ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಾಚಲಪತಿ ರಥೋತ್ಸವಕ್ಕೆ ಸಕಲ ಸಿದ್ಧತೆ

ಬಿಡಾರ ಹೂಡಿದ ತೇರಿನ ಕೆಲಸಗಾರರಿಂದ ಹಗಲಿರುಳು ಶ್ರಮ
ಮೆಹಬೂಬಹುಸೇನ
Published 31 ಮಾರ್ಚ್ 2024, 6:02 IST
Last Updated 31 ಮಾರ್ಚ್ 2024, 6:02 IST
ಅಕ್ಷರ ಗಾತ್ರ

ಕನಕಗಿರಿ: ದಕ್ಷಿಣ ಭಾರತದ ಅತಿ ಎತ್ತರದ ತೇರು ಎಂಬ ಖ್ಯಾತಿ ಗಳಿಸಿರುವ ಇಲ್ಲಿನ ಕನಕಾಚಲಪತಿ ರಥೋತ್ಸವ ಏಪ್ರಿಲ್ 1ರಂದು ನಡೆಯಲಿದ್ದು ಅಧಿಕಾರಿಗಳು ಹಾಗೂ ತೇರಿನ‌ ಕೆಲಸಗಾರರು ಹಗಲಿರುಳು ಎನ್ನದೆ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ದೇವಸ್ಥಾನ ಸಮಿತಿಯ ಆಡಳಿತಾಧಿಕಾರಿಯೂ ಆಗಿರುವ ತಹಶೀಲ್ದಾರ್ ವಿಶ್ವನಾಥ ಮುರುಡಿ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆದಿದ್ದು, ಜಾತ್ರಾ ಮಹೋತ್ಸವ ಯಶಸ್ವಿಗೆ ಶ್ರಮ‌ ವಹಿಸುತ್ತಿದ್ದಾರೆ.

ರಾಜ್ಯದಲ್ಲಿ ವಿಶಿಷ್ಟ ಎನ್ನಿಸಿರುವ ಗರುಡೋತ್ಸವ ಭಾನುವಾರ ನಸುಕಿನ ಜಾವ ನಡೆಯಲಿದ್ದು ಭಾಗವಹಿಸುವ ಭಕ್ತರಿಗೆ ಪ್ರಸಾದ‌ ವಿತರಿಸಲು 10 ಕ್ವಿಂಟಲ್ ಗುರುಡನ ಬುತ್ತಿ (ಪ್ರಸಾದ) ತಯಾರಿಸಲಾಗಿದೆ. ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ ಇದ್ದು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳು ವಿವಿಧ ಕೆಲಸದಲ್ಲಿ ತಲ್ಲೀನರಾಗಿದ್ದಾರೆ.

‘ದೇವಸ್ಥಾನಕ್ಕೆ ಶಾಶ್ವತ ಸೇವಾ ಭಕ್ತರ ವೃಂದ ಇದ್ದು ಅಂಥ ಭಕ್ತರಿಗೆ ಅಂಚೆ ಮೂಲಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ರವಾನಿಸಲಾಗಿದೆ. ರಾಜ್ಯದ ಮುಜರಾಯಿ ಇಲಾಖೆಯ ನೂರಾರು ದೇಗುಲಗಳಿಗೆ ರಥೋತ್ಸವದ ಕರಪತ್ರಗಳನ್ನು ಕಳಿಸಲಾಗಿದೆ’ ಎಂದು ವಿಶ್ವನಾಥ ಮುರುಡಿ ತಿಳಿಸಿದರು.

ಐದು ಪ್ರಕಾರದ ಚಟ್ಟಗಳನ್ನು ಕಟ್ಟಲಾಗಿದ್ದು ಗೊಂಬೆಗಳು, ತೆಂಗಿನ ಗರಿ, ತಳಿರು ತೋರಣಗಳಿಂದ ಶೃಂಗಾರಿಸಲಾಗುತ್ತಿದೆ.
ಭಕ್ತರು ತಂಗುವ ಜಾಗದಲ್ಲಿ ಕುಡಿಯುವ ನೀರು ಪೊರೈಕೆಗೆ ತಾಲ್ಲೂಕು ಪಂಚಾಯಿತಿಯ 11 ಹಾಗೂ ಪಟ್ಟಣ ಪಂಚಾಯಿತಿಯ 3 ಟ್ಯಾಂಕರ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕನಕಾಚಲಪತಿ ಹಾಗೂ ಇತರೆ ದೇಗುಲ ಹಾಗೂ ದ್ವಾರ ಬಾಗಿಲನ್ನು ಸುಣ್ಣಬಣ್ಣಗಳಿಂದ ಶೃಂಗರಿಸಲಾಗಿದ್ದು ಜಗಮಗಿಸುವ ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿದೆ.

‘ಪುಷ್ಕರಣಿ ಹತ್ತಿರ ಹರಕೆಹೊತ್ತ ಭಕ್ತರು ತಲೆಗೂದಲು ಕೊಡುವ ಜಾಗದಲ್ಲಿ ಸ್ನಾನ ಹಾಗೂ ತಾತ್ಕಾಲಿಕ ಶೌಚಾಲಯದ ಸೌಲಭ್ಯ ಕಲ್ಪಿಸಲಾಗಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತೇರು ಪರಿಶೀಲಿಸಿದ್ದು ಶುಕ್ರವಾರ ಅರ್ಹತಾ ಪ್ರಮಾಣ ಪತ್ರ ನೀಡಿದ್ದಾರೆ’ ಎಂದು ಮುರುಡಿ ಅವರು ತಿಳಿಸಿದರು.

‘ತೇರಿನ ಗಾಲಿಯಲ್ಲಿ ಹುಳುಕು ಕಂಡ ಬಂದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಅದನ್ನು ಸರಿಪಡಿಸಿದ್ದಾರೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ’ ಎಂದು ಅವರು ಮಾಹಿತಿ ನೀಡಿದರು.

‘ಶತಮಾನ ಕಂಡಿರುವ ತೇರಿನ ಗಡ್ಡಿಗೆ ಬಣ್ಣ ಸಹ ಹಚ್ಚಲಾಗಿದೆ. ಅಲಂಕಾರ ಕೆಲಸ ಬಾಕಿ ಇದೆ. ಭಕ್ತರು ಬಿಡಾರ ಹೂಡುವ ಸ್ಥಳ, ಅನ್ನ ಸಂತರ್ಪಣೆ, ರಾಜಬೀದಿ, ಪುಷ್ಕರಣಿ ಹಾಗೂ ಇತರೆ ದೇಗುಲದ ಪರಿಸರದಲ್ಲಿ ಸ್ವಚ್ಛತೆಗೆ ಗಮನ ಹರಿಸಲಾಗಿದೆ. ಪಟ್ಟಣ ಪಂಚಾಯಿತಿ ವತಿಯಿಂದ ಕುಡಿಯುವ ನೀರಿಗಾಗಿ 3 ಟ್ಯಾಂಕರ್ ಬಿಡಲಾಗಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ತಿಳಿಸಿದರು.

ಪ್ರತಿ ವರ್ಷ ಉತ್ತುತ್ತಿಗಿಂತ ಬಾಳೆ ಹಣ್ಣನ್ನು ತೇರಿಗೆ ಎಸೆಯಲಾಗುತ್ತಿದ್ದು, ಭಕ್ತರ ತಲೆ, ಕಣ್ಣಿಗೆ ಬಾಳೆ ಹಣ್ಣಿನ ಏಟು ಬಿದ್ದಿವೆ. ಹೀಗಾಗಿ ಬಾಳೆ ಹಣ್ಣು ಬದಲಾಗಿ ಉತ್ತತ್ತಿ ಎಸೆಯುವುದು ಉತ್ತಮ. ಇದು ನನ್ನ ಮನವಿಯಾಗಿದೆ.
ವಿಶ್ವನಾಥ ಮುರುಡಿ, ದೇಗುಲ ಸಮಿತಿ ಆಡಳಿತಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT