ಸೋಮವಾರ, ಸೆಪ್ಟೆಂಬರ್ 27, 2021
20 °C

ಎಪಿಎಂಸಿ ನಿವೇಶನ ಹಂಚಿಕೆಯಲ್ಲಿ ಭಾರಿ ಅವ್ಯವಹಾರ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ: ಇಲ್ಲಿನ ಕೃಷಿ ಉತ್ಪನ್ನ ಉಪಮಾರುಕಟ್ಟೆಯಲ್ಲಿ ನಿವೇಶನಗಳ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದ್ದು, ಪ್ರಾಂಗಣದಲ್ಲಿರುವ ಎಲ್ಲ ನಿವೇಶನಗಳನ್ನು ಬಹುತೇಕ ಅನರ್ಹರಿಗೆ ಹಾಗೂ ಈಗಾಗಲೇ ನಿವೇಶನಗಳಿರುವವರ ಪತ್ನಿ, ಸಹೋದರ, ಮಕ್ಕಳ ಹೆಸರಿಗೆ ಕಡಿಮೆ ಮೊತ್ತಕ್ಕೆ ಹಂಚಿಕೆ ಮಾಡಿದ್ದು ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹಾನಿಯುಂಟಾಗಿದೆ ಎಂದು ರೈತ ಸಂಘ ಮತ್ತು ಹಸಿರುಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ನಜೀರಸಾಬ ಮೂಲಿಮನಿ ಆರೋಪಿಸಿದರು.

ಸೋಮವಾರ ಇಲ್ಲಿಯ ಎಪಿಎಂಸಿ ಆವರಣದಲ್ಲಿ ನಡೆದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಈ ಕುರಿತು ಕ್ರಮ ಕೈಕೊಳ್ಳದಿದ್ದರೆ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಲೈಸೆನ್ಸ್ ಪಡೆದು ಮೂರು ವರ್ಷವಾದ, ವ್ಯಾಪಾರ ವಹಿವಾಟು ಮಾಡುವ, ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಕಟ್ಟುವ ವರ್ತಕರಿಗೆ ನಿವೇಶನ ಹಂಚಿಕೆ ಮಾಡಬೇಕೆಂಬ ನಿಯಮವನ್ನು ಗಾಳಿಗೆ ತೂರಿ ಕೇವಲ ನಿವೇಶನಕ್ಕಾಗಿ ಮಾತ್ರ ಕೆಲವೇ ದಿನಗಳಲ್ಲಿ ಲೈಸೆನ್ಸ್ ಪಡೆದ ವರ್ತಕರಿಗೆ ಕಡಿಮೆ ದರದಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ. ಈಗಾಗಲೇ ಈ ಕುರಿತಂತೆ ಕೃಷಿ ಮಾರಾಟ ಇಲಾಖೆಯ ನಿರ್ದೇಶಕರಿಗೆ ದೂರು ಸಲ್ಲಿಸಲಾಗಿದೆ ಎಂದರು.

ಟೆಂಡರ್ ಕರೆಯದೇ ಕೇವಲ 23 ಅರ್ಜಿ ಬರುವಂತೆ ನೋಡಿಕೊಂಡು ಅವರಿಗೆ ಕಡಿಮೆ ದರದಲ್ಲಿ ನಿವೇಶನ ಹಂಚಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಟೆಂಡರ್ ಕರೆದು ಬೇರೆ ಜಿಲ್ಲೆಗಳ ವರ್ತಕರೂ ಇಲ್ಲಿ ವ್ಯಾಪಾರ ನಡೆಸಿದರೆ ಸ್ಪರ್ಧಾತ್ಮಕ ವ್ಯಾಪಾರ ನಡೆದು ರೈತರಿಗೆ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.

ರೈತ ಸಂಘದ ಹೋಬಳಿ ಘಟಕದ ಅಧ್ಯಕ್ಷ ಶರಣಪ್ಪ ಬಾಚಲಾಪುರ, ಪ್ರಮುಖರಾದ ಮುತ್ತಣ್ಣ ಹಲಕೂಲಿ, ಬಸಪ್ಪ ಅಮ್ಮಣ್ಣವರ, ಮಲ್ಲಪ್ಪ ಹವಾಲ್ದಾರ, ನಾಗಯ್ಯ ಸ್ಥಾವರದ, ಚಂದಪ್ಪ ಹೂಗಾರ, ಮಲ್ಲಯ್ಯ ಸ್ಥಾವರದ, ಯಮನೂರಪ್ಪ ಮಡಿ ವಾಳರ, ಉಮೇಶ ಬಾಚಲಾಪೂರ, ಮುತ್ತಣ್ಣ ಕಟಗಿ, ಶಿವಕಾಂತಪ್ಪ ಹಾದಿಮನಿ, ಅಹ್ಮದ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು