ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ| ಕೃಷಿ ಕಾಲೇಜು ಆರಂಭಕ್ಕೆ ಪ್ರಸ್ತಾವ

ಸರ್ಕಾರಕ್ಕೆ ರಾಯಚೂರು ಕೃಷಿ ವಿವಿ ಪತ್ರ
Last Updated 13 ಡಿಸೆಂಬರ್ 2019, 19:46 IST
ಅಕ್ಷರ ಗಾತ್ರ

ಕೊಪ್ಪಳ: ರಾಜ್ಯದ ಭತ್ತದ ಕಣಜವೆಂದೇ ಹೆಸರಾದ ಗಂಗಾವತಿ ತಾಲ್ಲೂಕಿನಲ್ಲಿ ಕೃಷಿ ಕಾಲೇಜು ಆರಂಭಿಸುವಂತೆ ರಾಯಚೂರು ಕೃಷಿ ವಿವಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.ಉನ್ನತ ಇಲಾಖೆ ಅಧಿಕಾರಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದ್ದು, ಶೀಘ್ರ ಕೃಷಿ ಕಾಲೇಜು ಸ್ಥಾಪನೆ ಆಗಲಿದೆ ಎಂಬ ಆಶಾಭಾವನೆ ಜನರಲ್ಲಿ ಮೂಡಿದೆ.

ಅತಿ ಹೆಚ್ಚುರೈಸ್ ಮಿಲ್, ಗುಣಮಟ್ಟದ ಅಕ್ಕಿ ಬೆಳೆದು ದೇಶ, ವಿದೇಶಕ್ಕೆ ರಫ್ತು ಮಾಡುವ ಮೂಲಕ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಇಲ್ಲಿನ ಕೃಷಿ ವಿಸ್ತರಣಾ ಕೇಂದ್ರ 1956ರಲ್ಲಿಯೇ ಸ್ಥಾಪನೆಯಾಗುವ ಮೂಲಕ ಗಂಗಾವತಿ, ಕಾರಟಗಿ, ಮುನಿರಾಬಾದ್, ಬಳ್ಳಾರಿ ಜಿಲ್ಲೆಯ ಶಿರಗುಪ್ಪ, ಹೊಸಪೇಟೆ, ಕಂಪ್ಲಿ, ಕುರಗೋಡು, ರಾಯಚೂರು ಜಿಲ್ಲೆಯ ಮಸ್ಕಿ, ಸಿಂಧನೂರು ಭಾಗದ ರೈತರಿಗೆ ವಿವಿಧ ರೀತಿಯಲ್ಲಿ ನೆರವಾಗುವ ಮೂಲಕ ಕೃಷಿ ಕ್ಷೇತ್ರದಲ್ಲಿ ತನ್ನದೇ ಆದ ಹೆಗ್ಗಳಿಕೆಯನ್ನು ಹೊಂದಿದೆ.

ಕೆಂಪು ಮತ್ತು ಕಪ್ಪು ಮಣ್ಣಿನ ಪ್ರದೇಶವನ್ನು ಹೊಂದಿರುವ ಶುಷ್ಕ ಹವೆ ಹೊಂದಿರುವ ತಾಲ್ಲೂಕಿನಲ್ಲಿ ತುಂಗಭದ್ರಾ ಜಲಾಶಯದ ನೀರನ್ನು ಪಡೆದು ನೀರಾವರಿ ಮೂಲಕ ವಿವಿಧ ಬೆಳೆಗಳನ್ನು ಈ ಭಾಗದಲ್ಲಿ ಬೆಳೆಯುತ್ತಿದ್ದಾರೆ. ರೈತರಿಗೆ ಇಲ್ಲಿ ಕೃಷಿ ಸಂಶೋಧನಾ ಸಂಸ್ಥೆ, ವಿಸ್ತರಣಾ ಕೇಂದ್ರ ಬೆನ್ನೆಲುಬಾಗಿ ನಿಂತಿದ್ದು, ಅನೇಕ ಸಂಶೋಧನೆ, ಸಲಹೆ ನೀಡುವ ಮೂಲಕ ರೈತಸ್ನೇಹಿಯಾಗಿ ರೂಪಗೊಂಡಿದೆ.

ಇಲ್ಲಿ ಕೃಷಿ ಕಾಲೇಜು ಸ್ಥಾಪಿಸಿದರೆ ಈ ಭಾಗದ ರೈತರ ಮತ್ತು ಅವರ ಅವಲಂಬಿತರಿಗೆ ಇನ್ನೂ ಹೆಚ್ಚಿನ ಅವಕಾಶ ದೊರೆಯುವ ಆಶಯದೊಂದಿದೆ ಕಾಲೇಜು ಆರಂಭಕ್ಕೆ ಮನವಿ ಮಾಡಲಾಗಿದೆ. ಇಲ್ಲಿ 284 ಎಕರೆ ಪ್ರದೇಶದಲ್ಲಿ ಕೃಷಿ ಸಂಶೋಧನಾ ಕೇಂದ್ರವಿದ್ದು, ಇಲ್ಲಿಯೇ ಕಾಲೇಜು ಆರಂಭಿಸಿದರೆ ಸೂಕ್ತ ಎನ್ನಲಾಗುತ್ತದೆ. ಕಾಲೇಜಿಗೆ ₹ 112 ಕೋಟಿ ಅನುದಾನಕ್ಕೆ ಮನವಿ ಮಾಡಲಾಗಿದೆ.

ಈ ಹಿಂದೆ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇಲ್ಲಿ ಕೃಷಿ ಕಾಲೇಜಿಗೆ ₹ 46.50 ಕೋಟಿ ಹಣ ಮಂಜೂರು ಮಾಡಿದ್ದರು. ಅಲ್ಲದೆ ಶಾಸಕ ಪರಣ್ಣ ಮುನವಳ್ಳಿ ಕೂಡಾ ಕಾಲೇಜುನಿರ್ಮಾಣಕ್ಕೆ ಶೀಘ್ರಶಂಕುಸ್ಥಾಪನೆ ನೆರೆವೇರಿಸಲಾಗುವುದುಎಂದು ಭರವಸೆ ನೀಡಿದ್ದರು. ಆದರೆ ನಂತರ ಬಂದ ಸರ್ಕಾರಗಳು ಈ ಪ್ರಸ್ತಾವಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಇದ್ದುದರಿಂದ ಕಾಲೇಜು ಸ್ಥಾಪನೆ ಕನಸಾಗಿಯೇ ಉಳಿದಿತ್ತು.

ಶೀಘ್ರ ಕಾಲೇಜು ಆರಂಭಿಸಬೇಕು ಎಂಬ ಈ ಭಾಗದ ಜನರು ಬೇಡಿಕೆ ಮಂಡಿಸಿದ್ದಾರೆ.ಈಗ ಮತ್ತೆ ಸರ್ಕಾರಕ್ಕೆ ಹೊಸ ಪ್ರಸ್ತಾವವನ್ನು ಕೃಷಿ ವಿವಿ ಸಲ್ಲಿಸಿದೆ. ಈ ಭಾಗದಲ್ಲಿ ಪ್ರಮುಖ ಬೆಳೆ ಭತ್ತ, ಸಜ್ಜೆ, ರಾಗಿ, ಶೇಂಗಾ, ಮುಸುಕಿನಜೋಳ, ಶೇಂಗಾ, ಕಬ್ಬು, ಹತ್ತಿ ಬೆಳೆದು ಸಾಧನೆ ಮಾಡಿದ್ದಾರೆ. ಹೊಸ, ಹೊಸ ಪ್ರಯೋಗಗಳನ್ನು ಪ್ರಗತಿಪರ ರೈತರು ಮಾಡಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

ಕೃಷಿ ಕ್ಷೇತ್ರ ಬಗ್ಗೆ ಅಪಾರ ದೇಶೀ ಜ್ಞಾನ ಹೊಂದಿರುವ ಇಲ್ಲಿನ ರೈತರಿಗೆ ಕೃಷಿ ಕಾಲೇಜು ಆರಂಭಿಸುವುದರಿಂದ ಅವಕಾಶಗಳು ಸೃಷ್ಟಿಯಾಗುತ್ತವೆ ಅಲ್ಲದೆ, ಆಧುನಿಕ, ವೈಜ್ಞಾನಿಕ ಕೃಷಿಗೆ ಹೇರಳ ಮಾನವ ಸಂಪನ್ಮೂಲವನ್ನು ತಯಾರಿಸುವ ಹೊಣೆ ಕಾಲೇಜಿನ ಮೂಲಕ ಆಗುತ್ತದೆ ಎಂಬ ಭರವಸೆಯನ್ನು ಇಲ್ಲಿನ ರೈತರು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT