ಭತ್ತ ಬಿತ್ತನೆಗೆ ತೊಂದರೆಯಿಲ್ಲ. ಜಿಲ್ಲೆಯಲ್ಲಿ ಒಟ್ಟು 61,233 ಹೆಕ್ಟೇರ್ ಭತ್ತ ಬಿತ್ತನೆ ಪ್ರದೇಶವಿದ್ದು, 50,364 ಹೆಕ್ಟೇರ್ ಬಿತ್ತನೆಯಾಗಿದೆ. ಈ ಬಾರಿ ಮೆಕ್ಕೆಜೋಳ, ತೊಗರಿ, ಅಲಸಂದಿ, ಮಡಿಕೆ ಹಾಗೂ ಹತ್ತಿ ಕೃಷಿ ಇಲಾಖೆಯ ಗುರಿಗಿಂತಲೂ ಹೆಚ್ಚಿನ ಸಾಧನೆ ಮಾಡಲಾಗಿದೆ.
ಮಳೆಯ ಆಟ: ಕುಷ್ಟಗಿ ತಾಲ್ಲೂಕಿನಲ್ಲಿ ಶೇಕಡ 25ರಷ್ಟು ಮಾತ್ರ ಪ್ರಾರಂಭದಲ್ಲಿ ಬಿತ್ತನೆಯಾಗಿತ್ತು. ಉಳಿದ ಪ್ರದೇಶದಲ್ಲಿ ನಂತರ ಬಿತ್ತನೆಗೆ ಸಾಕಾಗುವಷ್ಟು ಮಳೆಯಾಗಿ ಎಲ್ಲ ರೈತರೂ ಸಜ್ಜೆ, ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ಹೀಗೆ ವಿವಿಧ ಬೆಳೆಗಳನ್ನು ಬೆಳೆದಿದ್ದರು. ಆದರೆ ನಂತರ ಸುಮಾರು ಎರಡು ವಾರಗಳವರೆಗೆ ನಿರಂತರ ಜಿನುಗುಮಳೆಯಿಂದ ಬೆಳೆಗಳು ನೆಲಬಿಟ್ಟು ಮೇಲೇಳದೆ ಹಳದಿ ಬಣ್ಣಕ್ಕೆ ತಿರುಗಿದ್ದವು. ನಂತರ ಚೇತರಿಸಿಕೊಂಡಿವೆ. ಆದರೆ ಮೂರು ವಾರವಾದರೂ ಮಳೆಯ ಸುಳಿವಿಲ್ಲ. ಇನ್ನೂಂದು ವಾರ ಕಳೆದರೆ ತಡವಾಗಿ ಬಿತ್ತನೆಯಾಗಿರುವ ಬೆಳೆಗಳಿಂದ ಫಸಲು ನಿರೀಕ್ಷಿಸುವುದೇ ತಪ್ಪಾಗುತ್ತದೆಯೇ ಎಂಬ ಕೊರಗು ರೈತರದ್ದು.
ಯಲಬುರ್ಗಾ, ಕುಷ್ಟಗಿ, ಕೊಪ್ಪಳ, ಕನಕಗಿರಿ ತಾಲ್ಲೂಕುಗಳಲ್ಲಿ ಕೆಲ ಪ್ರದೇಶಗಳಲ್ಲಿ ಪ್ರಾರಂಭದಲ್ಲಿ ರೈತರು, ಏಕದಳ ಹೆಸರು, ಅಲಸಂದೆ ದ್ವಿದಳ ಬೆಳೆ ಬಿತ್ತಿ ಕೈಸುಟ್ಟುಕೊಂಡಿದ್ದರು. ನಂತರ ಗೆಜ್ಜೆಶೇಂಗಾ, ಹಬ್ಬುಶೇಂಗಾ, ಸೂರ್ಯಕಾಂತಿ ಬಿತ್ತಿ ಅಲ್ಪಸ್ವಲ್ಪ ಮಳೆ ಬಂದಿದ್ದರಿಂದ ಖುಷಿಯಾಗಿದ್ದರು. ಆದರೆ ಎರಡು ವಾರ ಕಳೆದರೂ ಮಳೆಯ ಸುಳಿವಿಲ್ಲ. ಮುಂದೆ ಮಳೆಯಾದರೂ ಬೆಳೆಗಳಿಗೆ ಅನುಕೂಲವಾಗುವುದಿಲ್ಲ ಎಂದು ರೈತರು ತಿಳಿಸಿದರು. ಮಸಾರಿ ಜಮೀನಿನ ರೈತರ ಪಾಲಿಗೆ ಈಗ ಹುರುಳಿ ಬಿತ್ತನೆಗೆ ಮಾತ್ರ ಅವಕಾಶವಿದೆ. ಮುಂದೆಯಾದರೂ ಮಳೆಯಾದರೆ ಹಿಂಗಾರು ಬೆಳೆಗಳನ್ನಾದರೂ ಬೆಳೆಯಬಹುದು ಎನ್ನುವ ನಿರೀಕ್ಷೆ ಕಪ್ಪು ಜಮೀನು ಹೊಂದಿರುವ ರೈತರದ್ದಾಗಿದೆ.
ಮೇವಿನ ಸಂಗ್ರಹ ಖಾಲಿ: ಒಣ ಮತ್ತು ಹಸಿ ಬರ ಇವು ಈ ವರ್ಷದ ಮುಂಗಾರಿನ ಪರಿಸ್ಥಿತಿ ಇದರ ದುಷ್ಪರಿಣಾಮ ಜಾನುವಾರುಗಳ ಮೇಲೆ ಆಗಲಿದೆ. ದನಕರುಗಳಿಗೆ ಮೇವಿನ ಸಮಸ್ಯೆ ಉದ್ಭವಿಸಲಿದೆ ಎಂಬ ಆತಂಕ ಈಗಲೇ ರೈತರನ್ನು ಕಾಡುತ್ತಿದೆ. ಈವರೆಗೆ ಇದ್ದ ಹೊಟ್ಟು ಮೇವಿನ ಸಂಗ್ರಹವೆಲ್ಲ ಖಾಲಿಯಾಗಿದೆ. ನಾವು ಹೇಗಾದರೂ ಬದುಕುತ್ತೇವೆ, ಸರ್ಕಾರ ಅಕ್ಕಿ, ಗೋಧಿ ಕೊಟ್ಟಾದರೂ ಸಲಹುತ್ತದೆ. ಆದರೆ ಆದರೆ ಜಾನುವಾರುಗಳ ಹೊಟ್ಟೆಗೆ ಏನು ಮಾಡಬೇಕೆಂಬುದು ತಿಳಿಯುತ್ತಿಲ್ಲ. ದನಕರುಗಳನ್ನು ಉಳಿಸಿಕೊಳ್ಳುವುದು ಕಷ್ಟದ ಕೆಲಸವಾಗುತ್ತದೆ ಎನ್ನುತ್ತಿದ್ದಾರೆ ರೈತರು.
ಆರಂಭದಲ್ಲಿ ಬಿತ್ತಿದ ಬೆಳೆಗಳು ಬಾಡಿ ಹೋಗಿವೆ ನಂತರದ ಬಿತ್ತಿದರೆ ಜಡಿ ಮಳೆಗೆ ಸಿಕ್ಕು ನಲುಗಿಹೋದವು. ಭವಿಷ್ಯದ ಸ್ಥಿತಿ ನೆನಪಿಸಿಕೊಂಡರೆ ಭಯವಾಗುತ್ತಿದೆ.ಶರಣಪ್ಪ ಹೊಸೂರು ರೈತ ಯಲಬುರ್ಗಾ
ಜಿಲ್ಲೆಯಲ್ಲಿ ಬಿತ್ತನೆಯಾದ ವಿವರ ಬೆಳೆ;ಗುರಿ;ಸಾಧನೆ ಭತ್ತ;61233;50364 ಶಕ್ತಿಮಾನ್ ಜೋಳ;2010;565 ಮೆಕ್ಕೆಜೋಳ;99957;115315 ಸಜ್ಜೆ;64372;56148 ನವಣೆ;5001;1246 ತೊಗರಿ;18711;19905 ಹುರಳಿ;3586;1000 ಹೆಸರು;15411;7297 ಅಲಸಂದಿ;195;937 ಅವರೆ;122;00 ಮಡಿಕೆ;61;70 ಶೇಂಗಾ;10652;8635 ಸೂರ್ಯಕಾಂತಿ;8831;6485 ಎಳ್ಳು;4637;739 ಗುರೆಳ್ಳು;40;20 ಔಡಲು;228;181 ಹತ್ತಿ;11686;13120 ಕಬ್ಬು;1267;1260 ಬಿತ್ತನೆ ತಾಲ್ಲೂಕುವಾರು ಮಾಹಿತಿ ತಾಲ್ಲೂಕು;ಬಿತ್ತನೆ;ಗುರಿ;ಶೇಕಡ ಕೊಪ್ಪಳ;62570;60841;97 ಕುಷ್ಟಗಿ;79040;74860;95 ಯಲಬುರ್ಗಾ;54374;51331;94 ಕುಕನೂರು;25932;24541;95 ಗಂಗಾವತಿ;24589;19882;81 ಕಾರಟಗಿ;31010;23740;77 ಕನಕಗಿರಿ;30485;28092;92
‘ವಿಜ್ಞಾನಗಳ ತಂಡದಿಂದ ಪರಿಶೀಲನೆ’ ಕೊಪ್ಪಳ: ಬೆಳೆಗಳಿಗೆ ರೋಗ ಕಾಣಿಸಿಕೊಂಡ ಕುರಿತು ಮಾಹಿತಿಯಿದೆ. ಇದರ ಪರಿಶೀಲನೆಗೆ ತಂಡವನ್ನು ರಚಿಸಲಾಗಿದ್ದು ವಿಜ್ಞಾನಿಗಳೂ ಕ್ಷೇತ್ರಕ್ಕೆ ಹೋಗಿ ಪರಿಶೀಲನೆ ಮಾಡುತ್ತಿದ್ದಾರೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ತಿಳಿಸಿದರು. ‘ಸಕಾಲದಲ್ಲಿ ಮಳೆಯಾಗದ ಕಾರಣ ರೈತರಿಗೆ ತೊಂದರೆಯಾಗಿದೆ. ಬರಗಾಲ ಘೋಷಣೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇದನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಬಿಳಿರೋಗದ ಹಾವಳಿಯಿದ್ದು ಆರಂಭದಲ್ಲಿಯೇ ಎಚ್ಚರ ವಹಿಸಿದರೆ ನಿಯಂತ್ರಣ ಸಾಧ್ಯವಿದೆ. ಇದರ ಬಗ್ಗೆ ರೈತರೊಂದಿಗೆ ಸಂಪರ್ಕದಲ್ಲಿದ್ದು ಅಗತ್ಯ ಸಲಹೆ ನೀಡಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.