ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ್ಮಸ್ಥಳ ವಿವಾದ: ತಜ್ಞರ ಅಸಮಾಧಾನ

ಕೊಪ್ಪಳದ ಕಿಷ್ಕಿಂದಾ ಪ್ರದೇಶದ ಅಂಜನಾದ್ರಿಯೇ ಜನ್ಮಭೂಮಿ: ಇತಿಹಾಸಕಾರರ ಪ್ರತಿಪಾದನೆ
Last Updated 12 ಏಪ್ರಿಲ್ 2021, 7:14 IST
ಅಕ್ಷರ ಗಾತ್ರ

ಕೊಪ್ಪಳ: ಆನೆಗೊಂದಿ ಸಮೀಪದ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ ಎಂದು ಜಿಲ್ಲೆಯ ಮತ್ತು ದೇಶದ ಖ್ಯಾತ ಇತಿಹಾಸ ತಜ್ಞರು ವಾದ ಮಂಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಎದ್ದಿರುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದು ಸ್ಥಳದ ಕುರಿತು ಇತಿಹಾಸ ರಚಿಸಲು ಶಾಸನ, ಗ್ರಂಥ, ಪರಿಸರ, ಸ್ಮಾರಕಗಳು ಹಾಗೂ ಜಾನಪದ ಸಾಹಿತ್ಯ ಪರಿಗಣಿಸಲಾಗಿರುತ್ತದೆ. ‘ಈಗ ಹನುಮ ಜನಿಸಿದ್ದು ತಿರುಪತಿಯ ಅಂಜನಾದ್ರಿ ಪರ್ವತದಲ್ಲಿ, ಗೋಕರ್ಣದಲ್ಲಿ ಎಂಬ ಅನಪೇಕ್ಷಿತ ಹೇಳಿಕೆಗಳನ್ನು ನೀಡಲಾಗುತ್ತಿದೆ. ಇತಿಹಾಸಕ್ಕೆ ಅಪಚಾರ ಸಲ್ಲದು’ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇಲ್ಲಿರುವ ಅಂಜನಾದ್ರಿ, ಹನುಮನಹಳ್ಳಿ, ಕಿಷ್ಕಿಂದಾ ಪರ್ವತ, ವಾಲಿ ಕಿಲ್ಲಾ, ಶಬರಿ ಗುಡ್ಡ, ಸೀತಾ ಮಾತೆಯ ಮಂದಿರ, ರಾಮ-ಲಕ್ಷ್ಮಣರು ಭೇಟಿ ನೀಡಿದ ಕುರುಹು, ವಾಲ್ಮೀಕಿ ರಾಮಾಯಣ, ಶ್ರೀರಾಮ ಚರಿತ ಮಾನಸ ಸೇರಿ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಹುನುಮ ಉದಯಿಸಿದ ನಾಡು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಎಂಬ ನಿರ್ಧಾರಕ್ಕೆ ಬರಲಾಗಿದೆ.

ಆಂಜನಾದ್ರಿ ಪರ್ವತ ಇತ್ತೀಚೆಗೆ ದೇಶ-ವಿದೇಶ ಸೇರಿದಂತೆ ಅಂತರರಾಷ್ಟ್ರೀಯ ಪ್ರವಾಸಿ ಸ್ಥಳವಾಗಿ ಪ್ರಸಿದ್ಧಿಗೆ ಬರುತ್ತಿದೆ. ಇದರ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ಹಣ ವಿನಿಯೋಗಿಸಲು ಸಜ್ಜಾಗಿದೆ. ನಿತ್ಯ 10 ಸಾವಿರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಉತ್ತರ ಭಾರತದ ಆಸ್ತಿಕ ಭಕ್ತರು ದಕ್ಷಿಣ ಭಾರತದ ಪ್ರವಾಸಿ ಸ್ಥಳಗಳಲ್ಲಿ ಅಂಜನಾದ್ರಿಗೆಮೊದಲ ಪ್ರಾಶಸ್ತ್ಯನೀಡುತ್ತಾರೆ.

ಇದು ರಾಮಭಕ್ತ ಹನುಮಂತ ಜನಿಸಿದ ನಾಡು ಎಂದು ರಾಮಾಯಣದ ಕಾಲದಿಂದಲೂ ಇಲ್ಲಿಯವರೆಗೆ ನಂಬಿಕೊಂಡು ಬರಲಾಗಿದೆ. ಭಾರತದಲ್ಲಿ ಹನುಮ ಮಂದಿರ ಇರದ ಊರೇ ಇಲ್ಲ. ಅಷ್ಟೊಂದು ಪ್ರಸಿದ್ಧಿ, ಪ್ರಚಾರ ಪಡೆದ ಈ ದೇವರಿಗೆ ಪೂಜೆಯಲ್ಲಿ ಅಗ್ರಸ್ಥಾನ. ಸ್ವಾಮಿ ಭಕ್ತಿ, ಶಕ್ತಿ, ವೀರತ್ವ, ನೈತಿಕ ನಿಷ್ಠೆಗೆ ಹನುಮ ಆದರ್ಶ. ಅಂಥ ಹನುಮನ ಸ್ಮರಣೆಗೆ ಇಲ್ಲಿಗೆ ಬಂದು ‘ಹನುಮಾನ್ ಚಾಲೀಸಾ’ ಪಠಣ ಮಾಡುವುದು ನಡೆದೇ ಇದೆ.

‘ಆನೆಗೊಂದಿ ಸಮೀಪದ ಅಂಜನಹಳ್ಳಿ, ಹನುಮನಹಳ್ಳಿ, ಅಂಜನಾದ್ರಿ ಹನುಮಂತ ಜನಿಸಿರುವುದಕ್ಕೆ ಇಂದಿಗೂ ಪುರಾವೆ ನೀಡುತ್ತವೆ. ಬ್ರಿಟಿಷ್‌ ಇತಿಹಾಸಕಾರರಿಂದ ಹಿಡಿದು ದೇಶದ ಖ್ಯಾತ ಇತಿಹಾಸ ತಜ್ಞರು ಕಿಷ್ಕಿಂದಾ ಪ್ರದೇಶದ ಅಂಜನಾದ್ರಿಯೇ ಹನುಮಂತನ ಜನ್ಮಸ್ಥಳ ಎಂದು ಸಾರಿದ್ದಾರೆ. ಅಲ್ಲದೆ, ಈ ಭಾಗದಲ್ಲಿ ಅಂಜನಾದೇವಿ, ಆಂಜನೇಯ, ಹನುಮಂತ ಎಂಬ ಹೆಸರು ಇಟ್ಟುಕೊಂಡವರು ಲಕ್ಷ ಸಂಖ್ಯೆಯಲ್ಲಿ ಸಿಗುತ್ತಾರೆ’ ಎನ್ನುತ್ತಾರೆ ಖ್ಯಾತ ಸಾಹಿತಿ ಪ್ರೊ.ಎಚ್‌.ಎಸ್‌.ಪಾಟೀಲ.

ಇಲ್ಲಿಯ ಶಾಸನಗಳ ಕುರಿತು ವ್ಯಾಪಕ ಅಧ್ಯಯನ ಮಾಡಿರುವ ಡಾ.ಶರಣಬಸಪ್ಪ ಕೋಲ್ಕಾರ, ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್‌ ಅವರು ಸಹಮತ ವ್ಯಕ್ತಪಡಿಸುತ್ತಾರೆ. ‘ಹೀಗಾಗಿ ಇದು ಅನಗತ್ಯ ವಿವಾದ. ಇದನ್ನು ಕೈಬಿಟ್ಟು ಜಿಲ್ಲೆಯ ಪ್ರಮುಖ ಪೌರಾಣಿಕ ಸ್ಮಾರಕ ಉಳಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT