ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಏಡ್ಸ್‌ಗೆ ಚಿಕಿತ್ಸೆ ಪಡೆಯಲು ಹಿಂಜರಿಕೆ ಬೇಡ’

ಗಂಗಾವತಿ: ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಬೃಹತ್ ಜಾಗೃತಿ ಜಾಥಾ ಕಾರ್ಯಕ್ರಮ
Last Updated 6 ಡಿಸೆಂಬರ್ 2019, 11:20 IST
ಅಕ್ಷರ ಗಾತ್ರ

ಗಂಗಾವತಿ: ‘ನಗರದಲ್ಲಿ ಏಡ್ಸ್‌ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬೃಹತ್‌ ಜಾಥಾ ಹಮ್ಮಿಕೊಂಡಿದ್ದು, ಏಡ್ಸ್‌ ರೋಗಿಗಳು ಚಿಕಿತ್ಸೆ ಪಡೆಯಲು ಯಾವುದೇ ಹಿಂಜರಿಕೆ ಪಡಬಾರದು’ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ಹೇಳಿದರು.

ನಗರದ ಜೂನಿಯರ್‌ ಕಾಲೇಜು ಆವರಣದಲ್ಲಿ ಗುರುವಾರ ಮುಂಜಾನೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ನಿಯಂತ್ರಣ ಘಟಕ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮತ್ತು ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆದ ಬೃಹತ್‌ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಏಡ್ಸ್‌ ಕಾಯಿಲೆಗೆ ಗಂಗಾವತಿ ನಗರದಲ್ಲಿ 3,200 ಜನ ಚಿಕಿತ್ಸೆ ಪಡೆಯುತ್ತಿದ್ದು, ಕೊಪ್ಪಳದಲ್ಲಿ 2,700 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಸಾಕಷ್ಟು ಜನ ಏಡ್ಸ್‌ನಿಂದ ಬಳಲುತ್ತಿದ್ದು, ಅವರು ಚಿಕಿತ್ಸೆ ಪಡೆಯಲು ಮುಂದೆ ಬರುತ್ತಿಲ್ಲ. ಯಾವುದೇ ಹಿಂಜರಿಕೆ ಪಡದೇ ಚಿಕಿತ್ಸೆ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಏಡ್ಸ್ ರೋಗ ಕುರಿತು ಅರಿವು ಮೂಡಿಸುವ ಸಲುವಾಗಿ ಈ ಬೃಹತ್‌ ಜಾಥಾ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ‘ನಗರದ ಜನರಿಗೆ ಅರಿವು ಮೂಡಿಸುವ ಸಲುವಾಗಿ ಏಡ್ಸ್‌ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಮಾರಕವಾದ ಏಡ್ಸ್‌ ರೋಗದ ಬಗ್ಗೆ ಜನರಿಗೆ ತಿಳುವಳಿಕೆ ಬರಬೇಕು. ಮೊದಲಿಗಿಂತ ಈಗ ನಗರದಲ್ಲಿ ಏಡ್ಸ್‌ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಈ ಏಡ್ಸ್‌ ಸೋಂಕಿನಿಂದ ಇತರ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ದಿನವನ್ನು ಆಚರಣೆ ಮಾಡುವುದಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನಿಗೂ ಈ ಬಗ್ಗೆ ತಿಳುವಳಿಕೆ ನೀಡುವ ಅಗತ್ಯವಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥರೆಡ್ಡಿ ಮಾತನಾಡಿ, ಏಡ್ಸ್‌ ರೋಗ ಬಾರದಂತೆ ಪ್ರತಿಯೊಬ್ಬರು ಮುನ್ನೆಚ್ಚರಿಕೆ ವಹಿಸಬೇಕು. ಏಡ್ಸ್‌ ರೋಗಿಗಳನ್ನು ಕಡೆಗಣಿಸದೆ ಸಹೋದರರಂತೆ ನೋಡಬೇಕು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಏಡ್ಸ್‌ ರೋಗವನ್ನ ಸಂಪೂರ್ಣ ನಿರ್ಮೂಲನೆ ಮಾಡುವ ಶಪಥವನ್ನು ನಾವೆಲ್ಲರೂ ಮಾಡೋಣ ಎಂದರು.

ನಂತರ ಜೂನಿಯರ್‌ ಕಾಲೇಜಿನಿಂದ ಅಂಬೇಡ್ಕರ್‌ ಸರ್ಕಲ್‌, ಕಲ್ಮಠ, ಬಸವಣ್ಣ ಸರ್ಕಲ್‌, ಗಾಂಧಿವೃತ್ತ, ಶ್ರೀಕೃಷ್ಣದೇವರಾಯ ವೃತ್ತ ಸೇರಿದಂತೆ ಪ್ರಮುಖ ರಸ್ತೆಯಲ್ಲಿ ಬೃಹತ್‌ ಜಾಥಾ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಜಾಥಾದಲ್ಲಿ ವಿಶೇಷವಾಗಿ ಶಿರಸಿಯ ಶಾಂತರಾಮ್‌ ಅವರ ಯಕ್ಷಗಾನ ತಂಡ, ತಂಬ್ರಹಳ್ಳಿಯ ನಂದಿಕೋಲು ಮತ್ತು ಡೊಳ್ಳು ಕುಣಿತ, ಕುಷ್ಟಗಿಯ ಗೀಗಿ ಪದ ಜನ ಜಾಗೃತ ಕಲಾತಂಡ,‌ ಗಂಗಾವತಿಯ ಬ್ಯಾಂಡ್‌ ಸೆಟ್ ಮತ್ತು ತಾಷ ವಾದ್ಯ ತಂಡ, ತುಮಕೂರಿನ ಗೊಂಬೆ ಕುಣಿತ, ಸಿದ್ದಾಪುರದ ರಾಮಾಯಣ ವೇಷಗಾರರ ತಂಡ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ನ್ಯಾಯಾಧೀಶರಾದ ರೇಣುಕಾ ಕುಲಕರ್ಣಿ, ಜಿ.ಅನಿತಾ, ಆರ್.ಎಂ.ನದಾಫ್‌, ಎಚ್.ಡಿ.ಗಾಯತ್ರಿ, ಉಪವಿಭಾಗ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಈಶ್ವರ ಸವಡಿ, ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ರೈತಪರ ಹೋರಾಟಗಾರ ತಿಪ್ಪೇರುದ್ರಸ್ವಾಮಿ, ಎಪಿಎಂಸಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT