ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಾಯಂದಿರ ಮರಣ ತಪ್ಪಿಸಲು ಕ್ರಮವಹಿಸಿ: ಕೊಪ್ಪಳ ಜಿಲ್ಲಾಧಿಕಾರಿ

ಹೆರಿಗೆ ಸಮಯದಲ್ಲಿ ಜಾಗೃತಿ ವಹಿಸುವಂತೆ ಜಿಲ್ಲಾಧಿಕಾರಿ ನಲಿನ್‌ ಅತುಲ್‌ ಸಲಹೆ
Published 8 ಡಿಸೆಂಬರ್ 2023, 16:13 IST
Last Updated 8 ಡಿಸೆಂಬರ್ 2023, 16:13 IST
ಅಕ್ಷರ ಗಾತ್ರ

ಕೊಪ್ಪಳ: ‘ಹೆರಿಗೆ ಸಮಯದಲ್ಲಿ ಅಧಿಕ ರಕ್ತಸ್ರಾವ, ರಕ್ತದೊತ್ತಡದ ಏರಿಳಿತದ ಸಮಸ್ಯೆಗಳಿಂದ ಗರ್ಭಿಣಿಯರು ಮರಣ ಹೊಂದುತ್ತಾರೆ. ಇದನ್ನು ತಪ್ಪಿಸಲು ಅಗತ್ಯ ವೈದ್ಯಕೀಯ ವ್ಯವಸ್ಥೆ ಸಿದ್ಧಪಡಿಸಿಕೊಳ್ಳಬೇಕು. ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಅಗತ್ಯವಿದ್ದಲ್ಲಿ ಸುಸಜ್ಜಿತ ಸೌಲಭ್ಯ ಹೊಂದಿರುವ ಆಸ್ಪತ್ರೆಗೆ ಶಿಫಾರಸು ಮಾಡಬೇಕು’ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್‌ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಆರೋಗ್ಯ ಕಾರ್ಯಕ್ರಮಗಳ ಜಿಲ್ಲಾ ಮಟ್ಟದ ಸಮನ್ವಯ ಹಾಗೂ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ‘ತುರ್ತು ಸಂದರ್ಭದಲ್ಲಿ ಮಹಿಳೆಯರನ್ನು ಕಿಮ್ಸ್‌ ಅಥವಾ ಹತ್ತಿರದ ಉತ್ತಮ ವೈದ್ಯಕೀಯ ಸೌಲಭ್ಯ ಹೊಂದಿರುವ ಆಸ್ಪತ್ರೆಗೆ ತೆರಳುವಂತೆ ಕುಟುಂಬದವರಿಗೆ ಹೇಳಬೇಕು’ ಎಂದರು.

‘ಗರ್ಭಿಣಿಯ ಹಿಂದಿನ ಹೆರಿಗೆಗಳು ಹಾಗೂ ಪ್ರಸ್ತುತ ಗರ್ಭ ಧರಿಸಿದ ಸಂದರ್ಭದಲ್ಲಿನ ವೈದ್ಯಕೀಯ ಇತಿಹಾಸದ ದಾಖಲೆಗಳನ್ನು ಪರಿಶೀಲಿಸಿ ಅದಕ್ಕೆ ತಕ್ಕಂತೆ ಮಹಿಳೆಯ ಹೆರಿಗೆಗೆ ಬೇಕಾದ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಬೇಕು’ ಎಂದರು.

ರೇಬಿಸ್ ನಿಯಂತ್ರಣ ಕಾರ್ಯಕ್ರಮದ ಕುರಿತು ಮಾತನಾಡಿ ‘ಜಿಲ್ಲೆಯಲ್ಲಿ ಬೀದಿನಾಯಿಗಳಿಂದ ಕಡಿತಕ್ಕೆ ಒಳಗಾಗಿ ಅದರಿಂದ ರೇಬಿಸ್ ರೋಗಕ್ಕೆ ತುತ್ತಾದವರಿಗೆ ಸರ್ಕಾರ ನಿಗದಿಪಡಿಸಿದ ಪರಿಹಾರ ನೀಡಬೇಕು. ನಾಯಿ ಕಡಿದರೂ ಕೂಡ ಅವರಿಗೆ ಪರಿಹಾರ ನೀಡಬೇಕು. ಪಶು ಸೇವಾ ಮತ್ತು ಪಶು ವೈದ್ಯಕೀಯ ಇಲಾಖೆ, ರೇಬಿಸ್ ನಿಯಂತ್ರಣ ಘಟಕ ಹಾಗೂ ಸ್ಥಳೀಯ ಸಂಸ್ಥೆಗಳು ಒಟ್ಟಾಗಿ ಜಿಲ್ಲೆಯಲ್ಲಿರುವ ಬೀದಿನಾಯಿಗಳ ಸಮೀಕ್ಷೆ ನಡೆಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆಯ, ಡಿಎಚ್‌ಒ ಡಾ. ಲಿಂಗರಾಜು ಟಿ. ಆರ್‌ಸಿಎಚ್ ಅಧಿಕಾರಿ ಡಾ.ಪ್ರಕಾಶ, ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ ಎಂ.ಎಚ್., ಡಿಟಿಒ ಡಾ.ಶಶಿಧರ, ಡಿಎಲ್‌ಒ ಡಾ.ಪ್ರಕಾಶ ಕೆ., ಗಂಗಾವತಿ ಉಪ ವಿಭಾಗ ಆಸ್ಪತ್ರೆಯ ಡಾ.ಈಶ್ವರ ಸವಡಿ ಪಾಲ್ಗೊಂಡಿದ್ದರು.

Cut-off box - ತಹಶೀಲ್ದಾರ್‌ ನೇತೃತ್ವದಲ್ಲಿ ಸಭೆಗೆ ಸೂಚನೆ ಕೊಪ್ಪಳ: ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್‌ ನೇತೃತ್ವದಲ್ಲಿ ಸಭೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ‘ಪುರಸಭೆ ಪಟ್ಟಣ ಪಂಚಾಯಿತಿ ಅಡಿಯಲ್ಲಿ ಬರುವ ಕಿರಾಣಿ ಅಂಗಡಿ ಪಾನ್‌ಶಾಪ್ ಹೋಟೆಲ್ ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಕೊಟ್ಟಾ ಕಾಯ್ದೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ನಿಷೇಧಿತ ಪ್ರದೇಶ ಎಂಬ ನಾಮಫಲಕ ಹಾಕುವಂತೆ ನೋಡಿಕೊಳ್ಳಬೇಕು. ಕುಷ್ಠರೋಗ ನಿಯಂತ್ರಣದ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT