ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾವತಿ: ಗುಡ್ಡಗಾಡಲ್ಲಿ ಬೀಜದುಂಡೆ ಹಾಕುತ್ತಿರುವ ಸಮಾನ ಮನಸ್ಕರ ತಂಡ

ಪರಿಸರ ಬೆಳಸಲು ಮುಂದಾದ ಲೀವ್ ವಿಥ್ ಹ್ಯುಮಾನಿಟಿ ಟ್ರಸ್ಟ್, ಕಿಷ್ಕಿಂದ ಯುವ ಚಾರಣ ಬಳಗ
ಎನ್‌.ವಿಜಯ್‌
Published 28 ಮೇ 2024, 5:38 IST
Last Updated 28 ಮೇ 2024, 5:38 IST
ಅಕ್ಷರ ಗಾತ್ರ

ಗಂಗಾವತಿ: ಐತಿಹಾಸಿಕ ಸ್ಮಾರಕ ಮತ್ತು ಪರಿಸರ ರಕ್ಷಣೆ, ಶಾಸನಗಳ ಪತ್ತೆ, ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ, ಅರಣ್ಯ ಪ್ರದೇಶದಲ್ಲಿನ ಪ್ರಾಣಿ ಸಂಕುಲಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಹಲವು ಸಮಾಜಮುಖಿ ಕಾರ್ಯಗಳಿಗೆ ಹೆಸರಾದ ಲೀವ್ ವಿಥ್ ಹ್ಯುಮಾನಿಟಿ ಟ್ರಸ್ಟ್, ಕಿಷ್ಕಿಂದ ಯುವ ಚಾರಣ ಬಳಗವು ಮಳೆಗಾಲದ ನಿಮಿತ್ತ ಮಲ್ಲಾಪುರ ಬಳಿಯ ವಾಣಿಭದ್ರಶ್ವೇರ ದೇವಸ್ಥಾನದ ಗುಡ್ಡಗಾಡು ಪ್ರದೇಶದಲ್ಲಿ ಸೀಡ್ ಬಾಲ್ (ಬೀಜದ ಉಂಡೆ) ಅಭಿಯಾನ ಆರಂಭಿಸಿದೆ.

ಲೀವ್ ವಿಥ್ ಹ್ಯುಮಾನಿಟಿ ಟ್ರಸ್ಟ್, ಕಿಷ್ಕಿಂದ ಯುವ ಚಾರಣ ಬಳಗದ ಸಮಾನ ಮನಸ್ಕರು ಸೇರಿಕೊಂಡು ಈಗಾಗಲೇ ಅಂಜನಾದ್ರಿ ಬೆಟ್ಟ(2 ಬಾರಿ), ಪಂಪಾಸರೋವರ ಸ್ವಚ್ಛತೆ, ಆನೆಗೊಂದಿ ಭಾಗದಲ್ಲಿ ಸಸಿ ನೆಟ್ಟಿರುವುದು, ಮತದಾನ ಜಾಗೃತಿ ಕಾರ್ಯ, ಬೇಸಿಗೆ ಸಮಯದಲ್ಲಿ ನಗರ ಭಾಗದ ಬಿಡಾಡಿ ದನಗಳಿಗೆ ನೀರಿನ ತೊಟ್ಟಿ ಅಳವಡಿಕೆ ಸೇರಿ ಹಲವು ಸಮಾಜಮುಖಿ ಕಾರ್ಯಗಳು ಮಾಡಿ ಮಾದರಿಯಾಗಿದ್ದಾರೆ‌.

ಇದೀಗ ಮಳೆಗಾಲ ಆರಂಭವಾಗಲಿದ್ದು, 10ಕ್ಕೂ ಹೆಚ್ಚು ಜನರನ್ನು ಒಳಗೊಂಡ ತಂಡ ಇದೇ ಭಾನುವಾರ 2 ಸಾವಿರ ಬೀಜದ ಉಂಡೆಗಳನ್ನು ವಾಣಿಭದ್ರಶ್ವೇರ ದೇವಸ್ಥಾನ ಸಮೀಪದ ಗುಡ್ಡಗಾಡು ಪ್ರದೇಶದಲ್ಲಿ ಮಳೆಗೆ ಹದಗೊಂಡ ಭೂಮಿಯಲ್ಲಿ ಹಾರಿ, ಕಬ್ಬಿಣದ ರಾಡ್‌ಗಳಿಂದ ಚಿಕ್ಕ ಚಿಕ್ಕ ಗುಂಡಿಗಳನ್ನು ತೋಡಿ ಹಾಕಿ ಮುಚ್ಚಿದೆ. ಈ ಮೂಲಕ ಪರಿಸರ ಬೆಳವಣಿಗೆಗೆ ಶ್ರಮಿಸುತ್ತಿದೆ.

ಯಾವ ಬೀಜಗಳು?: ಪ್ರಸಕ್ತ ಸಾಲಿನಲ್ಲಿ ಬಿಸಿಲಿನ ತಾಪಮಾನ ಹೆಚ್ಚಳವಾಗಿ, ನೆರಳು ಮತ್ತು ನೀರಿಗಾಗಿ ಜನರು, ಪ್ರಾಣಿ ಸಂಕುಲ ತತ್ತರಿಸಿ ಹೋಗಿದ್ದು, ಪ್ರಕೃತಿ ವೈಪರೀತ್ಯ ತಡೆಯಲು ಈ ಸೀಡ್‌ಬಾಲ್ ಅಭಿಯಾನ ಆರಂಭಿಸಲಾಗಿದೆ. ಇದರ ಭಾಗವಾಗಿ ಗುಡ್ಡಗಾಡು ಪ್ರದೇಶದಲ್ಲಿ ಹುಣಸೆ, ಸಿರಿಸ್, ಪೀಕಾಕ್ ಫ್ಲವರ್ (ಗುಲ್ ಮೋಹರ್), ಮಲ್ನಾಡ್ ಹುಣಸೆ, ಹೊಂಗೆ, ಬೇವಿನ ತಳಿಯ 2 ಸಾವಿರ ಬೀಜದ ಉಂಡೆಗಳನ್ನು ಹಾಕಲಾಗಿದೆ.

ದಟ್ಟಕಾಡು ನಿರ್ಮಾಣ ಗುರಿ: ಹಲವು ಸಮಾಜ‌ಮುಖಿ ಕಾರ್ಯಗಳಿಗೆ ಹೆಸರಾದ ಲೀವ್ ವಿಥ್ ಹ್ಯುಮಾನಿಟಿ ಟ್ರಸ್ಟ್ ಮತ್ತು ಕಿಷ್ಕಿಂದ ಯುವ ಚಾರಣ ಬಳಗ ತಾಲ್ಲೂಕಿನ 2 ಎಕರೆ ಪ್ರದೇಶದಲ್ಲಿ ಮಿಯಾವಾಕಿ ಮಾದರಿಯಲ್ಲಿ ದಟ್ಟಕಾಡು ನಿರ್ಮಿಸುವ ಮಹತ್ತರ ಗುರಿ ಹೊಂದಿದೆ. ಜತೆಗೆ ಸರ್ಕಾರಿ ಶಾಲೆ– ಕಾಲೇಜುಗಳ ಮೈದಾನದಲ್ಲಿ ಸಸಿಗಳನ್ನು ನೆಟ್ಟು, ಅವುಗಳ ನಿರ್ವಹಣೆ ಮುಖ್ಯಶಿಕ್ಷಕರಿಗೆ, ಪ್ರಾಚಾರ್ಯರಿಗೆ ಒದಗಿಸುತ್ತಿದೆ.

ಐತಿಹಾಸಿಕ ಸ್ಮಾರಕಗಳ ರಕ್ಷಣೆ, ಪರಿಸರ ಉಳಿವಿಗೆ ಶ್ರಮಿಸುತ್ತಿರುವ ಎರಡು ತಂಡಗಳ ಸದಸ್ಯರು ಪ್ರತಿ ಭಾನುವಾರ ಗಂಗಾವತಿ ತಾಲ್ಲೂಕಿನ ಐತಿಹಾಸಿಕ ತಾಣಗಳಿಗೆ ಚಾರಣ ಬೆಳೆಸಿ ತಾಣಗಳ ಪರಿಚಯಿಸುವ ಜತೆಗೆ ಸೀಡ್‌ಬಾಲ್‌ಗಳನ್ನು ತಯಾರಿಸಿ, ಗುಡ್ಡಗಾಡು ಪ್ರದೇಶದಲ್ಲಿ ಹಾಕುತ್ತಿದ್ದಾರೆ.

ಗಂಗಾವತಿ ತಾಲ್ಲೂಕಿನ ಮಲ್ಲಾಪುರ ಗ್ರಾಮ ಸಮೀಪದ ವಾಣಿಭದ್ರಶ್ವೇರ ದೇವಸ್ಥಾನದ ಬಳಿನ ಗುಡ್ಡಗಾಡು ಪ್ರದೇಶದಲ್ಲಿ ಬೀಜದ ಉಂಡೆಗಳನ್ನು ಭೂಮಿಯಲ್ಲಿ ಹಾಕುತ್ತಿರುವ ಸಮಾನ ಮನಸ್ಕರ ತಂಡ.
ಗಂಗಾವತಿ ತಾಲ್ಲೂಕಿನ ಮಲ್ಲಾಪುರ ಗ್ರಾಮ ಸಮೀಪದ ವಾಣಿಭದ್ರಶ್ವೇರ ದೇವಸ್ಥಾನದ ಬಳಿನ ಗುಡ್ಡಗಾಡು ಪ್ರದೇಶದಲ್ಲಿ ಬೀಜದ ಉಂಡೆಗಳನ್ನು ಭೂಮಿಯಲ್ಲಿ ಹಾಕುತ್ತಿರುವ ಸಮಾನ ಮನಸ್ಕರ ತಂಡ.
2 ಸಾವಿರ ಬೀಜಗಳ ಬಿತ್ತನೆ ದಟ್ಟಕಾಡು ನಿರ್ಮಾಣದ ಗುರಿ ಪ್ರತಿ ಭಾನುವಾರ ಸಮಾಜಮುಖಿ ಕಾರ್ಯ
ಲೀವ್ ವೀಥ್ ಹ್ಯುಮಾನಿಟಿ ಟ್ರಸ್ಟ್ ಹಾಗೂ ಕಿಷ್ಕಿಂದ ಯುವ ಚಾರಣ ಬಳಗ ಪರಿಸರ ಉಳಿವಿನ ಜತೆಗೆ ಹಲವು ಸಮಾಜಮುಖಿ ಕಾರ್ಯಗಳು ಮಾಡುತ್ತಿದ್ದು ಎಲ್ಲರೂ ತಮ್ಮ ಹೊಲ ಖಾಲಿ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡಬೇಕು.
ಮಂಜುನಾಥ ಮಸ್ಕಿ ಸದಸ್ಯ ಲೀವ್ ವಿಥ್ ಹ್ಯುಮಾನಿಟಿ ಟ್ರಸ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT